ಇತ್ತೀಚಿನ ಸುದ್ದಿ
ಸಂಕಷ್ಟಕ್ಕೀಡಾದ ಬಿಗ್ ಬಾಸ್ ಸೀಸನ್ 11: ಶೋ ನಿಲ್ಲಿಸುವಂತೆ ಬೆಂಗಳೂರು ಜಿಪಂ ಸಿಇಒ ಆದೇಶ
10/01/2025, 21:26
ಬೆಂಗಳೂರು(reporterkarnataka.com): ಬಿಗ್ ಬಾಸ್ ಸೀಸನ್ 11 ಕನ್ನಡ ಕಾರ್ಯಕ್ರಮವನ್ನು
ಗ್ರಾಂಡ್ ಫಿನಾಲೆಗೆ ಇನ್ನೇನು ಕೆಲವೇ ವಾರಗಳು ಬಾಕಿ ಉಳಿದಿರುವಾಗ ಶೋ ನಿಲ್ಲಿಸುವಂತೆ ಬೆಂಗಳೂರು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ. ಎಸ್. ಲತಾ ಕುಮಾರಿ ಅವರು ಆದೇಶ ನೀಡಿದ್ದಾರೆ.
ಕೆಂಗೇರಿ ಹೋಬಳಿ ಮಾಳಿಗೊಂಡನಹಳ್ಳಿ ಗ್ರಾಮದ ಸರ್ವೇ ನಂಬರ್ 128/1ರ 7 ಎಕರೆ 18 ಗುಂಟೆ ಜಮೀನಿನಲ್ಲಿ ಬಿಗ್ ಬಾಸ್ ಸೀಸನ್ 11 ಕನ್ನಡ ಎಂಬ ವಾಣಿಜ್ಯ ಕಾರ್ಯಕ್ರಮವನ್ನು ಅಕ್ರಮ ಹಾಗೂ ಕಾನೂನು ಬಾಹಿರವಾಗಿ ನಡೆಯುತ್ತಿರುವುದರ ಬಗ್ಗೆ ಜಿಲ್ಲಾ ಪಂಚಾಯತ್ ಕಚೇರಿಗೆ ಪ್ರೆಸ್ ಕ್ಲಬ್ ಕೌನ್ಸಿಲ್ ರಾಜ್ಯಾಧ್ಯಕ್ಷ ರಾಘವೇಂದ್ರ ಆಚಾರ್ ದೂರು ಸಲ್ಲಿಸಿದ್ದಾರೆ.
ಸರ್ವೆ ನಂಬರ್ 128/1ರ 7 ಎಕರೆ 18 ಗುಂಟೆ ವಿಸ್ತೀರ್ಣದ ವ್ಯವಸಾಯದ ಜಮೀನನ್ನು ಮಾಸ್ಟರ್ ಪ್ಲಾನ್ ಮಾಡಿ ಕ್ಲಬ್ ಅಗ್ರಿಕಲ್ಚರ್ ಉದ್ದೇಶಕ್ಕೆ ದಿನಾಂಕ 15. 12. 2023 ರಂದು ಭೂ ಪರಿವರ್ತನೆಯಾಗಿರುತ್ತದೆ. ಸದರಿ ಭೂ ಪರಿವರ್ತನೆ ಉದ್ದೇಶ ಬದಲಾವಣೆ ಆಗಬೇಕಾದರೆ ಸೆಕ್ಷನ್ 97 ರ ಪ್ರಕಾರ ಹೊಸ ಆದೇಶ ಪಡೆಯಬೇಕಾಗಿದ್ದು ಹಾಗೂ ವಿವಿಧ ಇಲಾಖೆಗಳಿಂದ ಅಂದರೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಕಾರ್ಮಿಕ ಇಲಾಖೆ ಮತ್ತು ಸ್ಥಳೀಯ ಗ್ರಾಮ ಪಂಚಾಯಿತಿಯಿಂದ ಅನುಮತಿ ಪತ್ರ ಪಡೆದ ನಂತರ ವಾಣಿಜ್ಯ ಕಾರ್ಯಕ್ರಮವನ್ನು ನಡೆಸಬೇಕಾಗಿರುತ್ತದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಈ ಹಿಂದೆ ಇದ್ದಂತಹ ಜಿಲ್ಲಾಧಿಕಾರಿಗಳಾದ ದಯಾನಂದ್ ಅವರಿಗೂ ಸಹ ದೂರನ್ನು ನೀಡಿರುತ್ತಾರೆ, ಈ ದೂರಿಗೆ ಸ್ಪಂದಿಸಿ ಜಿಲ್ಲಾಧಿಕಾರಿಗಳು ತಹಶೀಲ್ದಾರ್ ರವರಿಗೆ ಸ್ಥಳ ಪರಿಶೀಲನೆ ಮಾಡಿ ವರದಿ ಸಲ್ಲಿಸುವಂತೆ ಸೂಚಿಸಿರುತ್ತಾರೆ. ಅದರಂತೆ ತಹಶೀಲ್ದಾರ್ ರವರು ಬಿಗ್ ಬಾಸ್ ಸೀಸನ್ 11 ಕನ್ನಡ ಎಂಬ ಅಕ್ರಮ ಹಾಗೂ ಕಾನೂನುಬಾರಿವಾಗಿ ನಡೆಯುತ್ತಿರುವುದನ್ನು ಹಾಗೂ ಯಾವುದೇ ಪ್ರಾಧಿಕಾರದಿಂದ ಅನುಮತಿ ಪಡೆಯದೆ, ಕ್ಲಬ್ ಅಗ್ರಿಕಲ್ಚರ್ ಉದ್ದೇಶಕ್ಕೂ ಬಳಸದೆ ಬಿಗ್ ಬಾಸ್ ಎಂಬ ವಾಣಿಜ್ಯ ಕಾರ್ಯಕ್ರಮವನ್ನು ನಡೆಸುತ್ತಿರುವುದನ್ನು ಜಿಲ್ಲಾಧಿಕಾರಿಗಳಿಗೆ ತಿಳಿಸಿರುತ್ತಾರೆ.
ತಹಶೀಲ್ದಾರ್ ವರದಿಯ ಮೇರೆಗೆ ಜಿಲ್ಲಾಧಿಕಾರಿ ಅವರು ದಿನಾಂಕ 16.8.2024 ರಂದು ಸದರಿ ಭೂ ಪರಿವರ್ತನೆಯನ್ನು ರದ್ದುಪಡಿಸುವುದಾಗಿ ತಿಳಿಸುತ್ತಾರೆ.
ರಾಮೋಹಳ್ಳಿ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಯಾದ ಭಾರತಿ ಅವರು ದಿನಾಂಕ 20/12/2024 ಹಾಗೂ 21/12 /2024 ರಂದು ಸಂಬಂಧಪಟ್ಟವರಿಗೆ ನೋಟಿಸ್ ಸಹ ನೀಡಲಾಗಿ ಈ
ಬಿಗ್ ಬಾಸ್ ಕಾರ್ಯಕ್ರಮ ನಡೆಸಲು ಪಂಚಾಯಿತಿಯಿಂದ ಯಾವುದೇ ಅನುಮತಿ ಪಡೆದಿರುವುದಿಲ್ಲ ಎಂದು ತಿಳಿಸಿರುತ್ತಾರೆ. ಅದರಂತೆ ರಾಮೋಹಳ್ಳಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ದಿನಾಂಕ 21.12.2024ರಂದು ಗ್ರಾಮ ಪಂಚಾಯಿತಿಯಿಂದ ನೀಡಿದಂತಹ ನಮೂನೆ -11ಬಿ ವಿತರಿಸಲಾದ ಮತ್ತು ಕ್ಲಬ್ ಉದ್ದೇಶಕ್ಕೆ ಲೈಸೆನ್ಸ್ ಅನ್ನು ವಿತರಿಸಲಾಗಿದನ್ನು ರದ್ದುಗೊಳಿಸಲಾಗಿದೆ ಎಂದು ಪತ್ರದ ಮುಖೇನ ಸಾಮಾಜಿಕ ಕಾರ್ಯಕರ್ತ ರಾಘವೇಂದ್ರಚಾರ್ ಅವರಿಗೂ ಹಾಗೂ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸಹ ತಿಳಿಸಿರುತ್ತಾರೆ.
ಈ ಎಲ್ಲಾ ಬೆಳವಣಿಗೆ ಹಾಗೂ ರಾಘವೇಂದ್ರ ಚಾರ್ ಅವರ ದೂರನ್ನು ಪರಿಶೀಲಿಸಿ ಕೂಡಲೇ ಬಿಗ್ ಬಾಸ್ ಸೀಸನ್ 11 ಕನ್ನಡ ಕಾರ್ಯಕ್ರಮವನ್ನು ಸ್ಥಗಿತಗೊಳಿಸಿ ನಿಯಮಾನುಸುರ ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಕೆ. ಎಸ್. ಲತಾ ಕುಮಾರಿ ಅವರು ದಿನಾಂಕ 6/ 1/2025 ರಂದು ಆದೇಶ ಮಾಡುವ ಮೂಲಕ ಕಾರ್ಯನಿರ್ವಾಹಕ ಅಧಿಕಾರಿಗೆ ಪತ್ರ ಬರೆದು ತಿಳಿಸಿರುತ್ತಾರೆ.
ಆದರೆ ಕಾರ್ಯನಿರ್ವಾಹಕ ಅಧಿಕಾರಿ ಬಿಂದು ರವರು ಈ ಮೇಲ್ ಅಧಿಕಾರಿಗಳ ಆದೇಶವನ್ನು ಪಾಲಿಸದೆ, ಬೇಜವಾಬ್ದಾರಿ ಹಾಗೂ ಉಡಾಫೆ ಉತ್ತರವನ್ನು ನೀಡುತ್ತಾರೆ. ಇಷ್ಟೆಲ್ಲಾ ಬೆಳವಣಿಗೆ ನಂತರವು ಕಾರ್ಯನಿರ್ವಾಹಕ ಅಧಿಕಾರಿ ಬಿಂದು ರವರು ಎಚ್ಚೆತ್ತುಕೊಂಡು ಪೊಲೀಸರ ಸಹಾಯ ಪಡೆದು ಸದರಿ ಬಿಗ್ ಬಾಸ್ ಸೀಸನ್ 11 ಕನ್ನಡ ಎಂಬ ಕಾರ್ಯಕ್ರಮವನ್ನು ಸ್ಥಗಿತಗೊಳಿಸಿ ತೆರವುಗೊಳಿಸಬೇಕೆಂದು ಸಾರ್ವಜನಿಕರ ಒತ್ತಾಯವಾಗಿದೆ.