ಇತ್ತೀಚಿನ ಸುದ್ದಿ
ಚಿಕ್ಕಮಗಳೂರು: ಕಾಫಿ ತೋಟದ ಇಬ್ಬರು ಮಹಿಳಾ ಕಾರ್ಮಿಕರ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ ದಾಖಲು
09/02/2026, 22:01
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಗೌತಹಳ್ಳಿ ಗ್ರಾಮದಲ್ಲಿ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಮಹಿಳಾ ಕಾರ್ಮಿಕರ ಮೇಲೆ ಚಿರತೆ ಏಕಾಏಕಿ ದಾಳಿ ನಡೆಸಿದ ಘಟನೆ ನಡೆದಿದೆ.
ದಾಳಿಗೆ ಒಳಗಾದ ಇಬ್ಬರೂ ಮಹಿಳೆಯರು ಅಸ್ಸಾಂ ಮೂಲದ ಕಾರ್ಮಿಕರಾಗಿದ್ದು, ತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಚಿರತೆ ದಾಳಿ ಮಾಡಿದೆ. ದಾಳಿಯಿಂದ ಇಬ್ಬರು ಮಹಿಳೆಯರಿಗೆ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಮೂಡಿಗೆರೆ ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿರತೆ ದಾಳಿಯಿಂದ ಗ್ರಾಮಸ್ಥರಲ್ಲಿ ಭೀತಿ ಉಂಟಾಗಿದ್ದು, ಚಿರತೆಯನ್ನು ಕೂಡಲೇ ಸೆರೆ ಹಿಡಿಯುವಂತೆ ಸ್ಥಳೀಯರು ಅರಣ್ಯ ಇಲಾಖೆಯನ್ನು ಆಗ್ರಹಿಸಿದ್ದಾರೆ.
ಈ ಘಟನೆ ಮೂಡಿಗೆರೆ ತಾಲ್ಲೂಕಿನಲ್ಲಿ ಮತ್ತೆ ಚಿರತೆ ಭೀತಿಯನ್ನು ಹೆಚ್ಚಿಸಿದ್ದು, ಕಾರ್ಮಿಕರು ಹಾಗೂ ಗ್ರಾಮಸ್ಥರು ಆತಂಕದಲ್ಲಿದ್ದಾರೆ.












