ಇತ್ತೀಚಿನ ಸುದ್ದಿ
Budget Session | ರಾಜ್ಯದ 189 ಗ್ರಾಮೀಣ ವಿಧಾನಸಭಾ ಕ್ಷೇತ್ರಗಳಿಗೆ ತಲಾ 10 ಕೋಟಿ ರೂ.ಗಳ ಅನುದಾನ ಹಂಚಿಕೆ
13/03/2025, 10:59

ಬೆಂಗಳೂರು (reporterkarnataka.com):ರಾಜ್ಯದ 189 ಗ್ರಾಮೀಣ ವಿಧಾನಸಭಾ ಕ್ಷೇತ್ರಗಳಿಗೆ ತಲಾ 10 ಕೋಟಿ ರೂ.ಗಳ ಅನುದಾನ ಹಂಚಿಕೆ ಮಾಡಿದ್ದು, ಕುಷ್ಡಗಿ ವಿಧಾನಸಭಾ ಕ್ಷೇತ್ರಕ್ಕೂ 10 ಕೋಟಿಗಳ ಅನುದಾನ ಹಂಚಿಕೆ ಮಾಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯರಾದ ದೊಡ್ಡನಗೌಡ ಹನುಮಗೌಡ ಪಾಟೀಲ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಕೊಪ್ಪಳ ಜಿಲ್ಲೆ ಕುಷ್ಟಗಿ ಕ್ಷೇತ್ರದ ವ್ಯಾಪ್ತಿಯಲ್ಲಿ ವಿಂಡ್ ಪವರ್ ವಿದ್ಯುತ್ ತಯಾರಿಕಾ ಘಟಕವನ್ನು ಪ್ರಾರಂಭಿಸಲು ಭಾರಿ ಗಾತ್ರದ ವಾಹನಗಳು ಸಂಚರಿಸುತ್ತಿರುವುದರಿಂದ ಆ ಭಾಗದ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿದ್ದು, ಈ ರಸ್ತೆಗಳ ಬಗ್ಗೆ ಸದರಿ ಕಂಪನಿಯವರಿಗೆ ಕೊಪ್ಪಳ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ನೋಟಿಸ್ ನೀಡಿದ್ದಾರೆ ಎಂದರು.
2023-24ನೇ ಸಾಲಿನ ಎಸ್.ಸಿ.ಪಿ ಮತ್ತು ಟಿ.ಎಸ್.ಪಿ ಯೋಜನೆಯಡಿ ಕುಷ್ಟಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2 ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಒಟ್ಟು ರೂ.45 ಲಕ್ಷಗಳನ್ನು ಹಂಚಿಕೆ ಮಾಡಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಸಚಿವರು ನುಡಿದರು.
2024-25ನೇ ಸಾಲಿನ ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯಡಿ ಡಾಂಬರು ರಸ್ತೆ, ಮಣ್ಣಿನ ರಸ್ತೆ ಹಾಗೂ ಜಲ್ಲಿ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಕುಷ್ಟಗಿ ವಿಧಾನಸಭಾ ಕ್ಷೇತ್ರಕ್ಕೆ ರೂ
81.33 ಲಕ್ಷಗಳ ಅನುದಾನವನ್ನು ಹಂಚಿಕೆ ಮಾಡಿ ಸಂಪೂರ್ಣ ಅನುದಾನ ಬಿಡುಗಡೆ ಮಾಡಲಾಗಿದೆ. ಅನುದಾನದ ಲಭ್ಯತೆಯನ್ನಾಧರಿಸಿ ಹಾಳಾದ ರಸ್ತೆಗಳನ್ನು ಹಂತ ಹಂತವಾಗಿ ದುರಸ್ತಿಪಡಿಸಲು ಕ್ರಮಕೈಗೊಳ್ಳಲಾಗುವುದು ಎಂದು ಸದನದಕ್ಕೆ ಸಚಿವರು ಮಾಹಿತಿ ನೀಡಿದರು.