ಇತ್ತೀಚಿನ ಸುದ್ದಿ
Cauvery Water | ಮಂಡ್ಯ: ಕಾವೇರಿ ನೀರು ಸರಬರಾಜು ನೂತನ ಕೊಳವೆ ಅಳವಡಿಕೆ ಕಾಮಗಾರಿಗೆ 350 ಕೋಟಿ
18/03/2025, 19:58

ಬೆಂಗಳೂರು (reporterkarnataka.com) :ಮಂಡ್ಯ – ಕೆ.ಹೆಚ್.ಬಿ ಬಡಾವಣೆಯಲ್ಲಿ ಹೊಸದಾಗಿ ಕೊಳವೆ ವಿತರಣಾ ಮಾರ್ಗಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ. ಹಾಲಿ ಇರುವ ಓ.ಹೆಚ್.ಟಿ ಯನ್ನು ಪುನರುಜ್ಜೀವನಗೊಳಿಸಿ ಕಾವೇರಿ ನೀರನ್ನು ಪೂರೈಸಲು ಅಗತ್ಯ ಇರುವ ಕಾಮಗಾರಿಗಳನ್ನು ಕೈಗೊಳ್ಳಲು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯಿಂದ ರೂ. 350. 00 ಕೋಟಿ ಅಂದಾಜು ಪಟ್ಟಿಯನ್ನು ತಯಾರಿಸಿ ಮಂಡ್ಯ ನಗರ ಸಭೆಯ ಪೌರಾಯುಕ್ತರಿಗೆ ಕಳಿಹಿಸಿಕೊಡಲಾಗಿದೆ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರಾದ ಬಿ.ಎಸ್.ಸುರೇಶ್ ಹೇಳಿದರು.
ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ಮಧು ಜಿ ಮಾದೇಗೌಡ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹಲವು ವರ್ಷಗಳಿಂದ ನೀರು ಸರಬರಾಜು ವಿತರಣಾ ಕೊಳವೆ ಮಾರ್ಗಗಳನ್ನು ಬಳಸದೇ ಇದ್ದ ಕಾರಣ ಕೊಳವೆಗಳು ಹಾಳಾಗಿರುವ ಮಾಹಿತಿಯನ್ನು ಗೃಹ ಮಂಡಳಿ ಹಾಗೂ ಮಂಡ್ಯ ನಗರ ಸಭೆ ಅವರಿಗೆ ತಿಳಿಸಿ ದುರಸ್ತಿ ಕಾಮಗಾರಿಯನ್ನು ಕೈಗೊಳ್ಳಲು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ 2021-22 ರ ದರಪಟ್ಟಿಯಂತೆ ರೂ 64.50 ಲಕ್ಷ ಗಳಿಗೆ ಅಂದಾಜು ಪಟ್ಟಿಯನ್ನು ತಯಾರಿಸಿ 2022ನೇ ಆಗಸ್ಟ್ 12ರಲ್ಲಿ ಮಂಡ್ಯ ನಗರ ಸಭೆಯ ಪೌರಾಯುಕ್ತರಿಗೆ ಸಲ್ಲಿಸಲಾಗಿರುತ್ತದೆ. ನಗರ ಸಭೆಯ ವತಿಯಿಂದ ಸದರಿ ಅಂದಾಜು ಮೊತ್ತವನ್ನು ಮಂಡಳಿಗೆ ಭರಿಸದಿರುವುದರಿಂದ ಯಾವುದೇ ಕಾಮಗಾರಿಯನ್ನು ಕೈಗೊಂಡಿರುವುದಿಲ್ಲ ಎಂದು ತಿಳಿಸಿದರು.
ಕರ್ನಾಟಕ ಗೃಹ ಮಂಡಳಿ ವತಿಯಿಂದ ಚಿಕ್ಕ ಮಂಡ್ಯ ಸಮೀಪದ ಕೆ.ಹೆಚ್.ಬಿ. ಬಡಾವಣೆಯಲ್ಲಿ ಕೊಳವೆ ಬಾವಿಯಿಂದ ನೀರು ಸರಬರಾಜು ವ್ಯವಸ್ಥೆಯನ್ನು 2002-03 ರಲ್ಲಿ ಕಲ್ಪಿಸಿದ್ದು ಗೃಹ ಮಂಡಳಿಯಿಂದ 2019 ರಲ್ಲಿ ಬಡಾವಣೆಯನ್ನು ನಗರಸಭೆಗೆ ಹಸ್ತಾಂತರಿಸಲಾಗಿದೆ. ಗೃಹ ಮಂಡಳಿಯ ಅಸಮರ್ಪಕ ನಿರ್ವಹಣೆಯಿಂದಾಗಿ ಸದರಿ ಬಡಾವಣೆಗೆ ಕಾವೇರಿ ನೀರು ಪೂರೈಸಿರುವುದಿಲ್ಲ.
ಬಡಾವಣೆಗೆ ಗೃಹ ಮಂಡಳಿ ವತಿಯಿಂದ ನಗರಸಭೆಗೆ ರೂ. 550.00 ಲಕ್ಷಗಳನ್ನು ಪಾವತಿ ಮಾಡಲಾಗಿದೆ. ಈ ಅನುದಾನದಲ್ಲಿ ಬಡಾವಣೆಗೆ ಸಂಪರ್ಕ ಕಲ್ಪಿಸಲು ಮುಖ್ಯ ರಸ್ತೆಗಳನ್ನು ಅಭಿವೃದ್ದಿಪಡಿಸಲು ರೂ. 446.39 ಲಕ್ಷಗಳನ್ನು ವೆಚ್ಚ ಮಾಡಲಾಗಿದೆ ಎಂದರು.
ಬಡಾವಣೆಯ ನಿರ್ಮಾಣ ವೇಳೆಯಲ್ಲಿ ಗೃಹ ಮಂಡಳಿಯು ಅಳವಡಿಸಿರುವ ನೀರು ಸರಬರಾಜು ಮಾರ್ಗಗಳು ಹಲವು ವರ್ಷ ಬಡಾವಣೆಯಲ್ಲಿ ಯಾವುದೇ ಮನೆ ನಿರ್ಮಾಣ ಆಗದ ಕಾರಣ ಬಳಕೆಯಾಗದೇ ಕೆಲವೆಡೆ ದುರಸ್ತಿಯಲ್ಲಿರುವುದರಿಂದ ಉಳಿಕೆಯಾದ ರೂ. 103.65 ಲಕ್ಷಗಳನ್ನು ಬಡಾವಣೆಯಲ್ಲಿನ ನೀರು ಸರಬರಾಜು ವ್ಯವಸ್ಥೆ ಮತ್ತು ಬೀದಿ ದೀಪಗಳನ್ನು ಅಳವಡಿಸುವ ಕಾಮಗಾರಿಗಳಿಗೆ ಕ್ರಿಯಾ ಯೋಜನೆ ರೂಪಿಸಿ ಅದ್ಯತೆಗನುಗುಣವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸದರಿ ಬಡಾವಣೆಗೆ ಕಾವೇರಿ ಸಗಟು ನೀರು ಸರಬರಾಜು ಮಾಡಲು 2012ನೇ ಸಾಲಿನಲ್ಲಿ ವಂತಿಕೆ ಮೊತ್ತ ರೂ. 93.59 ಲಕ್ಷಗಳನ್ನು ಗೃಹ ಮಂಡಳಿ ವತಿಯಿಂದ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಗೆ ಭರಿಸಲಾಗಿರುತ್ತದೆ. ಹಾಲಿ ಇರುವ ಮೇಲ್ಮಟ್ಟ ಜಲ ಸಂಗ್ರಹಗಾರವನ್ನು ಹೊಳಲು ಸರ್ಕಲ್ ನಿಂದ ಕೆ.ಹೆಚ್.ಬಿ ಬಡಾವಣೆವರೆಗೂ ಅಳವಡಿಸಲಾಗಿದ್ದು, 200 ಮಿ.ಮೀ. ವ್ಯಾಸದ ಫೀಡರ್ ಕೊಳವೆ ಮಾರ್ಗವನ್ನು ಹಾಗೂ ಪಂಪುರೇಚಕಗಳನ್ನು ದುರಸ್ತಿಪಡಿಸಲು 16.35 ಲಕ್ಷಗಳನ್ನು ಗೃಹ ಮಂಡಳಿ ವತಿಯಿಂದ ದುರಸ್ತಿ ಕಾಮಗಾರಿಯನ್ನು ಕೈಗೊಂಡು ಕಾವೇರಿ ಕುಡಿಯುವ ನೀರನ್ನು ಮೇಲ್ಮಟ್ಟ ಜಲಸಂಗ್ರಹಗಾರಕ್ಕೆ ತುಂಬಿಸಿ ಚಾಲನೆಗೊಳಿಸಿ ಗೃಹ ಮಂಡಳಿಗೆ ಹಸ್ತಾಂತರಿಸಲಾಗಿರುತ್ತದೆ ಎಂದು ತಿಳಿಸಿದರು.