ಇತ್ತೀಚಿನ ಸುದ್ದಿ
ಚಾರ್ಮಾಡಿ ಘಾಟ್ ನಲ್ಲಿ ಕೆಎಸ್ಸಾರ್ಟಿಸಿ ಬಸ್ ಗಳ ಮುಖಾಮುಖಿ ಡಿಕ್ಕಿ: ಚಾಲಕರಿಗೆ ತೀವ್ರ ಗಾಯ; ಭಾರೀ ಟ್ರಾಫಿಕ್ ಜಾಮ್
07/07/2023, 18:55
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಚಾರ್ಮಾಡಿ ಘಾಟಿಯ ಬಿದಿರುತಳ ಸಮೀಪದ ಕೂಗಳತೆಯ ದೂರದಲ್ಲಿ ಎರಡು ಕೆಎಸ್ ಆರ್ ಟಿ ಸಿ ಬಸ್ ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಎರಡು ಬಸ್ ನ ಚಾಲಕರ ಕಾಲುಗಳಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ.
ಧರ್ಮಸ್ಥಳದಿಂದ ಚಿತ್ರದುರ್ಗಕ್ಕೆ ಸಾಗುತ್ತಿದ್ದ ಬಸ್ ಹುಬ್ಬಳ್ಳಿಯಿಂದ ಧರ್ಮಸ್ಥಳಕ್ಕೆ ಸಾಗುತ್ತಿದ್ದ ಬಸ್ ಗಳು ಇಕ್ಕಟ್ಟಾದ ರಸ್ತೆಯಲ್ಲಿ ಶುಕ್ರವಾರ ಸಂಜೆ ಪರಸ್ಪರ ಮುಖಾಮುಖಿ ಡಿಕ್ಕಿಯಾಗಿ ಅವಘಡ ಸಂಭವಿಸಿದೆ.ಗಾಯಗೊಂಡ ಚಾಲಕರಿಬ್ಬರನ್ನು ಮಂಗಳೂರು ಆಸ್ಪತ್ರೆಗೆ ಸೇರಿಸಲಾಗಿದೆ. ಹಲವು ಮಂದಿ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಬಸ್ ಗಳ ನಡುವಿನ ಡಿಕ್ಕಿಯಿಂದ ಕೊಟ್ಟಿಗೆಹಾರದವರೆಗೂ ವಾಹನಗಳು ಸಾಲುಗಟ್ಟಿ ನಿಂತು ಟ್ರಾಫಿಕ್ ಜಾಮ್ ಉಂಟಾಗಿತ್ತು. ಹಲವು ಪ್ರಯಾಣಿಕರು 10 ಕಿ.ಮೀ ನಡೆದು ಕೊಟ್ಟಿಗೆಹಾರ ಸೇರಿದರು.ಸ್ಥಳಕ್ಕೆ ಬಣಕಲ್ ಸಬ್ ಇನ್ ಸ್ಪೆಕ್ಟರ್ ಜಂಬೂರಾಜ್ ಮಹಾಜನ್,ಹೈವೇ ಪ್ಯಾಟ್ರೋಲ್ ನ ಸಬ್ ಇನ್ ಸ್ಪೆಕ್ಟರ್ ಹೇಮಾ,ಎಎಸೈ ಟಿ.ಕೆ.ಶಶಿ, ಪೊಲೀಸ್ ಸಿಬ್ಬಂದಿಗಳು ಹಾಗೂ ಸಮಾಜ ಸೇವಕ ಮೊಹಮ್ಮದ್ ಆರೀಫ್ ಹಾಗೂ ಸ್ಥಳೀಯರು ಭೇಟಿ ನೀಡಿ ರಸ್ತೆಯಿಂದ ಬಸ್ ಗಳನ್ನು ತೆರವುಗೊಳಿಸಲು ಸಹಕರಿಸಿದರು.ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ಚಾರ್ಮಾಡಿ ಘಾಟಿಯಲ್ಲಿ ತಡೆಗೋಡೆ ಕಾಮಗಾರಿ ಬೇಗನೇ ಮುಗಿಸಲು ಒತ್ತಾಯ: ಚಾರ್ಮಾಡಿ ಘಾಟಿಯ ಅಪಘಾತ ಸ್ಥಳದಲ್ಲಿ 2019 ರಲ್ಲಿ ಭೂಕುಸಿತದಿಂದ ರಸ್ತೆ ಬದಿ ಕುಸಿದಿತ್ತು.ಅಲ್ಲಿ 4 ವರ್ಷವಾದರೂ ಕಾಮಗಾರಿ ಪೂರ್ಣಗೊಳ್ಳದೇ ರಸ್ತೆ ಇಕ್ಕಟ್ಟಾಗಿದೆ.ರಸ್ತೆಯಲ್ಲಿ ದಟ್ಟ ಮಂಜು ಕವಿದಿದ್ದರಿಂದ ಕಾಮಗಾರಿ ಸ್ಥಳ ಕಾಣದೇ ಬಸ್ ಗಳು ಮುಖಾಮುಖಿ ಡಿಕ್ಕಿಯಾಗಿವೆ.ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಚಾರ್ಮಾಡಿ ಘಾಟಿಯಲ್ಲಿ ನಡೆಯುತ್ತಿರುವ ತಡೆಗೋಡೆ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.