6:28 PM Wednesday27 - November 2024
ಬ್ರೇಕಿಂಗ್ ನ್ಯೂಸ್
ಡಿ.8ರಂದು ಉರ್ವ ಪೊಂಪೈ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಹಬ್ಬ: ಬಿಷಪ್ ಡಾ. ಪೀಟರ್… ಕರ್ತವ್ಯಲೋಪ: ಚಿಕ್ಕಮಗಳೂರು ನಗರ ಠಾಣೆ ಇನ್ಸ್ ಪೆಕ್ಟರ್ ರೇಣುಕಾ ಪ್ರಸಾದ್ ಅಮಾನತು ರಾಜ್ಯ ಸರಕಾರದ ಜನಪರ ಕೆಲಸಕ್ಕೆ ಮತದಾರರ ಜೈ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್… ತೀರ್ಥಹಳ್ಳಿ ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ: ತನಿಖೆ ಆರಂಭ ಕಳೆದ ಬಾರಿ ಅರ್ಧಂಬರ್ಧ ಸುಣ್ಣಬಣ್ಣ ಕಂಡ ತುಂಗಾ ಕಮಾನು ಸೇತುವೆಗೆ ಈ ಬಾರಿ… ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಲ್ಲಿ ಕೋಲಾರ ಪ್ರಥಮ: ಜಿಲ್ಲಾಧಿಕಾರಿ ಅಕ್ರಂ ಪಾಷಾಗೆ… ಚನ್ನಪಟ್ಟಣದಲ್ಲಿ ಸೋಲು: ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದು ಧೈರ್ಯ ತುಂಬಿದ ಕಾರ್ಯಕರ್ತ! ಮೂಡಿಗೆರೆ: ಬೆಂಕಿ ಆಕಸ್ಮಿಕದಲ್ಲಿ ಗುಡಿಸಲು ಸಂಪೂರ್ಣ ಭಸ್ಮ; ಬೀದಿಗೆ ಬಿದ್ದ ಬಡ ಕುಟುಂಬ ರಾಜ್ಯ ವಿಧಾನಸಭೆಯ 3 ಕ್ಷೇತ್ರಗಳ ಉಪ ಚುನಾವಣೆ; ಕಾಂಗ್ರೆಸ್ ಭರ್ಜರಿ ಜಯ; ಕೇಸರಿ… ಸಂಡೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣಗೆ ಜಯ: ಬಿಜೆಪಿ ಮೈತ್ರಿಕೂಟಕ್ಕೆ ತೀವ್ರ ಮುಖಭಂಗ ​

ಇತ್ತೀಚಿನ ಸುದ್ದಿ

ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ನತ್ತ ಮುಖ: ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ

04/08/2024, 20:21

* ಜೆಡಿಎಸ್ ನ ಕುಮಾರಸ್ವಾಮಿ ದ್ವಂದ್ವ ನಿಲುವಿನ ಬಗ್ಗೆ ಟೀಕೆ

* ಪಾದಯಾತ್ರೆಯಲ್ಲಿ ಭಾಗಿಯಾಗದಿದ್ದರೆ ಮಂತ್ರಿ ಸ್ಥಾನ ಕಳೆದುಕೊಳ್ಳುವ ಬಗ್ಗೆ ಅಮಿತ್ ಶಾ ಎಚ್ಚರಿಕೆ ಹಿನ್ನೆಲೆಯಲ್ಲಿ ಪಾದಯಾತ್ರೆಯಲ್ಲಿ ಪಾಲ್ಗೊಂಡ ಕುಮಾರಸ್ವಾಮಿ

ಬೆಂಗಳೂರು(reporterkarnataka.com): ಬಿಜೆಪಿ, ಜೆಡಿಎಸ್‌ನ ದ್ವಂದ್ವ ನಿಲುವಿನ ಪಾದಯಾತ್ರೆಯಿಂದ ಬೇಸತ್ತ ಹಳೇ ಮೈಸೂರು ಭಾಗದ ಆ ಎರಡೂ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ನತ್ತ ಮುಖ‌ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಹೇಳಿದ್ದಾರೆ.
ಬೆಂಗಳೂರಿನಿಂದ ಮೈಸೂರು ಪಾದಯಾತ್ರೆಯ ಬಗ್ಗೆ ಮಾಧ್ಯಮ ಹೇಳಿಕೆ ನೀಡಿರುವ ಅವರು, ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಮುಂಚಿನ ದಿನ ರಾತ್ರಿ ಹೇಳಿಕೆ ನೀಡಿದ್ದ, ಪೆನ್ ಡ್ರೈವ್ ಪ್ರಕರಣದಲ್ಲಿ ತಮ್ಮ ಕುಟುಂಬದ ಸರ್ವ ನಾಶ ಮಾಡಿದವನ ಸಭೆಗೆ ನಾನು ಹೋಗಬೇಕೇ ಎಂದು ರಾತ್ರಿ ಪ್ರಶ್ನಿಸಿದ್ದ
ಎಚ್.ಡಿ.ಕುಮಾರಸ್ವಾಮಿ ಅವರು, ಬೆಳಗಾಗುವುದರೊಳಗೆ ತಮ್ಮ ನಿಲುವು ಬದಲಿಸಿದ್ದಾರೆ. ದಿಢೀರ್ ಆಗಿ ಬಂದು ಪಾದಯಾತ್ರೆಯ ನೇತೃತ್ವ ವಹಿಸಿದ್ದಾರೆ. ಮಂತ್ರಿ ಪದವಿಯಿಂದ ಕಿತ್ತು ಹಾಕುವುದಾಗಿ ಅಮಿತ್ ಶಾ ಬೆದರಿಕೆ ಹಾಕಿರಬೇಕು. ಸಿಕ್ಕ ಒಂದು ಸಚಿವ ಪದವಿ ಕೈಬಿಡುವ ಭಯದಲ್ಲಿ ಕುಮಾರಸ್ವಾಮಿ ಅವರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಮಂಜುನಾಥ ಭಂಡಾರಿ ಅವರು ಟೀಕಿಸಿದ್ದಾರೆ.
ಇಂಥ ದ್ವಂದ್ವ ನಿಲುವಿನ ವ್ಯಕ್ತಿಯನ್ನು ನಂಬುವುದು ಹೇಗೆ..? ರಾಜ್ಯದ ಜನರು ಇಂಥ ಸಚಿವರಿಂದ ರಾಜ್ಯದ ಜನರು ಏನು ತಾನೇ ನಿರೀಕ್ಷೆ ಮಾಡಬಹುದು ಎಂದು ಭಂಡಾರಿ ಅವರು ಪ್ರಶ್ನಿಸಿದ್ದಾರೆ.
*ಚುನಾವಣೆ ಗೆದ್ದ ಬಳಿಕ ಬದಲಾದ ವರಸೆ:*
ಕುಮಾರಸ್ವಾಮಿ ಕುಟುಂಬದವರು, ಎಲೆಕ್ಷನ್‌ ಗೆಲ್ಲುವ ತನಕ “ನಾವು ಮಣ್ಣಿನ ಮಕ್ಕಳು, ನೀರಿನ ಮಕ್ಕಳು ಎಂದು ಹೇಳುತ್ತಿದ್ದರು. ಮಂಡ್ಯ, ರಾಮನಗರ ನಮ್ಮ ಕಣ್ಣು, ಕಿವಿ, ಎಂದು ಹೇಳುತ್ತಿದ್ದರು. ಇದೇ ನಮ್ಮ ಹೃದಯ, ಶ್ವಾಸಕೋಶ, ಕರುಳು ಎಂದು ಜನರನ್ನು ಮರಳು ಮಾಡಿದ್ದರು. ಗೆದ್ದಮೇಲೆ, ಅಧಿಕಾರ ಹಿಡಿದ ಮೇಲೆ ಅವರ ರಾಗವೇ ಬದಲಾಗಿದೆ. ಮೇಕೆದಾಟು ಸಮಸ್ಯೆ ಬಗೆಹರಿಸುತ್ತೇನೆ, ಕಾವೇರಿ ಸಮಸ್ಯೆ ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದ್ದ ಎಚ್ ಡಿಕೆ, ಈಗ ನಾನೆಲ್ಲಿ ಹೇಳಿದ್ದೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ನಾನು ಸಾಯುವುದರೊಳಗೆ ಬಗೆಹರಿಸುತ್ತೇನೆ ಎಂದು ಇನ್ನೊಂದು ಕಡೆ ಹೇಳಿಕೆ ನೀಡುತ್ತಾರೆ. ಹೀಗೆ ಘಳಿಗೆಗೊಂದು, ಗಂಟೆಗೊಂದು, ‌ಹೇಳಿಕೆ ನೀಡಿ ತಮ್ಮ ಬಣ್ಣ ಬಯಲು ಮಾಡಿಕೊಳ್ಳುತ್ತಿದ್ದಾರೆ. ಒಂದೆಡೆ ಕಾಂಗ್ರೆಸ್ ಬಯ್ಯುತ್ತಾರೆ, ಜತೆಗೆ ತಮ್ಮ ಮಿತ್ರ ಪಕ್ಷ ಬಿಜೆಪಿಯನ್ನೂ ಬಯ್ಯುತ್ತಾರೆ. ತಮ್ಮಿಂದಲೇ ಎಲ್ಲ ಎನ್ನುತ್ತಾರೆ ಇಂಥ ವ್ಯಕ್ತಿಯಿಂದ ಏನೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಮೇಕೆದಾಟು ಯೋಜನೆಗೆ ಅನುಮತಿ ಕೊಡಲು ಕೇಂದ್ರಕ್ಕೆ ಎಲ್ಲ ಅವಕಾಶವಿದೆ. ಆದರೆ, “ನಿಮ್ಮ ಸ್ನೇಹಿತ ಸ್ಟಾಲಿನ್ ಬಳಿ ಮಾತನಾಡಿ ಎಂಬುದಾಗಿ ಸಿಎಂ ಸಿದ್ದರಾಮಯ್ಯನವರಿಗೆ ಕುಮಾರಸ್ವಾಮಿ ಅವರು ಸಲಹೆ ನೀಡುತ್ತಾರೆ. ಹಾಗಾದರೆ ಇವರಿಗೇನು ಸ್ಟಾಲಿನ್ ವೈರಿಯೇ..? ಎಂದು ಮಂಜುನಾಥ ಭಂಡಾರಿ ಪ್ರಶ್ನಿಸಿದ್ದಾರೆ.
ಅಧಿಕಾರ ಹಿಡಿಯುವ ಸಲುವಾಗಿ ಕರುಳು ಎಂದು ಜನರನ್ನು ಮರಳು ಮಾಡಿದವರು ಈಗ ಕಾವೇರಿಯನ್ನು ನಡುನೀರಿನಲ್ಲಿ ಕೈ ಬಿಟ್ಟಿದ್ದಾರೆ. ಮೇಕೆದಾಟು ಯೋಜನೆಯ ಬಗ್ಗೆ ಮಾತನಾಡುತ್ತಿಲ್ಲ. ಕೈಗಾರಿಕೆ ತರುವುದಾಗಿ, ಉದ್ಯೋಗ ಕೊಡುವುದಾಗಿ ಹೊಸ ವರಸೆ ಪ್ರಾರಂಭಿಸಿದ್ದಾರೆ. ನಿರುದ್ಯೋಗಿಗಳ ಆಸೆಗೆ ಯಾವಾಗ ಮಣ್ಣೆರಚುತ್ತಾರೋ ಗೊತ್ತಿಲ್ಲ.
ಜನರು ಇವರ ಕುಟುಂವದವರನ್ನು ಗೆಲ್ಲಿಸಲು ಹೋರಾಡಬೇಕು. ಆದರೆ, ಇವರನ್ನು ನಂಬಿಕೊಂಡಿರುವ ಮತದಾರರ ಯಾವುದೇ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಎಚ್ ಡಿಕೆ ಅವರನ್ನು ಮಂಜುನಾಥ ಭಂಡಾರಿ ಕಟುವಾಗಿ ಟೀಕಿಸಿದ್ದಾರೆ.‌
*ಅಧಿಕಾರಕ್ಕಾಗಿ ನಾಟಕ:*
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಬಿಜೆಪಿಗೆ ಮೊಳೆ ಹೊಡೆಯಬೇಕು. ಅದನ್ನು ಗುರಿಯಾಗಿಸಿಕೊಂಡು ಎಚ್ ಡಿಕೆ ಈಗ ನಾಟಕ ಮಾಡುತ್ತಿದ್ದಾರೆ. ಜನರ ತಲೆಯ ಮೇಲೆ ಟೋಪಿ ಹಾಕುವುದು ಇವರಿಗೆ ರೂಢಿ. ಈಗ ಮತ್ತೊಂದು ದೊಡ್ಡ ಟೋಪಿ ಹಿಡಿದುಕೊಂಡು ಬೈ ಎಲೆಕ್ಷನ್ ಗೆ ಸಜ್ಜಾಗಿದ್ದಾರೆ. ಸಿ.ಪಿ.ಯೋಗೇಶ್ವರ್ ಅವರಿಗೂ ಇವರು ಟೋಪಿ ಹಾಕುವುದು ಶತಃ ಸಿದ್ಧ.‌ ಎಂಪಿ ಚುನಾವಣೆ ಗೆಲ್ಲುವವರೆಗೆ ಮೈತ್ರಿ ಎಂದವರು ಈಗ ಬಿಜೆಪಿಗೇ ನಾಮ ಹಾಕಲು ಸಜ್ಜಾಗಿದ್ದಾರೆ ಎಂದು ಕುಮಾರಸ್ವಾಮಿ ನಿಲುವಿನ ಬಗ್ಗೆ ಭಂಡಾರಿ ಲೇವಡಿ ಮಾಡಿದ್ದಾರೆ.
*ದಡ ಸೇರದ ಯಾತ್ರೆ:*
ಮುಡಾ ಹಗರಣ ಆಗಿಲ್ಲ ಎಂದು ಕುಮಾರಸ್ವಾಮಿ ಅವರಿಗೂ ಗೊತ್ತು. ರಾಜ್ಯದಲ್ಲಿ ಪ್ರವಾಹ ಬಂದಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಜಾಸ್ತಿಯಾಗಿದೆ‌. ಜನರು ಸಂಕಷ್ಟದಲ್ಲಿದ್ದಾರೆ ಎಂದು ಹೇಳಿದ್ದರು. ಹೀಗಾಗಿ ಪಾದಯಾತ್ರೆ ಬೇಸದ ಎಂದಿದ್ದರು. ಮತ್ತೆ ವರಸೆ ಬದಲಿಸಿದರು ಎಂದು ಟೀಕಿಸಿದರು.
ನಮ್ಮ ನಾಯಕ ರಾಹುಲ್ ಗಾಂಧಿ ಅವರು ಪಾದಯಾತ್ರೆ ಮಾಡಿದಾಗ, ಬಡವರ, ಶ್ರೀ ಸಾಮಾನ್ಯರ, ಮಹಿಳೆಯರ, ರೈತರ ನಿರುದ್ಯೋಗಿಗಳ ಹೀಗೆ ಪ್ರತಿಯೊಬ್ಬರ ಸಮಸ್ಯೆ ಆಲಿಸಿದ್ದರು‌. ಹಳ್ಳಿ, ಹಳ್ಳಿಗಳಿಗೆ ಹೋಗಿ ಮಾತನಾಡಿದ್ದರು. ಆದರೆ, ಈಗ ಬಿಜೆಪಿ, ಜೆಡಿಎಸ್ ಪಾದಯಾತ್ರೆಯಲ್ಲಿ ಎಲ್ಲೂ ಜನರ ಸಮಸ್ಯೆ ಬಗ್ಗೆ ಮಾತನಾಡುತ್ತಲೇ ಇಲ್ಲ. ಅವರು, ಅಷ್ಟು ಹಣ ಮಾಡಿದ್ದಾರೆ. ಇವರು ಇಷ್ಟು ಹಣ ಮಾಡಿದ್ದಾರೆ ಎಂದು‌ ಹೇಳಿಕೊಂಡು, ವೈಯಕ್ತಿಕ ನಿಂದನೆ, ತೇಜೋವಧೆ ಮಾಡಿಕೊಂಡು ಹೋಗುತ್ತಿದ್ದಾರೆ. ಇದೊಂದು ನಾಯಕತ್ವದ ಪೈಪೋಟಿಯ ಪಾದಯಾತ್ರೆಯಾಗಿದೆ. ಆರಂಭದಲ್ಲೇ ಅಪಸ್ವರ ಶುರುವಾಗಿದೆ. ಒಬ್ಬರ ಕಾಲನ್ನು ಒಬ್ಬರು ಎಳೆಯುತ್ತಿದ್ದಾರೆ. ಇದು ದಡ ಸೇರುವ ಲಕ್ಷಣ ಕಾಣುತ್ತಿಲ್ಲ ಎಂದು ಮಂಜುನಾಥ ಭಂಡಾರಿ ಕಿಡಿಕಾರಿದ್ದಾರೆ.
ಯಡಿಯೂರಪ್ಪ ತನ್ನ ಮಗನ ನಾಯಕತ್ವಕ್ಕಾಗಿ ಹೋರಾಡುತ್ತಿದ್ದರೆ, ಕುಮಾರಸ್ವಾಮಿ ತನ್ನ ಮಗನನ್ನು ನಾಯಕ ಎಂದು ಬಿಂಬಿಸಲು ಹೋರಾಡುತ್ತಿದ್ದಾರೆ. ಈ ನಡುವೆ ಕಾರ್ಯಕರ್ತರು ಬಡವಾಗುತ್ತಿದ್ದಾರೆ. ಹೀಗಾಗಿ ಅವರೆಲ್ಲರೂ ಈಗ ಕಾಂಗ್ರೆಸ್ ಕಡೆ ಮುಖ ಮಾಡಿದ್ದಾರೆ ಎಂದು ಮಂಜುನಾಥ್ ಭಂಡಾರಿ ಹೇಳಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು