ಇತ್ತೀಚಿನ ಸುದ್ದಿ
Central v/s State | ದೇವರು ಕೊಟ್ಟರೂ ಪೂಜಾರಿ ಕೊಡನು ಎಂಬಂಥ ಸ್ಥಿತಿ ರಾಜ್ಯದಲ್ಲಿ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟೀಕೆ
02/03/2025, 20:36

* ಕೇಂದ್ರದ ಪಿಎಂ ಕುಸುಮ್ ಯೋಜನೆಗೆ ಸಿದ್ದರಾಮಯ್ಯ ಸರ್ಕಾರದ ತಾತ್ಸಾರ
* ಕೇಂದ್ರದಿಂದ 40 ಸಾವಿರ ಸೌರ ಘಟಕಗಳ ಮಂಜೂರಾತಿ ನೀಡಿದರೂ ಅಳವಡಿಸದ ರಾಜ್ಯ ಸರ್ಕಾರ; ಆರ್ಥಿಕ ಬಿಕ್ಕಟ್ಟೇ ಕಾರಣ
* ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತೀವ್ರ ಅಸಮಾಧಾನ
ನವದೆಹಲಿ(reporterkarnataka.com):
“ದೇವರು ವರ ಕೊಟ್ಟರೂ ಪೂಜಾರಿ ಕೊಡನು” ಎಂಬಂಥ ಪರಿಸ್ಥಿತಿ ರಾಜ್ಯದಲ್ಲಿದೆ. ಕೇಂದ್ರ ಸರ್ಕಾರ ರೈತರಿಗಾಗಿ ಜಾರಿಗೊಳಿಸಿದ “ಪಿಎಂ ಕುಸುಮ್” ಯೋಜನೆ ಅನುಷ್ಠಾನದಲ್ಲಿ ರಾಜ್ಯ ಸರ್ಕಾರ ತೀವ್ರ ನಿರಾಸಕ್ತಿ ತೋರಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅನ್ನದಾತರ ಸಬಲೀಕರಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ NDA ಸರ್ಕಾರ ಪಿಎಂ ಕುಸುಮ್ ಯೋಜನೆ ನೀಡಿದರೆ, ರಾಜ್ಯ ಕಾಂಗ್ರೆಸ್ ಸರ್ಕಾರ ಅದನ್ನು ಬೆಂಬಲಿಸದೆ ರೈತರನ್ನು ವಂಚಿಸುತ್ತಿದೆ ಎಂದಿದ್ದಾರೆ ಜೋಶಿ.
*ಪ್ರಧಾನಿ ಮೋದಿ ಕೊಟ್ಟರೂ ಸಿಎಂ ತಾತ್ಸಾರ:* ಕರ್ನಾಟಕಕ್ಕೆ ಪ್ರಧಾನಿ ಮೋದಿ ಏನು ಕೊಟ್ಟಿದ್ದಾರೆ? ಸಚಿವ ಜೋಶಿ ಕೊಡುಗೆ ಏನು? ಎಂದು ಪದೇಪದೆ ಕೇಳುತ್ತಲೇ ಇರುತ್ತಾರೆ ಸಿಎಂ ಸಿದ್ದರಾಮಯ್ಯ ಅವರು. ಆದರೆ, ಮೋದಿ ಸರ್ಕಾರ ಕೊಟ್ಟಿದ್ದರೂ ರಾಜ್ಯ ಸರ್ಕಾರ ಅದನ್ನು ರಾಜ್ಯದ ಜನಕ್ಕೆ ತಲುಪಿಸದೆ ತೀವ್ರ ತಾತ್ಸಾರ ತೋರುತ್ತಿದೆ ಎಂದು ಸಚಿವ ಜೋಶಿ ಹರಿಹಾಯ್ದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಇಚ್ಛೆಯಂತೆ ನವೀಕರಿಸಬಹುದಾದ ಇಂಧನ ಇಲಾಖೆ ವತಿಯಿಂದ ರಾಜ್ಯಕ್ಕೆ ಪ್ರಸ್ತುತ 40 ಸಾವಿರ ಪಿಎಂ ಕುಸುಮ್ ಸೌರ ಘಟಕಗಳ ಮಂಜೂರಾತಿ ನೀಡಿದ್ದೇನೆ. ಆದರೆ, ರಾಜ್ಯ ಕಾಂಗ್ರೆಸ್ ಸರ್ಕಾರ ಅವುಗಳ ಅಳವಡಿಕೆಯಲ್ಲಿ ತೀರಾ ಹಿಂದುಳಿದಿದೆ ಎಂದು ಪ್ರಲ್ಹಾದ ಜೋಶಿ ಆರೋಪಿಸಿದ್ದಾರೆ.
*ರಾಜ್ಯ ಸರ್ಕಾರದ ಆರ್ಥಿಕ ಬಿಕ್ಕಟ್ಟೇ ಕಾರಣ*: ರಾಜ್ಯದಲ್ಲಿ ಪಿಎಂ ಕುಸುಮ್ ಯೋಜನೆ ಫಲಾನುಭವಿಗೆ ಕೇಂದ್ರ ಸರ್ಕಾರ ಶೇ.30ರಷ್ಟು ಆರ್ಥಿಕ ನೆರವು ಕಲ್ಪಿಸಲಿದೆ. ಶೇ.50 ರಷ್ಟು ರಾಜ್ಯ ಸರ್ಕಾರ ಭರಿಸುವುದಾಗಿ ಹೇಳಿದೆ. ಶೇ.20ರಷ್ಟು ವಂತಿಗೆ ಮಾತ್ರ ರೈತರು ಭರಿಸಬೇಕು. ಬೇಸಿಗೆಯಲ್ಲಿ ವಿದ್ಯುತ್ ಕಣ್ಣಾ ಮುಚ್ಚಾಲೆ ಆಟದಿಂದ ಬೇಸತ್ತ ರೈತರು ಪಿಎಂ ಕುಸುಮ್ ಮೊರೆ ಹೋಗುತ್ತಿದ್ದಾರೆ. ಆದರೆ, ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ತನ್ನ ಪಾಲಿನ ಸಬ್ಸಿಡಿ ಭರಿಸಲು ಸಾಧ್ಯವಾಗದೇ ರೈತರ ಆಶಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ ಸಚಿವರು.
*ರೈತಪರ ಕಾಳಜಿಯೇ ಇಲ್ಲದ ಸರ್ಕಾರ:* ರಾಜ್ಯ ಸರ್ಕಾರ ದುಡ್ಡಿಲ್ಲದ ಕಾರಣಕ್ಕೆ ಪಿಎಂ ಕುಸುಮ್ ಅಳವಡಿಕೆ ಮುಂದೂಡುತ್ತಲೇ ಬಂದಿದೆ. ರೈತ ಪರ ಕಾಳಜಿಯೇ ಇಲ್ಲವಾಗಿದೆ ಎಂದು ಆರೋಪಿಸಿರುವ ಸಚಿವ ಪ್ರಲ್ಹಾದ ಜೋಶಿ, ರಾಜ್ಯ ಸರ್ಕಾರಕ್ಕೆ ಆರ್ಥಿಕ ವೆಚ್ಚದ ಉಳಿತಾಯ ಮತ್ತು ಇಂಧನ ಉಳಿತಾಯದ ಯೋಜನೆಗಳು ಬೇಡವಾಗಿವೆಯೇ? ಎಂದು ಪ್ರಶ್ನಿಸಿದ್ದಾರೆ.
ಪಿಎಂ ಕುಸುಮ್ ಯೋಜನೆ ಅನುಷ್ಠಾನದಿಂದ ರಾಜ್ಯ ಸರ್ಕಾರಕ್ಕೆ ಸಾವಿರಾರು ಕೋಟಿ ರೂಪಾಯಿ ಆರ್ಥಿಕ ಹೊರೆ ತಪ್ಪುತ್ತದೆ. ಅಲ್ಲದೇ, ಕನಿಷ್ಠ 3000 ಮೆಗಾವ್ಯಾಟ್ ವಿದ್ಯುತ್ ಉಳಿತಾಯವೂ ಆಗಲಿದೆ. ಹಾಗಿದ್ದರೂ ಯೋಜನೆ ಅನುಷ್ಠಾನದಲ್ಲಿ ಇಂಧನ ಸಚಿವರು ಎಡವಿದ್ದೇಕೆ? ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕರ್ನಾಟಕಕ್ಕೆ ಪ್ರಧಾನಿ ಮೋದಿ ಕೊಡುಗೆ ಬಗ್ಗೆ ಪ್ರಶ್ನಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪಿಎಂ ಕುಸುಮ್ ನಂತಹ ಅಭಿವೃದ್ಧಿ ಪರ, ಅನ್ನದಾತರ ಪರ ಯೋಜನೆಗಳಿಗೆ ಈ ಮಟ್ಟದ ತಾತ್ಸಾರ, ಅನಾದಾರ ತೋರುವುದು ಸರಿಯಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಮ್ಮ X ಖಾತೆಯಲ್ಲಿ ಖಂಡಿಸಿದ್ದಾರೆ.