1:19 AM Monday25 - November 2024
ಬ್ರೇಕಿಂಗ್ ನ್ಯೂಸ್
ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಲ್ಲಿ ಕೋಲಾರ ಪ್ರಥಮ: ಜಿಲ್ಲಾಧಿಕಾರಿ ಅಕ್ರಂ ಪಾಷಾಗೆ… ಚನ್ನಪಟ್ಟಣದಲ್ಲಿ ಸೋಲು: ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದು ಧೈರ್ಯ ತುಂಬಿದ ಕಾರ್ಯಕರ್ತ! ಮೂಡಿಗೆರೆ: ಬೆಂಕಿ ಆಕಸ್ಮಿಕದಲ್ಲಿ ಗುಡಿಸಲು ಸಂಪೂರ್ಣ ಭಸ್ಮ; ಬೀದಿಗೆ ಬಿದ್ದ ಬಡ ಕುಟುಂಬ ರಾಜ್ಯ ವಿಧಾನಸಭೆಯ 3 ಕ್ಷೇತ್ರಗಳ ಉಪ ಚುನಾವಣೆ; ಕಾಂಗ್ರೆಸ್ ಭರ್ಜರಿ ಜಯ; ಕೇಸರಿ… ಸಂಡೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣಗೆ ಜಯ: ಬಿಜೆಪಿ ಮೈತ್ರಿಕೂಟಕ್ಕೆ ತೀವ್ರ ಮುಖಭಂಗ ​ ಮಹಾರಾಷ್ಟ್ರ: ಆಡಳಿತಾರೂಢ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ? ಆರೆಸ್ಸೆಸ್ ಮುಖ್ಯಸ್ಥ ಡಾ. ಭಾಗವತ್ ಡಿ. 7ರಂದು ಕಲ್ಲಡ್ಕಕ್ಕೆ: ಶ್ರೀರಾಮ ವಿದ್ಯಾಕೇಂದ್ರ ಕ್ರೀಡೋತ್ಸವದಲ್ಲಿ… ಬೆಂಗಳೂರು ಮತ್ತು ಚೆನ್ನೈಗೆ ಆಸ್ಟ್ರೇಲಿಯನ್ ಡಿಜಿಟೆಕ್ ಟ್ರೇಡ್ ಮಿಷನ್ ಭೇಟಿ ವೈಜ್ಞಾನಿಕತೆ, ವೈಚಾರಿಕತೆ ಇಲ್ಲದ ಶಿಕ್ಷಣದಿಂದ ಮಾನವೀಯ ಮೌಲ್ಯ ಬೆಳೆಸಿಕೊಳ್ಳಲು ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ ನೀರು ಹರಿಸುವ ನಿರ್ಣಯದಿಂದ ನಮ್ಮ ಭಾಗದ ರೈತರಿಗೆ ಅನ್ಯಾಯ: ಮಾಜಿ ಸಚಿವ ನರಸಿಂಹ…

ಇತ್ತೀಚಿನ ಸುದ್ದಿ

ಚಾಮುಂಡೇಶ್ವರಿಗೆ 5 ವರ್ಷಗಳ ಗೃಹಲಕ್ಷ್ಮಿ ಯೋಜನೆಯ ಹಣ 1.18 ಲಕ್ಷ ಸಂದಾಯ: ಸಚಿವೆ ಹೆಬ್ಬಾಳ್ಕರ್ ವೈಯಕ್ತಿಕ ಕೊಡುಗೆ; ಮೊದಲ ಕಂತು ಸಿಎಂ, ಡಿಸಿಎಂ ಪಾವತಿ

28/11/2023, 12:43

ಮೈಸೂರು(reporterkarnataka.com): ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಗೃಹ ಲಕ್ಷ್ಮಿ ಯೋಜನೆಯ ಭರ್ತಿ ಐದು ವರ್ಷಗಳ ಕಂತನ್ನು ಶಾಸಕ ದಿನೇಶ್ ಗೂಳಿಗೌಡ ಅವರು ತಾಯಿ ಚಾಮುಂಡೇಶ್ವರಿಗೆ ಇಂದು ಸಮರ್ಪಿಸಿದರು.


ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪರವಾಗಿ ಶಾಸಕ ದಿನೇಶ್ ಗೂಳಿಗೌಡ ಅವರು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ ನಾಡದೇವತೆ ಚಾಮುಂಡೇಶ್ವರಿ ದೇವಿ ದರ್ಶನ ಪಡೆದು ಹಣದ ಚೆಕ್ ಅನ್ನು ಅರ್ಪಿಸುವ ಮೂಲಕ ಸರ್ಕಾರದ ಹರಕೆ ತೀರಿಸಿದರು.
ಪ್ರತಿ ತಿಂಗಳಿಗೆ 2 ಸಾವಿರ ರೂ.ನಂತೆ 59 ತಿಂಗಳ ಕಂತಿನ ಹಣ ಒಟ್ಟು 1.18 ಲಕ್ಷ ರೂ.ಗಳನ್ನು ಸಚಿವೆ ಹೆಬ್ಬಾಳ್ಕರ್ ವೈಯಕ್ತಿಕವಾಗಿ ನೀಡಿದ್ದಾರೆ.
*ಮೊದಲ ಕಂತು ಸಲ್ಲಿಸಿದ್ದ ಸಿಎಂ, ಡಿಸಿಎಂ:*
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ವಿಧಾನಸಭಾ ಚುನಾವಣೆಗೂ ಪೂರ್ವ ಮೇ 9 ರಂದು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಕೆ.ಜೆ.ಜಾರ್ಜ್, ದಿನೇಶ್ ಗೂಳಿಗೌಡ ಹಾಗೂ ಇತರ ಕಾಂಗ್ರೆಸ್ ನಾಯಕರು ಚಾಮುಂಡಿ ದೇವಿ ಸನ್ನಿಧಿಯಲ್ಲಿ ಗ್ಯಾರಂಟಿ ಕಾರ್ಡ್ ಗಳನ್ನಿಟ್ಟು ಹರಕೆ ಕಟ್ಟಿದ್ದರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಶಕ್ತಿ ನೀಡುವಂತೆ ತಾಯಿಯಲ್ಲಿ ಬೇಡಿಕೊಂಡಿದ್ದರು. ಅದರಂತೆ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 135 ಸ್ಥಾನಗಳೊಂದಿಗೆ ಅಭೂತಪೂರ್ವ ಜಯಭೇರಿ ಬಾರಿಸಿ ಅಧಿಕಾರವನ್ನು ಹಿಡಿದಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ‌ ಬಂದು 100 ದಿನ ಕಳೆಯುವುದರೊಳಗೆ ಭರವಸೆ ನೀಡಿದ್ದಂತೆ ಐದರಲ್ಲಿ ನಾಲ್ಕು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲಾಗಿದೆ.
ಆಗಸ್ಟ್ 30 ರಂದು ಮೈಸೂರಿನಲ್ಲಿ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡುವ ಮೊದಲು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ನಾನು, ಶಾಸಕರಾದ ದಿನೇಶ್ ಗೂಳಿಗೌಡ ಇತರ ಪ್ರಮುಖರು ದೇವಿಯ ದರ್ಶನ ಮಾಡಿ‌ ಹರಕೆ ತೀರಿಸಿದ್ದೆವು. ರಾಜ್ಯದ ಯಜಮಾನಿಯರ‌ ಖಾತೆಗೆ ಪ್ರತಿ ತಿಂಗಳು ಜಮಾ ಮಾಡುವ ತಲಾ 2 ಸಾವಿರ ರೂ.ಗಳ ಮೊದಲ ಕಂತನ್ನು ತಾಯಿ ಚಾಮುಂಡೇಶ್ವರಿ ದೇವಿಗೆ ಅಂದು ಸಮರ್ಪಣೆ ಮಾಡಿದ್ದೆವು ಎಂದು ಹೆಬಾಳ್ಕರ್ ಹೇಳಿಕೆಯಲ್ಲಿ ವಿವರಿಸಿದ್ದಾರೆ.
ಪ್ರತಿ ತಿಂಗಳು ತಾಯಿ ಚಾಮುಂಡೇಶ್ವರಿ ದೇವಿಗೆ ಗೃಹಲಕ್ಷ್ಮಿ ಕಂತನ್ನು ನೀಡುವಂತೆ ಶಾಸಕ ದಿನೇಶ ಗೂಳಿಗೌಡ ಅವರು ಸಿಎಂ‌ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಲ್ಲಿ ಮನವಿ ಮಾಡಿದ್ದರು. ಅವರು ತಕ್ಷಣ ಈ ಕುರಿತು ಕ್ರಮ ವಹಿಸುವಂತೆ ಸೂಚಿಸಿದ್ದರು. ಆ ಹಿನ್ನೆಲೆಯಲ್ಲಿ ಒಂದೇ ಸಲ ಎಲ್ಲಾ ಕಂತಿನ ಹಣವನ್ನು ನಾಡದೇವಿಗೆ ಅರ್ಪಿಸಲಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಮೊದಲ ಕಂತನ್ನು ಸಿಎಂ, ಡಿಸಿಎಂ ಹಾಗೂ ನಾನು ತಾಯಿ ಚಾಮುಂಡೇಶ್ವರಿ ದೇವಿಗೆ ಅರ್ಪಿಸಿದ್ದೇವೆ. ಹಾಗಾಗಿ ಉಳಿದ 59 ತಿಂಗಳ ಹಣವನ್ನು ದೇವಿಗೆ ನಾನು ವೈಯಕ್ತಿಕವಾಗಿ ಸಲ್ಲಿಸುತ್ತಿದ್ದೇನೆ. ಈ ಮೊತ್ತವನ್ನು ಶಾಸಕರಾದ ದಿನೇಶ್ ಗೂಳಿಗೌಡ ಅವರ ಮೂಲಕ ಸಮರ್ಪಿಸುತ್ತಿದ್ದೇನೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.
*5 ವರ್ಷವೂ ಯೋಜನೆ:* ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಗೃಹಲಕ್ಷ್ಮೀ ಯೋಜನೆಯು ದೇಶದಲ್ಲಿ, ಅಥವಾ ವಿಶ್ವದಲ್ಲಿ ಜಾರಿಯಾದ ಅತಿ ವಿಶಿಷ್ಟ ಹಾಗೂ ಜನಪ್ರಿಯ ಯೋಜನೆಯಾಗಿದೆ.
ಇದುವರೆಗೆ ರಾಜ್ಯಾದ್ಯಂತ 1 ಕೋಟಿ 17 ಲಕ್ಷ ಯಜಮಾನಿಯರು ಗೃಹಲಕ್ಷ್ಮಿ ಯೋಜನೆ ಮೂಲಕ ಹಣ ಪಡೆಯಲು ನೋಂದಣಿ ಮಾಡಿಕೊಂಡಿದ್ದಾರೆ. ಇವರಲ್ಲಿ 1 ಕೋಟಿ 10 ಲಕ್ಷ ಯಜಮಾನಿಯರ ಖಾತೆಗಳಿಗೆ ನೇರವಾಗಿ ಹಣ ಜಮಾ ಆಗುತ್ತಿದೆ. ಯೋಜನೆಗಾಗಿ ನಮ್ಮ ಸರ್ಕಾರ 11,200 ಕೋಟಿ ರೂ.ಗಳನ್ನು ಈಗಾಗಲೇ ಬಿಡುಗಡೆ ಮಾಡಿದೆ. ಪ್ರತಿ ತಿಂಗಳು ಸುಮಾರು 2,100 ಕೋಟಿ ರೂ.ಗಳನ್ನು ಮಹಿಳೆಯರ ಖಾತೆಗೆ ಜಮಾ ಮಾಡಲಾಗುತ್ತಿದೆ. ಇದುವರೆಗೆ ಸುಮಾರು 6 ಸಾವಿರ ಕೋಟಿ ರೂ. ಜಮಾ ಆಗಿದೆ.
*ನುಡಿದಂತೆ ನಡೆದ ಕಾಂಗ್ರೆಸ್ ಸರ್ಕಾರ:*
ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ. ಮಾಡಿದ ವಾಗ್ದಾನದಂತೆ ದೇವಿಗೆ ಹಣ ಸಲ್ಲಿಸುತ್ತಿದ್ದೇವೆ. ಮುಂದಿನ ಐದು ವರ್ಷ ಕೂಡ ನಿರಂತರವಾಗಿ ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪಲಿವೆ. ಮಾತ್ರವಲ್ಲ 2028 ರ ವಿಧಾನಸಭೆ ಚುನಾವಣೆಯಲ್ಲೂ ನಾವು ಮತ್ತೆ ಅಧಿಕಾರಕ್ಕೆ ಬಂದು ಗ್ಯಾರಂಟಿ ಯೋಜನೆಗಳನ್ನು ಪುನಃ, ಪುನಃ ಮುಂದುವರಿಸಲಿದ್ದೇವೆ. ಯೋಜನೆ 3 ತಿಂಗಳಿಗೆ ನಿಲ್ಲುತ್ತದೆ, 6 ತಿಂಗಳಿಗೆ ಸ್ಥಗಿತವಾಗುತ್ತದೆ. ಲೋಕಸಭಾ ಚುನಾವಣೆಯ ನಂತರ ಮುಕ್ತಾಯವಾಗುತ್ತದೆ ಎಂದು ವಿರೋಧ ಪಕ್ಷಗಳು ಅಪಪ್ರಚಾರ ಮಾಡುತ್ತಿವೆ. ಅವುಗಳಿಗೆ ಕಿವಿಗೊಡಬೇಡಿ. ಕೇವಲ ಈ ಐದು ವರ್ಷವಲ್ಲ,ಮುಂದಿನ ಐದು ವರ್ಷವೂ ನಾವೇ ಅಧಿಕಾರದಲ್ಲಿರುತ್ತೇವೆ. ಮತ್ತೆ ಈ ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸುತ್ತೇವೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು