ಇತ್ತೀಚಿನ ಸುದ್ದಿ
ಬಿಸಿಲಿನ ಝಳ ಲೆಕ್ಕಿಸದೆ ಅತ್ಯಧಿಕ ಪ್ರಮಾಣದಲ್ಲಿ ಮತದಾನ ಮಾಡಿ: ಬಿಜೆಪಿ ನಾಯಕ ಅಣ್ಣಾಮಲೈ
23/04/2024, 21:23
ಮಂಗಳೂರು(reporterkarnataka.com): ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟರ ಪ್ರಣಾಳಿಕೆ ಬಿಡುಗಡೆಯಾಗಿದೆ. 2019ರಲ್ಲಿ ಬಿಜೆಪಿ ಕೇಂದ್ರ ಪಕ್ಷದ ಪ್ರಣಾಳಿಕೆಯಲ್ಲಿ 295 ಅಂಶಗಳಿದ್ದವು. ಅವುಗಳನ್ನು ಸರಕಾರ ಪೂರ್ಣವಾಗಿ ಜಾರಿಗೊಳಿಸಿದೆ. ಈಗ 2024ರ ಪ್ರಣಾಳಿಕೆಯನ್ನೂ ಪ್ರಧಾನಿ ಮೋದಿಯವರು ಪ್ರಕಟಿಸಿದ್ದಾರೆ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಹೇಳಿದರು.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಅವರ ‘ನವಯುಗ- ನವಪಥ’ ಕಾರ್ಯಸೂಚಿಯನ್ನು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಕೇಂದ್ರ ಬಿಜೆಪಿಯ ಪ್ರಣಾಳಿಕೆಗೆ ಅನುಗುಣವಾಗಿ ಪಕ್ಷದ ಎಲ್ಲ ಅಭ್ಯರ್ಥಿಗಳೂ ಕೂಡ ತಮ್ಮದೇ ಪ್ರಣಾಳಿಕೆಗಳನ್ನು ಮತದಾರರ ಮುಂದಿಡಬೇಕು ಎಂಬುದು ಪಕ್ಷದ ನೀತಿ ಹಾಗೂ ನಿರ್ದೇಶನವಾಗಿದೆ. ಅದರಂತೆ ಕ್ಯಾಪ್ಟನ್ ಚೌಟರು ತಮ್ಮ ಕಾರ್ಯಸೂಚಿಯನ್ನು ಇಂದು ಕ್ಷೇತ್ರದ ಮತದಾರರ ಮುಂದಿಟ್ಟಿದ್ದಾರೆ ಎಂದು ಅವರು ನುಡಿದರು.
ನಮ್ಮ ಹಿರಿಯ ನಾಯಕರು ಹಾಗೂ ಅತ್ಯುತ್ತಮ ಕಾರ್ಯ ನಿರ್ವಹಣೆಯ ಸಂಸದರಲ್ಲಿ ಒಬ್ಬರಾಗಿ ಹೆಸರಾದ ನಳಿನ್ ಕುಮಾರ್ ಕಟೀಲ್ ಅವರು 1 ಲಕ್ಷದ 17 ಸಾವಿರ ಕೋಟಿಗೂ ಹೆಚ್ಚಿನ ಅನುದಾನವನ್ನು ಕಳೆದ ಹತ್ತು ವರ್ಷಗಳಲ್ಲಿ ತಂದಿದ್ದಾರೆ. ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ಹೊಣೆಯನ್ನು ಕ್ಯಾ. ಚೌಟ ಅವರು ತೆಗೆದುಕೊಂಡಿದ್ದಾರೆ.
26ಕ್ಕೆ ಮತದಾನ ನಡೆಯಲಿದೆ. ಬಿಜೆಪಿಯ ಎಲ್ಲ ಕಾರ್ಯಕರ್ತರು, ಶಾಸಕರು, ಪಂಚಾಯತ್ ಸೇರಿದಂತೆ ಎಲ್ಲ ಹಂತದ ಕಾರ್ಯಕರ್ತ ಪದಾಧಿಕಾರಿಗಳು ಚುನಾವಣೆಗಾಗಿ ಬಹಳಷ್ಟು ಕೆಲಸ ಮಾಡಿದ್ದಾರೆ. 400ಕ್ಕೂ ಅಧಿಕ ಸ್ಥಾನಗಳೊಂದಿಗೆ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕು. ಈ ಗುರಿ ಸಾಧಿಸಲು ನಾವೆಲ್ಲ ಜತೆಗೂಡಿ ಕೆಲಸ ಮಾಡುತ್ತೇವೆ. ಕ್ಯಾ. ಚೌಟರು ಅತಿದೊಡ್ಡ ಅಂತರದಿಂದ ಗೆಲುವು ಸಾಧಿಸಲು ಶ್ರಮಿಸುತ್ತೇವೆ ಎಂದು ಅಣ್ಣಾಮಲೈ ನುಡಿದರು.
ಇಂದು ಬೆಳಗಿನಿಂದ ಜಿಲ್ಲೆಯ ಹಲವು ಕಡೆ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದೇನೆ. ಹೋದ ಕಡೆಗಳಲ್ಲೆಲ್ಲ ಮತದಾರರಿಂದ ಉತ್ತಮ ಬೆಂಬಲ ವ್ಯಕ್ತವಾಗಿದೆ. ದೇಶದ ಇತರ ಭಾಗಗಳಲ್ಲಿ ಏ.19ರಂದು ನಡೆದ ಮೊದಲ ಹಂತದ ಚುನಾವಣೆಯಲ್ಲಿ ಬಿಸಿಗಾಳಿ ಬಹಳಷ್ಟು ಪರಿಣಾಮ ಬೀರಿದೆ. ಇದೀಗ ಈ ಜಿಲ್ಲೆಯಲ್ಲೂ ಬಿಸಿಗಾಳಿಯ ಪರಿಣಾಮವಿದೆ. ಆದರೆ ಜನತೆ ಅವೆಲ್ಲವನ್ನೂ ಲೆಕ್ಕಿಸದೆ ಬೆಳಗ್ಗೆ ಬೇಗನೆ ಬಂದು ಮತದಾನ ಮಾಡುತ್ತಾರೆ ಎಂದು ವಿಶ್ವಾಸವಿದೆ. ಉತ್ತಮ ಸುಶಿಕ್ಷಿತ ಮತದಾರರು ಇರುವ ಜಿಲ್ಲೆ ಇದಾಗಿದ್ದು, ಹಿಂದಿನ ಬಾರಿಗಿಂತ ಹೆಚ್ಚಿನ ಪ್ರಮಾಣದ ಮತದಾನ ಈ ಬಾರಿ ಆಗಲಿದೆ ಎಂದು ಅಣ್ಣಾಮಲೈ ಭರವಸೆ ವ್ಯಕ್ತಪಡಿಸಿದರು.
ದೇಶದ ಜನತೆಯ ನೆಚ್ಚಿನ ನಾಯಕ ನರೇಂದ್ರ ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡುವಲ್ಲಿ ಒಂದೊಂದು ಮತವೂ ಅತ್ಯಂತ ಮುಖ್ಯವಾಗಿದೆ ಎಂದು ಅವರು ಹೇಳಿದರು.
ಇದೇ ಸಮದರ್ಭದಲ್ಲಿ ಅಣ್ಣಾಮಲೈ ಅವರಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಸ್ಮರಣಿಕೆ ನೀಡಿ ಗೌರವಿಸಿದರು.
ಸುದ್ದಿಗೋಷ್ಠಿಯಲ್ಲಿ ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಶಾಸಕರಾದ ಡಿ. ವೇದವ್ಯಾಸ ಕಾಮತ್, ಡಾ. ವೈ ಭರತ್ ಶೆಟ್ಟಿ, ರಾಜೇಶ್ ನಾಯಕ್, ಚುನಾವಣೆ ಪ್ರಭಾರಿ ಕ್ಯಾ. ಗಣೇಶ್ ಕಾರ್ಣಿಕ್, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಪಕ್ಷದ ಹಿರಿಯ ಮುಖಂಡರಾದ ಮೋನಪ್ಪ ಭಂಡಾರಿ, ಮಾಜಿ ಶಾಸಕರಾದ ಸಂಜೀವ ಮಠಂದೂರು, ಬಿ. ನಾಗರಾಜ ಶೆಟ್ಟಿ ಸೇರಿದಂತೆ ಹಲವು ಪ್ರಮುಖರಿದ್ದರು.