ಇತ್ತೀಚಿನ ಸುದ್ದಿ
ಸಿಸಿಬಿ ಪೊಲೀಸರ ಕಾರ್ಯಾಚರಣೆ: ಕಿನ್ನಿಗೋಳಿ ಸಮೀಪ ಮಾದಕ ವಸ್ತು ಎಂಡಿಎಂಎ ಹೊಂದಿದ ಇಬ್ಬರ ಸೆರೆ; 95 ಸಾವಿರ ಮೌಲ್ಯದ ಸೊತ್ತು ವಶ
23/07/2023, 18:49
ಮಂಗಳೂರು(reporterkarnataka.com): ಮಾದಕ ವಸ್ತುವಾದ (Methylene dioxy methamphetamine) MDMA ನ್ನು ಮಾರಾಟ ಮಾಡುತ್ತಿದ್ದ ಇಬ್ಬರನ್ನು ಮಂಗಳೂರು ಸಿಸಿಬಿಪೊಲೀಸರು ಕಿನ್ನಿಗೋಳಿಸಮೀಪ
ಬಂಧಿಸಿದ್ದಾರೆ.
ಮೂಡಬಿದಿರೆ ತಾಲೂಕಿನ ಕಿನ್ನಿಗೋಳಿ ತಾಳಿಪ್ಪಾಡಿ ಗ್ರಾಮದ ಗುತ್ತಕಾಡು ಬಸ್ ಸ್ಟಾಂಡ್ ಬಳಿ ಇಬ್ಬರು ಯುವಕರು ಅಕ್ರಮವಾಗಿ ಮಾದಕ ವಸ್ತುವಾದ MDMA ವಶದಲ್ಲಿರಿಸಿಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಘಟಕದ ಎಸಿಪಿ ಪಿ. ಎ. ಹೆಗಡೆ ಅವರ ನೇತೃತ್ವದ ಸಿಸಿಬಿ ಪೊಲೀಸರು (Methylene dioxy methamphetamine) MDMA ಎಂಬ ನಿಷೇಧಿತ ಮಾದಕ ವಸ್ತುವನ್ನು ಹೊಂದಿದ
ಮಂಗಳೂರಿನ ಕದ್ರಿ ಟೆಂಪಲ್ ಬಳಿಯ ನಿವಾಸಿ ಕೌಶಿಕ್ ದೇವಾಡಿಗ(26) ಬಜಾಲ್ ಜಲ್ಲಿಗುಡ್ಡೆಯ ಮಹಮ್ಮದ್ ಇರ್ಷಾದ್ @ ಅಕುಡು(29) ಎಂಬವರನ್ನು ವಶಕ್ಕೆ ಪಡೆದುಕೊಂಡು ಅವರಿಂದ ಒಟ್ಟು 9 ಗ್ರಾಂ ತೂಕದ 45,000 ರೂ. ಮೌಲ್ಯದ ಎಂಡಿಎಂಎ ಮಾದಕ ವಸ್ತು, 2 ಮೊಬೈಲ್ ಫೋನ್, ಡಿಜಿಟಲ್ ತೂಕ ಮಾಪನವನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 95,500 ರೂ. ಆಗಬಹುದು ಎಂದು ಅಂದಾಜುಸಲಾಗಿದೆ.ಆರೋಪಿಗಳ ವಿರುದ್ಧ ಮುಲ್ಕಿಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಆರೋಪಿಗಳ ಪೈಕಿ ಕೌಶಿಕ್ ಎಂಬಾತನ ವಿರುದ್ಧ ಈ ಹಿಂದೆ ಗಾಂಜಾ ಸೇವನೆ ಬಗ್ಗೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಹಾಗೂ ಮೊಬೈಲ್ ಸುಲಿಗೆ ಮಾಡಿದ ಪ್ರಕರಣವೊಂದು ದಾಖಲಾಗಿರುತ್ತದೆ. ಇನ್ನೋರ್ವ ಆರೋಪಿ ಮೊಹಮ್ಮದ್ ಇರ್ಷಾದ್ ಎಂಬಾತನ ವಿರುದ್ಧ ಈ ಹಿಂದೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣವೊಂದು ದಾಖಲಾಗಿರುತ್ತದೆ.
ಮಾದಕ ವಸ್ತು ಮಾರಾಟ ಜಾಲದ ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಎಸಿಪಿ ಪಿ.ಎ. ಹೆಗಡೆ, ಪೊಲೀಸ್ ನಿರೀಕ್ಷಕರಾದ ಶ್ಯಾಮ್ ಸುಂದರ್ ಎಚ್. ಎಂ., ಪಿಎಸ್ಐ ಯವರಾದ ರಾಜೇಂದ್ರ ಬಿ., ಸುದೀಪ್ ಎಂ. ವಿ., ಶರಣಪ್ಪ ಭಂಡಾರಿ, ನರೇಂದ್ರ ಹಾಗೂ ಸಿಸಿಬಿ ಸಿಬ್ಬಂದಿಯವರು ಪಾಲ್ಗೊಂಡಿದ್ದರು.