10:49 PM Thursday6 - March 2025
ಬ್ರೇಕಿಂಗ್ ನ್ಯೂಸ್
Primary Education | ಮಕ್ಕಳಲ್ಲಿ ಕಲಿಕಾ ಸಾಮರ್ಥ್ಯ ವೃದ್ದಿಗೆ ಕಲಿಕಾ ದೀಪ, ಜ್ಞಾನ… BJP v/s Cong | ಉದ್ದೇಶಿತ ಕ್ಷೇತ್ರ ಮರು ವಿಂಗಡಣೆ ದಕ್ಷಿಣ ಭಾರತದ… Womens Day | ಮಹಿಳಾಸ್ನೇಹಿ ಗ್ರಾಪಂ ಅಭಿಯಾನ, ಮಹಿಳಾ ಗ್ರಾಮಸಭೆ: ಮಾರ್ಚ್‌ 8… Protest | ಹಕ್ಕುಪತ್ರಕ್ಕಾಗಿ ಪಾದಯಾತ್ರೆ: ಗ್ರಾಮದ ನ್ಯಾಯಕ್ಕಾಗಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷನ ಏಕಾಂಗಿ… Budget Session | 26 ಲಕ್ಷ ನಕಲಿ ಕಾರ್ಡ್ ಗಳ ರದ್ದು: ಸದನದಲ್ಲಿ… Budget Session | ದೇವಾಲಯಗಳ ಅರ್ಚಕರು/ ನೌಕರರ ವೇತನ ತಾರತಮ್ಯ ಸರಿಪಡಿಸಲು ಸಮಿತಿ… Forest Minister | ವಾಯುಪಡೆ ಸ್ವಾಧೀನದ ಪೀಣ್ಯ, ಜಾರಕಬಂಡೆ ಅರಣ್ಯಭೂಮಿ ಮರುವಶಕ್ಕೆ: ಸಚಿವ… Budget Session | ರಾಜ್ಯದ ಗ್ರಾಮ ಆಡಳಿತ ಅಧಿಕಾರಿಗಳಿಗೆ ಕರ್ತವ್ಯ ನಿರ್ವಹಿಸಲು ಎಲ್ಲ… Yakshagana | ಯಕ್ಷಗಾನ ಪ್ರದರ್ಶನಕ್ಕೆ ಧ್ವನಿವರ್ಧಕ ಅನುಮತಿ ಸರಳಗೊಳಿಸಲಾಗುವುದು: ಡಿಸಿಎಂ ಡಿ.ಕೆ.ಶಿವಕುಮಾರ್ Budget Session | ಅನಿಲ ವಿತರಣೆ ಯೋಜನೆಯನ್ನು ಅನುಷ್ಠಾನಗೊಳಿಸಲು ಅಗತ್ಯ ಕ್ರಮ: ಸಚಿವ…

ಇತ್ತೀಚಿನ ಸುದ್ದಿ

Budget Session | ರಾಜ್ಯಪಾಲರ ಬಾಯಿಂದ ಸುಳ್ಳು ಹೇಳಿಸಿದ ಕಾಂಗ್ರೆಸ್‌ ಸರಕಾರ: ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆಕ್ರೋಶ

06/03/2025, 22:11

*ವಿಶ್ವವಿದ್ಯಾಲಯಗಳನ್ನು ಮುಚ್ಚಿ ಬಾರ್‌ಗಳನ್ನು ತೆರೆಯುತ್ತಿದ್ದಾರೆ, ಜನಸಂಖ್ಯೆಗೆ ಪೂರಕವಾಗಿ ವಿವಿಗಳನ್ನು ಹೆಚ್ಚಿಸಿ*

*ಸರ್ಕಾರಕ್ಕೆ ಮೊದಲು ನೆಟ್‌ ಬೋಲ್ಟ್‌ ಟೈಟ್‌ ಮಾಡಬೇಕಿದೆ*

ಬೆಂಗಳೂರು(reporterkarnataka.com): ರಾಜ್ಯ ಸರ್ಕಾರ ರಾಜ್ಯಪಾಲರ ಬಾಯಿಂದ ಸಾಕಷ್ಟು ಸುಳ್ಳುಗಳನ್ನು ಹೇಳಿಸಿದೆ. ರಾಜ್ಯಪಾಲರ ಎಲ್ಲ ಅಧಿಕಾರಗಳನ್ನು ಕಿತ್ತುಕೊಂಡು ಅವರನ್ನೇ ಬಳಸಿಕೊಂಡು ಸರ್ಕಾರವನ್ನು ಶ್ಲಾಘಿಸಿಕೊಳ್ಳಲಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.
ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರಾಜ್ಯಪಾಲರಾದ ಥಾವರ್‌ ಚಂದ್‌ ಗೆಹ್ಲೋಟ್‌ ಅವರ ಬಾಯಿಂದ ಸುಳ್ಳಿನ ಸರಮಾಲೆಯನ್ನೇ ಹೇಳಿಸಲಾಗಿದೆ. ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಸಂಘರ್ಷವನ್ನು ತರಲಾಗಿದೆ. ರಾಜ್ಯಪಾಲರ ಅಧಿಕಾರಗಳನ್ನು ಕಿತ್ತುಕೊಂಡಿರುವುದು ಪ್ರಜಾಪ್ರಭುತ್ವಕ್ಕೆ ಮಾಡಿರುವ ಅವಮಾನ. ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಇವ ನಮ್ಮವʼ ಎಂಬ ಬಸವಣ್ಣನವರ ವಚನ ಹೇಳುತ್ತಾರೆ. ಆದರೆ ರಾಜ್ಯಪಾಲರ ವಿಚಾರ ಬಂದಾಗ ಮಾತ್ರ ಇವರು ನಮ್ಮವರಲ್ಲ ಎಂದು ಭೇದ ತೋರುತ್ತಾರೆ. ರಾಜ್ಯಪಾಲರು ಇತ್ತೀಚೆಗೆ ಮೈಕ್ರೋ ಫೈನಾನ್ಸ್‌ ಕಾನೂನು ತಿದ್ದುಪಡಿಯನ್ನು ವಾಪಸ್‌ ಕಳುಹಿಸಿದ್ದರು. ಅದನ್ನು ವಿವೇಚನೆ ಮಾಡದೆ ಸರ್ಕಾರದಿಂದ ದ್ವೇಷ ಸಾಧಿಸಲಾಗುತ್ತಿದೆ. ವಿಧಾನಪರಿಷತ್‌ ಸದಸ್ಯ ಐವನ್‌ ಡಿಸೋಜ ಅವರು ಬಾಂಗ್ಲಾ ಪ್ರಧಾನಿಯೇ ಗತಿಯೇ ಬರಲಿದೆ ಎಂದು ಬೆದರಿಕೆ ಹಾಕಿದ್ದರು. ರಾಜ್ಯಪಾಲರಿಗೆ ತಿಳಿವಳಿಕೆ ಇಲ್ಲವೆಂದು ಸಚಿವ ಜಮೀರ್‌ ಅಹ್ಮದ್‌ ಹೇಳಿದ್ದರು ಎಂದು ದೂರಿದರು.
ಆಡಳಿತದಲ್ಲಿ ಪಾರದರ್ಶಕತೆ ತಂದಿದ್ದರೆ, ವಾಲ್ಮೀಕಿ ನಿಗಮದಲ್ಲಿ 187 ಕೋಟಿ ರೂ. ಹೇಗೆ* ಲೂಟಿಯಾಯಿತು? ಪಿಎಸ್‌ಐ ಪರಶುರಾಮ್‌ ಹೇಗೆ ಸತ್ತರು? ಅಬಕಾರಿ ಇಲಾಖೆಯಲ್ಲಿ ಹಗರಣ ಹೇಗೆ ನಡೆಯಿತು? ಆಕ್ಸ್‌ಫರ್ಡ್‌ ಬ್ಲಾಗ್‌ನಲ್ಲಿ ಆರ್ಥಿಕ ತಜ್ಞರೊಬ್ಬರು ಸರ್ಕಾರವನ್ನು ಶ್ಲಾಘಿಸಿ ಶೈನಿಂಗ್‌ ಲೈಟ್‌ ಇನ್‌ ದಿ ಡಾರ್ಕ್‌ನೆಸ್‌ ಎಂದು ಬರೆದಿದ್ದಾರೆ ಎಂದು ಭಾಷಣದಲ್ಲಿ ಉಲ್ಲೇಖಿಸಲಾಗಿದೆ. ಇದು ಯಾರೆಂದು ಹುಡುಕಿದರೆ, ಇವರು ಮುಖ್ಯಮಂತ್ರಿ ಸಚಿವಾಲಯದಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿ ಎಂದು ತಿಳಿಯಿತು. ಕಾಂಗ್ರೆಸ್‌ ನಾಯಕರ ಕಚೇರಿಯಲ್ಲೇ ಸಂಬಳಕ್ಕಾಗಿ ಕೆಲಸ ಮಾಡುತ್ತಿರುವ ವ್ಯಕ್ತಿ ಬರೆದಿರುವುದನ್ನು ಬಜೆಟ್‌ ಭಾಷಣದಲ್ಲಿ ಏಕೆ ಉಲ್ಲೇಖಿಸಬೇಕು? ಇದನ್ನು ಬಿರುದು ಎಂದು ಪರಿಗಣಿಸಬೇಕೆ? ಇದನ್ನು ರಾಜ್ಯಪಾಲರ ಬಾಯಿಂದ ಹೇಳಿಸಬೇಕೆ? ರಾಷ್ಟ್ರಪತಿಯವರಿಂದ ಬಿರುದು ಪಡೆಯಬೇಕೆ ಹೊರತು, ಸಿಎಂ ಕಚೇರಿಯಲ್ಲಿ ಕೆಲಸ ಮಾಡುವವರಿಂದ ಬಿರುದು ಪಡೆಯಬಾರದು ಎಂದು ಹೇಳಿದರು.
*ವಿವಿ ರದ್ದು:*
9 ವಿಶ್ವವಿದ್ಯಾಲಯಗಳನ್ನು ರದ್ದು ಮಾಡಲು ಡಿ.ಕೆ.ಶಿವಕುಮಾರ್‌ ನೇತೃತ್ವದ ಸಮಿತಿ ನಿರ್ಧರಿಸಿದೆ. ಬಿಜೆಪಿ ಸರ್ಕಾರ ಸುಮ್ಮಸುಮ್ಮನೆ ವಿವಿಗಳನ್ನು ಮಂಜೂರು ಮಾಡಿಲ್ಲ. ದಕ್ಷಿಣ ಕನ್ನಡದಲ್ಲಿ 65.58%, ಬಾಗಲಕೋಟೆಯಲ್ಲಿ 25%, ಚಾಮರಾಜನಗರದಲ್ಲಿ 10%, ಮಂಡ್ಯದಲ್ಲಿ 20%, ಕೊಡಗಿನಲ್ಲಿ 16%, ಹಾಸನದಲ್ಲಿ 15%, ಹಾವೇರಿಯಲ್ಲಿ 45%, ಕೊಪ್ಪಳದಲ್ಲಿ 16% ಸಾಕ್ಷರತೆ ಇದೆ. ಕಡಿಮೆ ಸಾಕ್ಷರತೆ ಇರುವ ಜಿಲ್ಲೆಗಳಲ್ಲಿ ಅವಕಾಶ ವಂಚಿತರಿಗೆ ಅವಕಾಶ ನೀಡಲು ವಿವಿಗಳನ್ನು ನೀಡಲಾಗಿತ್ತು. ವಿವಿಗಳಿಗೆ ಒಟ್ಟಾರೆಯಾಗಿ 450 ಕೋಟಿ ರೂ. ಬೇಕು ಎಂದರು.

ಮಂಡ್ಯ ವಿಶ್ವವಿದ್ಯಾಲಯವಾಗಲು ಅಂಬರೀಶ್‌ ಅವರ ಪ್ರಯತ್ನ ದೊಡ್ಡದಿದೆ. ಯುವಕರು ಬೇರೆ ಜಿಲ್ಲೆಗಳಿಗೆ ಪ್ರಯಾಣ ಮಾಡಬಹುದು. ಆದರೆ ಹೆಣ್ಣುಮಕ್ಕಳು ದೂರ ಹೋಗುವುದು ಕಷ್ಟ ಎಂಬ ಕಾರಣಕ್ಕೆ ಮನೆಯಲ್ಲೇ ಉಳಿದು ಸಾಕ್ಷರತೆ ಪ್ರಮಾಣ ಇಳಿಕೆಯಾಗುತ್ತದೆ. ಯುಜಿಸಿ ಕೂಡ ಪ್ರತಿ ಜಿಲ್ಲೆಗೆ ಒಂದು ವಿವಿ ಬೇಕು ಎಂದು ಹೇಳಿದೆ. ಅಮೆರಿಕದಲ್ಲಿ 60 ಸಾವಿರ ಜನರಿಗೆ ಒಂದು ವಿವಿ ಇದ್ದರೆ, ನಮ್ಮಲ್ಲಿ 1.18 ಲಕ್ಷ ಜನರಿಗೆ ಒಂದು ವಿವಿ ಇದೆ. ವಿವಿಗಳನ್ನು ಮುಚ್ಚಿದರೆ ಅಲ್ಲಿ ಕೆಲಸ ಮಾಡುವವರಿಗೆ ಸಮಸ್ಯೆಯಾಗುತ್ತದೆ. ತಾಲೂಕುಗಳನ್ನು ಹೆಚ್ಚಿಸಿ ಎಂದು ಇದೇ ಕಾಂಗ್ರೆಸ್‌ ನಾಯಕರು ಈ ಹಿಂದೆ ಒತ್ತಾಯ ಮಾಡುತ್ತಿದ್ದರು. ಆದರೆ ಶಿಕ್ಷಣದ ವಿಚಾರದಲ್ಲಿ ಮಾತ್ರ ಈ ಮನೋಭಾವ ಇಲ್ಲ. ಬಾರ್‌ಗಳನ್ನು ಹೆಚ್ಚಿಸಬೇಕೋ, ವಿವಿಗಳನ್ನು ಹೆಚ್ಚಿಬೇಕೋ ಎಂದು ಇವರೇ ತೀರ್ಮಾನಿಸಲಿ ಎಂದರು.
*ಬೆಂಗಳೂರು ಅಭಿವೃದ್ಧಿ ಇಲ್ಲ:* ಬೆಂಗಳೂರಿನಲ್ಲಿ ಎಲ್ಲೆಡೆ ಕಸದ ರಾಶಿ ಕಂಡುಬರುತ್ತಿದೆ. ರಾಜಧಾನಿಯ ಪ್ರಗತಿಗೆ ಅನುದಾನವೇ ಇಲ್ಲ. ಎರಡು ವರ್ಷದಿಂದ ಅಭಿವೃದ್ಧಿ ನಡೆದಿಲ್ಲ. ನನ್ನ ಕ್ಷೇತ್ರಕ್ಕೆ ಕೇವಲ 10 ಕೋಟಿ ರೂ. ನೀಡಲಾಗಿದೆ. ಬಿಜೆಪಿ ಸರ್ಕಾರವಿದ್ದಾಗ ಭೈರತಿ ಸುರೇಶ್‌ ಕ್ಷೇತ್ರಕ್ಕೆ ಒಂದು ವರ್ಷಕ್ಕೆ 100 ಕೋಟಿ ರೂ. ನೀಡಲಾಗಿತ್ತು. ಆದರೆ ಈಗಿನ ಸರ್ಕಾರದಿಂದ ಹಣ ಬರುತ್ತಿಲ್ಲ. ಮಳೆಗಾಲ ಬರುವ ಮುನ್ನ ಡಾಂಬರೀಕರಣ ಮಾಡಬೇಕಿತ್ತು. ಈಗ ಬ್ರ್ಯಾಂಡ್‌ ಬೆಂಗಳೂರು ಹೋಗಿ ಬ್ಯಾಡ್‌ ಬೆಂಗಳೂರು ಆಗಿದೆ ಎಂದು ದೂರಿದರು.
*ಕನ್ನಡಕ್ಕೆ ಬೆಂಬಲವಿಲ್ಲ*
ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಬಿಜೆಪಿ 431 ಕೋಟಿ ರೂ. ನೀಡಿದರೆ, ಈಗ 265 ಕೋಟಿ ರೂ. ನೀಡಲಾಗಿದೆ. ಸಾಹಿತ್ಯ ಸಮ್ಮೇಳನಕ್ಕೆ 30 ಕೋಟಿ ರೂ. ಅನ್ನು 10 ಕೋಟಿ ರೂ. ಇಳಿಸಲಾಗಿದೆ. ಸಾಂಸ್ಕೃತಿಕ ಸಂಘಗಳ ಸಹಾಯಧನ 29 ಕೋಟಿ ರೂ. ನಿಂದ 10 ಕೋಟಿ ರೂ.ಗೆ ಇಳಿದಿದೆ. ರಂಗಮಂದಿರಗಳಿಗೆ ಸಹಾಯಧನ ನೀಡಿಲ್ಲ. ಕಲಾವಿದರ ಪಿಂಚಣಿಗೆ ಅರ್ಜಿ ಆಹ್ವಾನಿಸಿಲ್ಲ. ಕಲಾ ತಂಡಗಳಿಗೆ ಹಣ ಕೊರತೆ ಉಂಟಾಗಿದೆ ಎಂದರು.
*ದರ ಏರಿಕೆ:* ಪೆಟ್ರೋಲ್‌, ಆಲ್ಕೋಹಾಲ್‌, ಮೆಟ್ರೋ, ಬಸ್‌ ಟಿಕೆಟ್‌, ಮದ್ಯ, ದತ್ತು ಸ್ವೀಕಾರ, ಮದುವೆ ಪ್ರಮಾಣಪತ್ರ, ಹಾಲು, ಮಾರ್ಗಸೂಚಿ ದರ ಎಲ್ಲಕ್ಕೂ ದರ ಏರಿಕೆ ಮಾಡಲಾಗಿದೆ. ಏರಿಕೆ ನಂತರವೂ ಜನಪರ ಸರ್ಕಾರ ಎಂದು ಯಾವ ಬಾಯಲ್ಲಿ ಹೇಳುತ್ತಾರೆ? ಚುನಾವಣೆಯಲ್ಲಿ ಕೊಟ್ಟ ಭರವಸೆಯಂತೆ ಹಾಲಿನ ಪ್ರೋತ್ಸಾಹಧನವನ್ನು 5 ರಿಂದ 7 ರೂ.ಗೆ ಏರಿಸಿಲ್ಲ. 2,329 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಖ್ಯಮಂತ್ರಿ ಸಲಹೆಗಾರ ಬಿ.ಆರ್‌.ಪಾಟೀಲ್‌ ಅವರೇ ಹಣಕಾಸಿನ ಸ್ಥಿತಿ ಬಗ್ಗೆ ಮಾತಾಡಿದ್ದಾರೆ. ಕಮಿಶನ್‌ 40% ಗಿಂತ ಹೆಚ್ಚಾಗಿದೆ ಎಂದು ಗುತ್ತಿಗೆದಾರರು ಸಿಎಂ ಬಳಿ ಹೇಳಿದ್ದಾರೆ. ಆದರೂ ಸರ್ಕಾರ ಪಾರದರ್ಶಕತೆ ಬಗ್ಗೆ ಹೇಳುತ್ತದೆ. 32 ಸಾವಿರ ಕೋಟಿ ರೂ. ಬಿಲ್‌ ಬಾಕಿ ಇದೆ ಎಂದರು.
ವಿವಿಧ ನಿಗಮಗಳ ಮೂಲಕ ಬಡವರಿಗೆ ಸರ್ಕಾರ ಸಾಲ ನೀಡಬೇಕಿತ್ತು. ಸಾಲ ಸಿಗದೆ ಜನರು ಮೈಕ್ರೋ ಫೈನಾನ್ಸ್‌ ಮೊರೆ ಹೋಗಿದ್ದಾರೆ. ನಾನು ಮಳವಳ್ಳಿಯ ಹೊನ್ನಾಪುರ ಗ್ರಾಮದ ಪ್ರೇಮಾ ಅವರ ಮನೆಗೆ ಭೇಟಿ ನೀಡಿದ್ದೆ. ಇವರಿಗೆ ಮೈಕ್ರೋ ಫೈನಾನ್ಸ್‌ ಕಿರುಕುಳ ನೀಡಿದ್ದು, ಮಗುವಿಗೆ ಹಾಲು ಕುಡಿಸುತ್ತಿರುವಾಗಲೇ ಪೊಲೀಸರು ಮನೆಯಿಂದ ಹೊರಗೆ ಹಾಕಿದ್ದರು. ಅದರಿಂದ ಬೇಸತ್ತು ಪ್ರೇಮಾ ಆತ್ಮಹತ್ಯೆ ಮಾಡಿಕೊಂಡರು. ಅದನ್ನು ತಿಳಿದ ಮಗ ಮರುದಿನ ಆತ್ಮಹತ್ಯೆ ಮಾಡಿಕೊಂಡ. ಇದೇ ಗ್ರಾಮದಲ್ಲಿ ಸುಮಾರು 10 ಕುಟುಂಬಗಳು ಊರು ಬಿಟ್ಟು ಹೋಗಿವೆ. ಇರುವ ಕಾನೂನಿನಲ್ಲೇ ಸರ್ಕಾರ ಕ್ರಮ ಕೈಗೊಳ್ಳಬಹುದಿತ್ತು. ಅದನ್ನು ಬಿಟ್ಟು ಸುಗ್ರೀವಾಜ್ಞೆ ತಂದಿದ್ದಾರೆ. ನಂತರವೂ ಸಮಸ್ಯೆ ಬಗೆಹರಿದಿಲ್ಲ. ಒಬ್ಬೇ ಒಬ್ಬ ಮೈಕ್ರೋ ಫೈನಾನ್ಸ್‌ ಮುಖ್ಯಸ್ಥರನ್ನು ಜೈಲಿಗೆ ಹಾಕಿಲ್ಲ. ಆಸ್ಪತ್ರೆಗಳಲ್ಲಿ ಬಾಣಂತಿಯರು ಸತ್ತರೂ ಕ್ರಮ ವಹಿಸಿಲ್ಲ ಎಂದರು.
ಗಂಭೀರ ಕಾನೂನು ಉಲ್ಲಂಘನೆ ನಡೆದಿಲ್ಲ ಎಂಬುದು ಸರ್ಕಾರದ ಅಭಿಪ್ರಾಯ. ಮೈಸೂರಿನ ಉದಯಗಿರಿ ಪೊಲೀಸ್‌ ಠಾಣೆ ಮೇಲೆ ಕೋಮುವಾದಿಗಳು ದಾಳಿ ಮಾಡಿದ್ದರೂ ಕ್ರಮ ವಹಿಸಿಲ್ಲ. ಹುಬ್ಬಳ್ಳಿಯಲ್ಲೂ ಈ ರೀತಿಯಾಗಿದ್ದು, ಆಗ ದುಷ್ಕರ್ಮಿಗಳನ್ನು ಬಿಡುಗಡೆ ಮಾಡಲಾಗಿತ್ತು. ಉಲ್ಲಾಳದಲ್ಲಿ ಹಗಲಲ್ಲೇ ಬ್ಯಾಂಕ್‌ ದರೋಡೆ ನಡೆದಿದೆ. ಬೀದರ್‌ನಲ್ಲೂ ಬ್ಯಾಂಕ್‌ ದರೋಡೆ ನಡೆದಿದು ಸಿಬ್ಬಂದಿಯ ಹತ್ಯೆಯಾಗಿದೆ. ಇಷ್ಟೆಲ್ಲ ಆದ ನಂತರವೂ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ ಎನ್ನಲಾಗುತ್ತಿದೆ.
ಚಾಮರಾಜಪೇಟೆಯಲ್ಲಿ ಹಸುವಿನ ಕೆಚ್ಚಲು ಕತ್ತರಿಸಲಾಗಿದೆ. ಆದರೂ ಆರೋಪಿಯ ವಿರುದ್ಧ ಕಠಿಣ ಕ್ರಮ ವಹಿಸದೆ ಆತನನ್ನು ಹುಚ್ಚ ಎಂದು ಕರೆಯಲಾಯಿತು. ನಾಗಮಂಗಲದಲ್ಲಿ ಗಣೇಶ ವಿಸರ್ಜನೆಯಲ್ಲಿ ಗಲಭೆ ನಡೆದಿತ್ತು ಎಂದರು.
*ಸರ್ಕಾರಕ್ಕೆ ನೆಟ್‌ ಬೋಲ್ಟ್‌ ಟೈಟ್‌ ಮಾಡಬೇಕು:*
ಬಿಜೆಪಿ ಸರ್ಕಾರ ಚಲನಚಿತ್ರೋತ್ಸವ ಮಾಡಿದಾಗಲೂ ಕಲಾವಿದರು ಬಂದಿರಲಿಲ್ಲ. ಆದರೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಕಲಾವಿದರಿಗೆ ಬೆದರಿಕೆ ಹಾಕಿದ್ದಾರೆ. ಚಿತ್ರೋದ್ಯಮವನ್ನು ಅಭಿವೃದ್ಧಿ ಮಾಡಲು ಪ್ರತಿ ಸರ್ಕಾರ ಅನುದಾನ ನೀಡುತ್ತದೆ. ಅನೇಕ ಕಲಾವಿದರು ಈಗ ಆಹ್ವಾನ ಪತ್ರಿಕೆ ನೀಡಿಲ್ಲ ಎಂದು ಹೇಳಿದ್ದಾರೆ. ಕಲಾವಿದರಿಗೆ ಮೊದಲು ಗೌರವ ನೀಡಬೇಕು. ಮೇಕೆದಾಟು ಪಾದಯಾತ್ರೆಯನ್ನು ರಾಜಕೀಯ ಉದ್ದೇಶ ಇಟ್ಟುಕೊಂಡು ಮಾಡಲಾಗಿತ್ತು. ಅಂತಹ ಪ್ರತಿಭಟನೆಗೆ ಕಲಾವಿದರು ಯಾಕೆ ಬರುತ್ತಾರೆ? ನೆಟ್‌ ಬೋಲ್ಟ್‌ ಅನ್ನು ಸರ್ಕಾರಕ್ಕೆ ಮೊದಲು ಟೈಟ್‌ ಮಾಡಬೇಕಿದೆ ಎಂದರು.

ಇತ್ತೀಚಿನ ಸುದ್ದಿ

ಜಾಹೀರಾತು