ಇತ್ತೀಚಿನ ಸುದ್ದಿ
ಚಾರ್ಮಾಡಿ ಘಾಟ್: ಅಪಘಾತಕ್ಕೀಡಾಗಿ ನಿಂತಿದ್ದ ಕಾರು ಪ್ರಯಾಣಿಕರ ಬೆದರಿಸಿ ನಗ, ನಗದು ಲೂಟಿ: ಪ್ರಕರಣ ದಾಖಲು
05/05/2022, 20:17
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಚಾರ್ಮಾಡಿ ಘಾಟ್ ಅಪಘಾತವಾಗಿದ್ದ ವಾಹನದಲ್ಲಿದ್ದ ಸವಾರರನ್ನು ಬೆದರಿಸಿ ಹಣ, ಉಂಗುರ ಹಾಗೂ ಮೊಬೈಲ್‍ನ್ನು ಕಸಿದುಕೊಂಡು ಹೋಗಿರುವ ಘಟನೆ ನಡೆದಿದ್ದು ಈ ಬಗ್ಗೆ ಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಬೆಂಗಳೂರಿನ ದೇವನಹಳ್ಳಿಯ ಮದುಸೂದನ್ ಎಂಬುವವರು ಬಣಕಲ್ ಠಾಣೆಗೆ ದೂರು ನೀಡಿದ್ದಾರೆ. ಮೇ 3 ರಂದು ದೇವನಹಳ್ಳಿಯಿಂದ ಚಾರ್ಮಾಡಿ ಘಾಟ್ ಮಾರ್ಗವಾಗಿ ಕಾರಿನಲ್ಲಿ ಹೊರಟಿದ್ದು ಚಾರ್ಮಾಡಿ ಘಾಟ್‍ನಲ್ಲಿ ರಾತ್ರಿ 12-30 ರ ಸುಮಾರಿಗೆ ರಸ್ತೆ ಬದಿಯ ತಡೆಗೋಡೆಗೆ ಕಾರು ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದವರಿಗೆ ಸಣ್ಣಪುಣ್ಣ ಗಾಯಗಳಾಗಿದ್ದು ಅಂಬುಲೆನ್ಸ್ ಗೆ ಕರೆ ಮಾಡಲು ನೆಟ್ ವರ್ಕ್ ಇಲ್ಲದೆ ಇರುವುದರಿಂದ ಕಾರಿನಲ್ಲೆ ಕುಳಿತಿದ್ದ ಸಂದರ್ಭದಲ್ಲಿ ಧರ್ಮಸ್ಥಳ ಕಡೆಯಿಂದ ಮೂಡಿಗೆರೆ ಕಡೆಗೆ ಬೈಕ್ ಮತ್ತು ಸ್ಕೂಟರ್ ನಲ್ಲಿ ಬಂದ ಮೂವರು ಯುವಕರ ತಂಡ ಕಾರನ್ನು ಸುತ್ತುವರಿದು 600 ಹಣ, ಮೊಬೈಲ್ ಹಾಗೂ ಉಂಗುರವನ್ನು ಕಸಿದುಕೊಂಡು ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.