ಇತ್ತೀಚಿನ ಸುದ್ದಿ
ಚಲನಚಿತ್ರ, ಕಿರುತೆರೆ ರಂಗದ ಕಲಾವಿದರಿಗೆ, ಕಾರ್ಮಿಕರಿಗೆ 3 ಸಾವಿರ ರೂ. ಆರ್ಥಿಕ ನೆರವು
24/06/2021, 07:42
ಮಂಗಳೂರು(reporterkarnataka news) : ಕೋವಿಡ್ -19 ನ ಎರಡನೇ ಅಲೆ ಹಿನ್ನೆಲೆಯಲ್ಲಿ ಜಾರಿಯಾಗಿದ್ದ ಲಾಕ್ಡೌನ್ನಿಂದ ಸಂಕಷ್ಟಕ್ಕೆ ಸಿಲುಕಿದ್ದ ಚಲನಚಿತ್ರ ಮತ್ತು ಕಿರುತೆರೆ ಕಲಾವಿದರು ಮತ್ತು ತಂತ್ರಜ್ಞರು ಹಾಗೂ ಚಲನಚಿತ್ರ ಮಂದಿರದ ಕಾರ್ಮಿಕರಿಗೆ ಮುಖ್ಯಮಂತ್ರಿ ಯವರು ಘೋಷಿಸಿದ್ದ ಮೂರು ಸಾವಿರ ರೂ. ಮೊತ್ತದ ವಿಶೇಷ ಆರ್ಥಿಕ ಪ್ಯಾಕೇಜ್ ನೆರವಿಗಾಗಿ ಸೇವಾಸಿಂಧು ಪೋರ್ಟಲ್ ಮೂಲಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಆನ್ಲೈನ್ ಅರ್ಜಿ ಆಹ್ವಾನಿಸಿದೆ.
ರಾಜ್ಯದಲ್ಲಿ ಎರಡನೇ ಅಲೆಯ ವೇಳೆ ಸರ್ಕಾರ ವಿಧಿಸಿದ್ದ ನಿಬರ್ಂಧದಿಂದಾಗಿ ಬಾಧಿತರಾಗಿದ್ದ ಸಮಾಜ ವಿವಿಧ ವರ್ಗದವರಿಗೆ ಮುಖ್ಯಮಂತ್ರಿ ಯವರು 2021ರ ಜೂನ್ 3 ರಂದು ವಿಶೇಷ ಪರಿಹಾರದ ಎರಡನೇ ಪ್ಯಾಕೇಜ್ ಅನ್ನು ಘೋಷಣೆ ಮಾಡಿದ್ದರು. ಇದರಲ್ಲಿ ಚಲನಚಿತ್ರೋದ್ಯಮ ಹಾಗೂ ಕಿರುತೆರೆ ಮಾಧ್ಯಮದಲ್ಲಿ ತೊಡಗಿಕೊಂಡಿರುವ ನೋಂದಾಯಿತ ಅಸಂಘಟಿತ ಕಾರ್ಮಿಕರಿಗೆ ತಲಾ ಮೂರು ಸಾವಿರ ರೂ. ಪರಿಹಾರ ನೀಡಲು ಸರ್ಕಾರವು ನಿರ್ಧರಿಸಿತ್ತು.
ಸರ್ಕಾರದ ಈ ನಿರ್ಧಾರದಿಂದಾಗಿ 22, 000 ನೋಂದಾಯಿತ ಕಾರ್ಮಿಕರಿಗೆ ಅನುಕೂಲವಾಗಲಿದೆ. ಇದಕ್ಕಾಗಿ ಅಂದಾಜು ಆರು ಕೋಟಿ ಅರವತ್ತು ಲಕ್ಷ ರೂ. ಮೀಸಲಿರಿಸಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಡಾ. ಪಿ.ಎಸ್. ಹರ್ಷ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚಲನಚಿತ್ರ ರಂಗದವರು ಮತ್ತು ಕಿರುತೆರೆ ರಂಗದವರಿಗೆ ಆರ್ಥಿಕ ನೆರವನ್ನು ಆಧಾರ್ ಕಾರ್ಡ್ ಸಂಖ್ಯೆಯನ್ನು ಆಧರಿಸಿ ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲು ಅನುವಾಗುವಂತೆ ಸೇವಾಸಿಂಧು ವೆಬ್ ಪೋರ್ಟಲ್ ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸಬೇಕಾಗಿರುತ್ತದೆ.
ಒಬ್ಬರಿಗೆ ಒಂದು ಅರ್ಜಿಯನ್ನು ಮಾತ್ರ ಸಲ್ಲಿಸಲು ಅವಕಾಶವಿದೆ. ಅರ್ಜಿ ಸಲ್ಲಿಸುವವರು ಸಂಬಂಧಿತ ಸಂಘಗಳಲ್ಲಿ ಸದಸ್ಯತ್ವ ಹೊಂದಿರಬೇಕು ಮತ್ತು ಅಲ್ಲಿಂದ ಕಡ್ಡಾಯವಾಗಿ ಶಿಫಾರಸ್ಸು ಪತ್ರ ಪಡೆದು ಅದನ್ನು ಸೇವಾಸಿಂಧು ಪೋರ್ಟಲ್ ನಲ್ಲಿ ಅಪ್ ಡೇಟ್
ಮಾಡಬೇಕಾಗಿದೆ. ಹಾಗೆಯೇ, ಚಲನಚಿತ್ರ ಮಂದಿರಗಳಲ್ಲಿ ಕೆಲಸ ಮಾಡುವವರು ಭವಿಷ್ಯದ ನಿಧಿ (ಪ್ರಾವಿಡೆಂಟ್ ಫಂಡ್) ಸಂಖ್ಯೆಯೊಂದಿಗೆ ಚಲನಚಿತ್ರ ಮಂದಿರದ ಮಾಲೀಕರ ಪತ್ರದೊಂದಿಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕು.