ಇತ್ತೀಚಿನ ಸುದ್ದಿ
ಸೆಂಟ್ರಲ್ ರೈಲ್ವೆ ನಿಲ್ದಾಣಕ್ಕೆ ಬ್ರಹ್ಮಶ್ರೀ ನಾರಾಯಣಗುರು, ಮಂಗಳೂರು ವಿಮಾನ ನಿಲ್ದಾಣಕ್ಕೆ ವೀರರಾಣಿ ಅಬ್ಬಕ್ಕ ಹೆಸರು: ಯು.ಟಿ.ಖಾದರ್ ಆಗ್ರಹ
21/11/2022, 21:50

ಮಂಗಳೂರು(reporterkarnataka.com): ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣಕ್ಕೆ ಬ್ರಹ್ಮಶ್ರೀ ನಾರಾಯಣಗುರು ಹೆಸರನ್ನು ಹಾಗೆಯೇ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವೀರರಾಣಿ ಅಬ್ಬಕ್ಕ ಹೆಸರು ಇಡಬೇಕು ಎಂದು ಮಾಜಿ ಸಚಿವ ಯು.ಟಿ ಖಾದರ್ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಒತ್ತಾಯ ಮಾಡಿದ್ದಾರೆ.
ಮಂಗಳೂರಿನಲ್ಲಿ ಸ್ವಾತಂತ್ರ್ಯ ವೀರ ಕೆದಂಬಾಡಿ ರಾಮಯ್ಯ ಗೌಡ ಪ್ರತಿಮೆ ಅನಾವರಣ ಬಳಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ವಿಪಕ್ಷ ಉಪನಾಯಕ ಯು.ಟಿ.ಖಾದರ್, ಬಾವುಟ ಗುಡ್ಡೆಯಲ್ಲಿ ಮಾಡಲಾಗಿರುವ ಪ್ರತಿಮೆ ಅನಾವರಣ ಇಡೀ ಕರ್ನಾಟಕಕ್ಕೆ ಹೆಮ್ಮೆಯ ವಿಚಾರವಾಗಿದೆ.
ಭವಿಷ್ಯದಲ್ಲಿ ಇದು ವಿದ್ಯಾರ್ಥಿಗಳಿಗೆ ಇತಿಹಾಸ ತಿಳಿಸಲು ಅಗತ್ಯವಾಗಿದೆ.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವಾರು ಸ್ವಾತಂತ್ರ್ಯ ಹೋರಾಟಗಾರರು ಜಿಲ್ಲೆಯಲ್ಲಿ ಇದ್ದಾರೆ. ಉತ್ತರ ಭಾರತದ ಸ್ವಾತಂತ್ರ್ಯ ಹೋರಾಟಗಾರರಿಗೆ ಸಿಕ್ಕ ಮಹತ್ವ ನಮ್ಮವರಿಗೆ ಸಿಕ್ಕಿಲ್ಲ.
ಹಾಗಾಗಿ ಪಠ್ಯ ಪುಸ್ತಕದಲ್ಲಿ ರಾಮಯ್ಯ ಗೌಡರ ಪಠ್ಯ ಸೇರಿಸಬೇಕು, ಸರ್ಕಾರ ಆ ನಿಟ್ಟಿನಲ್ಲಿ ಕ್ರಮವನ್ನು ಕೈಗೊಳ್ಳಬೇಕು ಎಂದು ಯು.ಟಿ.ಖಾದರ್ ಅವರು ಬೊಮ್ಮಾಯಿ ಅವರನ್ನು ಒತ್ತಾಯಿಸಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರರದ್ದು ಜಾತಿ, ಧರ್ಮ ಮೀರಿ ನಿಂತ ವ್ಯಕ್ತಿತ್ವವಾಗಿತ್ತು.ಸ್ವಾತಂತ್ರ್ಯ ಹೋರಾಟಗಾರರ ತತ್ವ ನಮಗೆ ಮುಖ್ಯ ಆಗಬೇಕು.ಅವರೆಲ್ಲರ ಇತಿಹಾಸಗಳು ಪಠ್ಯದಲ್ಲಿ ದಾಖಲಾಗಿ ಮುಂದಿನ ಪೀಳಿಗೆಗೆ ತಿಳಿಯುವಂತಾಗಲಿ ಎಂದರು.