ಇತ್ತೀಚಿನ ಸುದ್ದಿ
ಚಾರ್ಲಿ ಅದೊಂದು ದೀರ್ಘ ಭಾವ ಯಾನ ; ಹೇಳಲಾಗದ ಮೌನ !!
14/06/2022, 23:54
ಗಣೇಶ್ ಅದ್ಯಪಾಡಿ, ಮಂಗಳೂರು
9620038356
adyapadyganesh@gmail.com
“ಚೌಕಟ್ಟಿನಲ್ಲಿ ಜೀವನ ಕಟ್ಟಿಕೊಂಡವನಿಗೆ ಹೊರ ಬಂದೆ ಜಗತ್ತು ಇಷ್ಟು ಚಂದ ಅಂತ ಗೊತ್ತಾಗಿದ್ದು”
Life of Love
Not of Years
——–
ಚಾರ್ಲಿ ಎನ್ನುವುದು ಬರಿ ನಾಯಿ ಹೆಸರಲ್ಲ ಅದೊಂದು ಸುಂದರ ಭಾವಯಾನ.
ಹೌದು, 777 ಚಾರ್ಲಿ ಸಿನಿಮಾ ಇಡೀ ಭಾರತದಲ್ಲಿ ತನ್ನ ಅಮೋಘ ಪ್ರದರ್ಶನದಿಂದ ಸಿನಿ ಪ್ರೇಮಿಗಳ ಮನಸ್ಸನ್ನು ಗೆಲ್ಲುತ್ತಿದೆ ಹಾಗೂ ನಾಯಿ ಮತ್ತು ಮನುಷ್ಯನ ನಡುವಿನ ಬಾಂಧವ್ಯದ ಭಾವಸೆಲೆಗೆ ಹೊಸತೊಂದು ಗುರುತನ್ನು ನೀಡುತ್ತಿದೆ.
ಕರಾವಳಿಗರ ಸಿನಿಮಾ ಅಂದ್ರೆ ಅದೇನೊ ಒಂಥರಾ ಅರಿವಿಲ್ಲದೆ ಒಂದು ರೀತಿಯ ಎಕ್ಸೈಟ್‌ಮೆಂಟ್ ಹುಟ್ಟಿ ಬಿಡುತ್ತದೆ. ರಾಜ್ ಬಿ ಶೆಟ್ಟಿ, ರಿಷಬ್ ಹಾಗೂ ರಕ್ಷಿತ್ ಶೆಟ್ಟಿ ಸಿನಿಮಾಗಳು ಅಂದ್ರೆ ಏನೋ ಒಂದು ನಮ್ಮವರ ಸಿನಿಮಾ ಅನ್ನುವ ಭಾವನೆ ಒಂದು ಕಡೆಯಾದರೆ ಏನಾದರೂ ಹೊಸ ತನ ಇರುತ್ತದೆ ಎನ್ನುವ ನಿರೀಕ್ಷೆ ಮತ್ತೊಂದು ಕಡೆ ಇದ್ದೇ ಇರುತ್ತದೆ. ಇದಕ್ಕೆ ಚಾರ್ಲಿ ಸಿನಿಮಾ ಕೂಡ ಮೋಸ ಮಾಡಿಲ್ಲ.
ಬರವಣಿಗೆಯನ್ನು ಜೀವಾಳವಾಗಿರಿಸಿಕೊಂಡು ಪ್ರತಿಯೊಂದು ವಸ್ತುವಿನಂದಲೂ ನಟನೆ ಮಾಡಿಸಿ ಅಲ್ಲೊಂದು ಭಾವನೆಗಳ ಸೃಜಿಸಿ ಪರದೆಯ ಮೇಲೆ ಇಳಿಸುವಂತಹದು ನಿರ್ದೇಶಕನ ಸೃಜನಶೀಲತೆಗೆ ಹಿಡಿದ ಕೈಗನ್ನಡಿ ಎನ್ನಬಹುದು.
ಇದು ಸಿನಿಮಾ ಎನ್ನುವುದಕ್ಕಿಂತಲೂ ಒಂದು ಭಾವನಾತ್ಮಕ ಜರ್ನಿ ಎನ್ನಬಹುದು. ಒಬ್ಬ ಕಲ್ಲು ಮನುಷ್ಯನನ್ನು ಮೂಕ ಪ್ರಾಣಿ ಹೇಗೆ ಕರಗಿಸಿಬಿಡುತ್ತದೆ, ಭಾವನೆಗಳಿಗೆ ಮಾತಿನ ಜ಼ರೂರತ್ತು ಇಲ್ಲ ನಿಸ್ಪ್ರಹ ಮನಸ್ಸು ಇದ್ದರೆ ಎಲ್ಲ ಭಾವನೆಗಳು ವಿನಿಮಯಗೊಳ್ಳುತ್ತದೆ ಎನ್ನುವುದನ್ನು ಸೊಗಸಾಗಿ ತೋರಿಸಿದ್ದಾರೆ. ಹಾಗೆಯೆ ಹಾಸ್ಯದಿಂದ ಆರಂಭವಾಗಿ ಸೂಕ್ಷ್ಮ ಭಾವನೆಗಳ ಸಂಕೋಲೆಯಲ್ಲಿ ಈ ಚಿತ್ರ ಕಟ್ಟಿ ಹಾಕುತ್ತದೆ.
ಮಹಾಭಾರತದ ಎಳೆಯನ್ನು ಹಿಡಿದು ಸೊಗಸಾಗಿ ಚಿತ್ರ ರೂಪಕ್ಕೆ ತಂದು ಅಷ್ಟೆ ಚಂದದಿಂದ ಬೆಳ್ಳಿ ತೆರೆಗೆ ತಂದಿರುವುದು ನಿರ್ದೇಶಕ ಹಾಗೂ ಇಡಿ ತಂಡದ ಸಾಧನೆಯೇ ಸರಿ.
ಪ್ರತಿಯೊಂದು ಫ್ರೇಮಲ್ಲಿ ಕೂಡ ಹೊಸ ಕಾಂಟೆಕ್ಸ್ಟ್‌ಗಳು, ಮೆಟಫರ್‌ಗಳ ಬಳಕೆ ಸೊಗಸಾಗಿತ್ತು, ಬರವಣಿಗೆ ಟೀಮ್‌ಗೆ ಇದಕ್ಕಾಗಿ ಫುಲ್ ಮಾರ್ಕ್ ನೀಡಲೇಬೇಕು.
ಅದೇ ರೀತಿ ಅರವಿಂದ್ ಅವರ ಸಿನಿಮಾಟೊಗ್ರಾಫಿ ಹಾಗೂ ನೊಬಿನ್ ಪೌಲ್ ಸಂಗೀತ ಈ ಸಿನಿಮಾಕ್ಕೆ ಮತ್ತಷ್ಟು ಜೀವವನ್ನು ತುಂಬುತ್ತದೆ. ಅದೇ ರೀತಿ ಬೇರೆ ಬೇರೆ ರೀತಿಯ ಹಾಡುಗಳು ಕೊಂಕಣಿ, ಹಿಂದಿ ಹಾಡುಗಳ ಜತೆಗೆ ಆಯ ಪ್ರದೇಶದ ಸೊಗಡನ್ನು ಪರಿಚಯಿಸಲು ಈ ಸಿನಿಮಾ ಸೋತಿಲ್ಲ.
ಸಿನಿಮಾದ ಆತ್ಮವಾಗಿರುವ ಚಾರ್ಲಿಯ ಭಾವನಗೆಳು ಸೆರೆಯಾದ ರೀತಿ ಸೀದಾ ಹೃದಯಕ್ಕಿಳಿಯುತ್ತದೆ. ನಾಯಿಯೊಂದನ್ನು ಬಳಸಿ ಅದರಿಂದ ಇಷ್ಟೊಂದು ಭಾವನೆಗಳನ್ನು ಬಿತ್ತರಿಸಿದ ತಂಡಕ್ಕೆ ಸಲಾಂ ಅದೇ ರೀತಿ ಅದಕ್ಕೆ ತರಬೇತಿ ನೀಡಿದ ಪ್ರಮೋದ್ ಅವರ ಪರಿಶ್ರಮವೂ ಅರಿವಾಗುತ್ತದೆ.
ರಕ್ಷಿತ್ ಶೆಟ್ಟಿಯವರ ಧರ್ಮ ಪಾತ್ರ ಕೂಡ ಚಾರ್ಲಿಯಷ್ಟೆ ಮುಖ್ಯವಾಗಿದ್ದು ಒಂದಕ್ಕೊಂದು ಬೆಸೆದಿರುವ ಪಾತ್ರಗಳು. ಅದೇ ರೀತಿ ರಾಜ್ ಬಿ. ಶೆಟ್ಟಿ, ದೇಶಪಾಂಡೆ, ಭಾರ್ಗವಿ ನಾರಾಯಣ್ ಅವರಿಂದ ಸಿನಿಮಾಕ್ಕೆ ಮತ್ತಷ್ಟು ಕಸುವು ತುಂಬಿಕೊಂಡಿತು. ಸಂಗೀತಾ ಶೃಂಗೇರಿಯವರ ಪಾತ್ರ ಕೂಡ ಆಕರ್ಷಣೀಯವಾಗಿತ್ತು.
ಒಟ್ಟಿನಲ್ಲಿ ಕಣ್ಣೀರು ಇಳಿಸಿ ಎದೆಗೆ ಇಳಿಯುವ ಒಂದು ಅತ್ಯುತ್ತಮ ಸಿನಿಮಾ ಟಾಕೀಸಿಂದ ಹೊರ ಬಂದ ಮೇಲೂ ಮನಸ್ಸಲ್ಲಿ ಉಳಿದು ಎಲ್ಲಾ ದೃಶ್ಯಗಳು ಮನದ ಮೂಲೆಯಲ್ಲಿ ಓಡುತ್ತಲೇ ಇರುತ್ತದೆ. ಈ ರೀತಿಯ ಸಿನಿಮಾ ಕಟ್ಟಿ ತೆರೆ ಮೇಲಿಟ್ಟ ಕಾಸರಗೋಡಿನ ಕುವರ ಕಿರಣ‌್‌ರಾಜ್ ಕೆ.ಅವರಿಗೆ ಅಭಿನಂದನೆಗಳನ್ನು ಹೇಳಲೇ ಬೇಕು.
ಇನ್ನೂ ಸಿನಿಮಾ ಸ್ವಲ್ಪ ದೀರ್ಘವಾಯಿತು ಅನಿಸಬಹುದು ಹಾಗೂ ಕೆಲವೊಂದು ದೃಶ್ಯಗಳನ್ನು ಒತ್ತಾಯ ಪೂರ್ವಕವಾಗಿ ಹಾಕಿದಂತೆ ಅನಿಸುತ್ತದೆ. ಪ್ರಾಣಿಯ ಬಗ್ಗೆ ಅಸಡ್ಡೆ ಇರುವವರಿಗೆ ಈ ಸಿನಿಮಾ ಅಷ್ಟೇನೂ ಹಿಡಿಸದು ಆದರೆ ಮನಸ್ಸಿಟ್ಟು ನೋಡಿದರೆ ಮನಸ್ಸೂ ಬದಲಾಗಬಹದು. ಸಣ್ಣ ಲಾಜಿಕಲ್ ಎರರ್ ಬಿಟ್ರೆ ಸಿನಿಮಾ ದಲ್ಲಿ ನೆಗೆಟಿವ್ ಅನ್ನುವುದು ಕಾಣಿಸುವುದಿಲ್ಲ. ಚಾರ್ಲಿಯ ಆ ಭಾವಲೋಕದೊಳಗೆ ಮಗ್ನರಾದರೆ ಮತ್ತೆ ಹೊರ ಬರುವುದಂತು ಕಷ್ಟ. ಏನಿದು ಭಾವತೀವ್ರತೆಯ ಜರ್ನಿ ಅಂತ ತಿಳಿಯಬೇಕಂದ್ರೆ ಸಿನಿಮಾ ನೋಡಬೇಕು…