ಇತ್ತೀಚಿನ ಸುದ್ದಿ
ಚಲಿಸುತ್ತಿದ್ದ ಟ್ರ್ಯಾಕ್ಟರ್ ರೋಟರಿಗೆ ಸಿಲುಕಿ ಬಾಲಕ ದಾರುಣ ಸಾವು: ಮಾವನ ಜತೆ ಹೊಲಕ್ಕೆ ಹೋಗಿದ್ದ 8ರ ಹರೆಯದ ಪೋರ
18/05/2024, 11:07

ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.com
ನಂಜನಗೂಡು ಟ್ರ್ಯಾಕ್ಟರ್ ರೋಟರಿಗೆ ಸಿಲುಕಿ ಬಾಲಕನೋರ್ವ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ನಂಜನಗೂಡು ತಾಲೂಕಿನ ದೇವರಸನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಎಂಟು ವರ್ಷದ ಭವಿಷ್ ಎಂಬ ಬಾಲಕನೇ ಟ್ರ್ಯಾಕ್ಟರ್ ನಿಂದ ಬಿದ್ದು ರೋಟರಿಗೆ ಸಿಲುಕಿ ಸಾವನ್ನಪ್ಪಿರುವ ನತದೃಷ್ಟ ಬಾಲಕ. ಶಾಲೆ ರಜಾ ಹಿನ್ನೆಲೆಯಲ್ಲಿ ತನ್ನ ಅಜ್ಜಿ ಮನೆಗೆ ಬಾಲಕ ಬಂದಿದ್ದ. ಬಾಲಕನ ತಾಯಿ ಮಮತಾ ದೇವರಸ ಹಳ್ಳಿಯಿಂದ ಚಾಮರಾಜನಗರಕ್ಕೆ ಮದುವೆಯಾಗಿದ್ದರು.
ಶಾಲಾ ರಜೆ ಕಳೆಯಲು ತನ್ನ ಎರಡು ಮಕ್ಕಳೊಂದಿಗೆ ತಾಯಿ ಮನೆ ದೇವರಸನಹಳ್ಳಿಗೆ ಬಂದಿದ್ದರು.
ಮೃತ ಬಾಲಕನ ಸೋದರ ಮಾವ ತನ್ನ ತಂಗಿಯ ಎರಡು ಮಕ್ಕಳನ್ನು ಜಮೀನಿಗೆ ಕರೆದುಕೊಂಡು ಹೋಗಿದ್ದರು ಎನ್ನಲಾಗಿದೆ. ಜಮೀನಿನಲ್ಲಿ ಉಳುಮೆ ಮಾಡುವ ಸಂದರ್ಭ ಬಾಲಕ ಭವಿಷ್ ಹಾಗೂ ಆತನ ಸಹೋದರಿಯನ್ನು ಟ್ರ್ಯಾಕ್ಟರ್ ಮೇಲೆ ಕೂರಿಸಲಾಗಿದೆ.
ಟ್ರಾಕ್ಟರ್ ಉಳುಮೆ ಮಾಡುವ ಸಂದರ್ಭ ಬಾಲಕ ಭವಿಷ್ ಟ್ರ್ಯಾಕ್ಟರ್ ನಿಂದ ಆಯತಪ್ಪಿ ಕೆಳಗೆ ಬಿದ್ದು ರೋಟರಿಗೆ ಸಿಲುಕಿದಾಗ ದೇಹ ತುಂಡು ತುಂಡಾಗಿ ಬಾಲಕ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾನೆ.
ಬಾಲಕನ ಮೃತ ದೇಹ ಕಂಡ ಗ್ರಾಮಸ್ಥರು ಮಮ್ಮಲ ಮರುಗಿದ್ದಾರೆ.