ಇತ್ತೀಚಿನ ಸುದ್ದಿ
ಬಿಜೆಪಿ ಟಿಕೆಟ್: ಸಿಟ್ಟಿಂಗ್ ಎಂಎಲ್ ಎಗಳಲ್ಲಿ ಕೆಲವರಿಗಿಲ್ಲ!; ದ.ಕ. ಜಿಲ್ಲೆಯಿಂದಲೂ ಹಾಲಿಯೊರ್ವರಿಗೆ ಖೊಕ್?!
10/03/2023, 10:20
ಅನುಷ್ ಪಂಡಿತ್ ಮಂಗಳೂರು
info.reporterkarnataka@gmail.com
ಇನ್ನೇನು ಕೆಲವೇ ದಿನಗಳಲ್ಲಿ ಅಭ್ಯರ್ಥಿಗಳ ಪಟ್ಟಿ ಘೋಷಣೆಯಾಗಲಿದೆ ಎನ್ನುವಷ್ಟರಲ್ಲಿ ಬಿಜೆಪಿ ಕಡೆಯಿಂದ ಶಾಕಿಂಗ್ ನ್ಯೂಸ್ ಹೊರಬಿದ್ದಿದೆ. ಅದೇನೆಂದರೆ ಎಲ್ಲ ಹಾಲಿ ಶಾಸಕರುಗಳಿಗೆ ಈ ಬಾರಿ ಟಿಕೆಟ್ ನೀಡುವುದು ಅಸಾಧ್ಯ ಎನ್ನುವ ಮಾತು. ಇದರಲ್ಲಿ ಕರಾವಳಿಯ ಜಿಲ್ಲೆಯ ದಕ್ಷಿಣ ಕನ್ನಡ ಜಿಲ್ಲೆಯಿಂದಲೂ ಓರ್ವ ಹಾಲಿ ಶಾಸಕರಿಗೆ ಟಿಕೆಟ್ ಇಲ್ಲ ಎಂಬ ಮಾಹಿತಿ ಹೊರಬಿದ್ದಿದೆ.
ರಾಜ್ಯದ ಹಾಲಿ ಬಿಜೆಪಿ ಶಾಸಕರ ಪೈಕಿ 5-6 ಮಂದಿಗೆ ಟಿಕೆಟ್ ಸಿಗೊಲ್ಲ ಎಂದು ಮಾಜಿ ಮುಖ್ಯಮಂತ್ರಿ, ಹಿರಿಯ ಬಿಜೆಪಿ ನಾಯಕ ಹಾಗೂ ಸಂಸದೀಯ ಮಂಡಳಿಯ ಸದಸ್ಯರೂ ಆಗಿರುವ ಯಡಿಯೂರಪ್ಪ ಹೇಳಿದ್ದರು. ಇದರ ಬೆನ್ನಲ್ಲೇ ಗುರುವಾರ ವಿಜಯಪುರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಮೀಕ್ಷಾ ವರದಿ, ಶಾಸಕರ ಕಾರ್ಯವೈಖರಿ ಸೇರಿ ಎಲ್ಲ ಮಾನದಂಡಗಳನ್ನು ನೋಡಿಕೊಂಡು ಬಿಜೆಪಿ ಟಿಕೆಟ್ ನೀಡಲಾಗುವುದು ಎಂದಿದ್ದಾರೆ. ಆ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎಲ್ಲ ಹಾಲಿ ಶಾಸಕರಿಗೆ ಬಿಜೆಪಿ ಟಿಕಿಟ್ ಇಲ್ಲ ಎಂಬ ಸ್ಪಷ್ಟ ಸಂದೇಶ ಸಾರಿದ್ದಾರೆ.
ಒಂದು ಎಲೆಕ್ಷನ್ ಗಿಂತ ಇನ್ನೊಂದು ಎಲೆಕ್ಷನ್ ಯಾವತ್ತೂ ಭಿನ್ನವಾಗಿಯೇ ಇರುತ್ತದೆ. ಎಲ್ಲರಿಗೂ ನೂರಕ್ಕೆ ನೂರು ಟಿಕೆಟ್ ಕೊಟ್ಟ ಉದಾಹರಣೆಗಳಿಲ್ಲ ಎಂದು ಬೊಮ್ಮಾಯಿ ನುಡಿದಿದ್ದರು.
ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿಎಂ ಬೊಮ್ಮಾಯಿ, ಯಡಿಯೂರಪ್ಪ ಅವರು ಸಂಸದೀಯ ಮಂಡಳಿ ಸದಸ್ಯರು, ಅವರಿಗೆ ಮಾಹಿತಿ ಇರಬಹುದು, 70 ವಯಸ್ಸು ದಾಟಿದವರಿಗೆ ಟೆಕೆಟ್ ನೀಡಬೇಕೇ, ಬೇಡವೇ ಎನ್ನುವ ವಿಚಾರ ನಮ್ಮ ಮುಂದೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರತಿಯೊಂದು ಕ್ಷೇತ್ರದ ಕುರಿತು ಸಂಸದೀಯ ಮಂಡಳಿಯಲ್ಲಿ ಚರ್ಚೆ ನಡೆಯುತ್ತಿದೆ. ಆದರೆ, ನೂರಕ್ಕೆ ನೂರರಷ್ಟು ಎಲ್ಲರಿಗೂ ಟಿಕೆಟ್ ಸಿಗುತ್ತದೆ ಅಂತ ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು.
ಈ ನಡುವೆ ಸಮೀಕ್ಷಾ ವರದಿ, ಕಾರ್ಯಕರ್ತರ ಅಭಿಪ್ರಾಯ, ಗೆಲುವಿನ ಹಾದಿ ಇದನ್ನೆಲ್ಲ ಪರಿಗಣಿಸಿ ದ.ಕ. ಜಿಲ್ಲೆಯ ಒಬ್ಬರು ಶಾಸಕರನ್ನು ಪಟ್ಟಿಯಿಂದ ಹೊರಗಿಡುವ ಬಗ್ಗೆ ಚಿಂತನೆ ನಡೆದಿದೆ ಎಂದು ತಿಳಿದು ಬಂದಿದೆ.














