ಇತ್ತೀಚಿನ ಸುದ್ದಿ
ಧರ್ಮಸ್ಥಳ ಠಾಣೆಗೆ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷರ ಭೇಟಿ: ಅಪಹರಣ, ಪೋಕ್ಸೋ ಪ್ರಕರಣ; ಸಕಾಲದಲ್ಲಿ ವರದಿ ಮಾಡಲು ಸೂಚನೆ
15/03/2026, 22:11
ಬೆಳ್ತಂಗಡಿ(reporterkarnataka.com): ಮಕ್ಕಳ ಅಪಹರಣ, ಪೋಕ್ಸೋ, ಬಾಲ್ಯ ವಿವಾಹ ಸೇರಿದಂತೆ ಮಕ್ಕಳ ಹಕ್ಕುಗಳ ಉಲ್ಲಂಘನೆ ವಿಷಯಕ್ಕೆ ಸಂಬಂಧಿತ ಪ್ರಕರಣಗಳನ್ನು ಸಕಾಲದಲ್ಲಿ ವರದಿ ಮಾಡಿಕೊಳ್ಳಲು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ್ ಎಸ್.ಕೋಸಂಬೆ ಸೂಚಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಪೊಲೀಸ್ ಠಾಣೆಗೆ ಭಾನುವಾರ ದಿಢೀರ್ ಭೇಟಿ ನೀಡಿದ ಅವರು, ಮಕ್ಕಳ ನ್ಯಾಯ ( ಮಕ್ಕಳ ರಕ್ಷಣೆ ಮತ್ತು ಪೋಷಣೆ) ಕಾಯ್ದೆ-2015, ಕಲಂ 107 ಹಾಗೂ ಮಕ್ಕಳ ನ್ಯಾಯ ( ಮಕ್ಕಳ ರಕ್ಷಣೆ ಮತ್ತು ಪೋಷಣೆ) ಮಾದರಿ ನಿಯಮ -2016 ರ 8(6) ಹಾಗೂ 86(11) ಅನ್ವಯ ಪದನಿಮಿತ್ತ ಅಧಿಕಾರಿಗಳ ಹೆಸರು, ವಿಳಾಸ, ದೂರವಾಣಿ ಸಂಖ್ಯೆಗಳನ್ನು ಒಳಗೊಂಡಂತೆ ಮಾಹಿತಿ ಫಲಕವನ್ನು ಹಾಗೂ ಮಕ್ಕಳ ಸಹಾಯ ವಾಣಿ ಸಂಖ್ಯೆ 1098 ಶಾಶ್ವತ ಫಲಕದಲ್ಲಿ ತ್ವರಿತವಾಗಿ ಅಳವಡಿಸಬೇಕು ಎಂದು ಆಯೋಗದ ಅಧ್ಯಕ್ಷರು ತಿಳಿಸಿದರು.
ಶಾಲಾ ಕಾಲೇಜುಗಳಲ್ಲಿ ತೆರೆದ ಮನೆ ಕಾರ್ಯಕ್ರಮವನ್ನು ಪ್ರತಿ ಗುರುವಾರ ಕೈಗೊಂಡು, ಮಕ್ಕಳಿಗೆ ಮಕ್ಕಳ ಹಕ್ಕುಗಳ ಸಂಭಂಧಿತ ಕುರಿತು ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಕಾನೂನು ಸಂಘರ್ಷಕ್ಕೆ ಒಳಗಾದ ಮಕ್ಕಳನ್ನು ಜೆಜೆಬಿ ಬೋರ್ಡ್ ಮುಂದೆ ಸಾದರ ಪಡಿಸಲು ಫಾರಂ ನಂ: 1 ಹಾಗೂ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಮಕ್ಕಳನ್ನು ಸಮಾಲೋಚನೆಗೆ
ಕರೆದೊಯ್ದಾಗ ಫಾರಂ:17 ಕಡ್ಡಾಯವಾಗಿ ಭರ್ತಿ ಮಾಡಬೇಕು ಎಂದು ಸೂಚಿಸಿದರು.
ಬಳಿಕ ಮಕ್ಕಳ ವಿಶೇಷ ಪೊಲೀಸ್ ಘಟಕದ ಕಾರ್ಯ ವೈಖರಿಯನ್ನು ಗಮನಿಸಿದ ಅವರು,ತೆರದ ಮನೆ ಕಾರ್ಯಕ್ರಮದ ರಿಜಿಸ್ಟ್ರಾರ್ ಹಾಗೂ ಮಕ್ಕಳ ಪ್ರಕರಣಗಳ ಕುರಿತ ದಾಖಲು ವಹಿಯನ್ನು ಪರಿಶೀಲಿಸಿದರು.
ಈ ವೇಳೆ ಧರ್ಮಸ್ಥಳ ಪೊಲೀಸ್ ಠಾಣೆಯ ಪಿ ಎಸ್ ಐ ಸಮರ್ಥ ಗಾಣಿಗೇರ್ ಹಾಗೂ ಸಿಬ್ಬಂದಿ ಇದ್ದರು.












