ಇತ್ತೀಚಿನ ಸುದ್ದಿ
ಕಾಂಗ್ರೆಸ್‌ಗೆ ಬಿಗ್ ಶಾಕ್; 48 ವರ್ಷಗಳ ಇತಿಹಾಸವಿರುವ 24 ಅಕ್ಬರ್ ರೋಡ್ ಕಚೇರಿ ಖಾಲಿ ಮಾಡಲು ಡೆಡ್‌ಲೈನ್!
25/03/2026, 18:06
ನವದೆಹಲಿ(reporterkarnataka.com): ದೇಶದ ರಾಜಕಾರಣದಲ್ಲಿ ಹಲವು ದಶಕಗಳ ಕಾಲ ಪಾರುಪತ್ಯ ಮೆರೆದಿದ್ದ, ಹಾಗೂ ಅನೇಕ ಏಳುಬೀಳುಗಳನ್ನು ಕಂಡಿರುವ ಕಾಂಗ್ರೆಸ್ ಪಕ್ಷಕ್ಕೆ ಇದೀಗ ಅನಿರೀಕ್ಷಿತ ಸಂಕಷ್ಟವೊಂದು ಎದುರಾಗಿದೆ. ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ಕಳೆದ 48 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಶಕ್ತಿ ಕೇಂದ್ರವಾಗಿ ಮತ್ತು ಅಧಿಕಾರದ ಬಿಂದುವಾಗಿ ಹಾಗೂ ಅನೇಕ ರಾಜಕೀಯ ಪಲ್ಲಟಗಳಿಗೆ ಸಾಕ್ಷಿಯಾಗಿ ಕಾರ್ಯನಿರ್ವಹಿಸುತ್ತಿದ್ದ 24 ಅಕ್ಬರ್ ರೋಡ್ ಕಚೇರಿಯನ್ನು ಖಾಲಿ ಮಾಡುವಂತೆ ಎಸ್ಟೇಟ್ ಇಲಾಖೆ ನೋಟಿಸ್ ಜಾರಿ ಮಾಡಿದೆ.
ಇದೇ ಮಾರ್ಚ್ 28 (ಶನಿವಾರ)ರೊಳಗಾಗಿ 24 ಅಕ್ಬರ್ ರೋಡ್‌ನಲ್ಲಿರುವ ಪಕ್ಷದ ಕಚೇರಿಯನ್ನು ತೆರವುಗೊಳಿಸುವಂತೆ, ಕಾಂಗ್ರೆಸ್ ಪಕ್ಷಕ್ಕೆ ಎಸ್ಟೇಟ್ ಇಲಾಖೆ ನೋಟಿಸ್ ನೀಡಿದೆ. 1978ರಿಂದಲೂ ಈ ಬೃಹತ್ ಬಂಗಲೆ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಪ್ರಧಾನ ಕಚೇರಿಯಾಗಿ ಕಾರ್ಯನಿರ್ವಹಿಸುತ್ತಿತ್ತು. ಇಂದಿರಾ ಗಾಂಧಿ ಕಾಲದಿಂದ ಹಿಡಿದು ಇಂದಿನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವರೆಗೂ, 24 ಅಕ್ಬರ್ ರೋಡ್ ಕಚೇರಿಯೇ ಕಾಂಗ್ರೆಸ್ ಪಕ್ಷದ ಜೀವಾಳವಾಗಿತ್ತು.

ಕಳೆದ 2023ರಲ್ಲಿ ಹೊಸದಿಲ್ಲಿಯ ಕೋಟ್ಲಾ ಮಾರ್ಗದಲ್ಲಿ ಕಾಂಗ್ರೆಸ್ ನೂತನ ಕಚೇರಿ ಇಂದಿರಾ ಭವನ ಉದ್ಘಾಟನೆಗೊಂಡಿದೆ. ಅಲ್ಲಿಯವರೆಗೂ 24 ಅಕ್ಬರ್ ರೋಡ್‌ನಲ್ಲಿರುವ ಬಂಗಲೆಯೇ ಪಕ್ಷದ ರಾಷ್ಟ್ರೀಯ ಪ್ರಧಾನ ಕಚೇರಿಯಾಗಿತ್ತು. ಪಕ್ಷ ತನ್ನ ಚಟುವಟಿಕೆಗಳನ್ನು ಇಂದಿರಾ ಭವನಕ್ಕೆ ವರ್ಗಾಯಿಸಿದ ಮೇಲೂ, ಅಕ್ಬರ್ ರಸ್ತೆಯಲ್ಲಿರುವ ಕಟ್ಟಡಕ್ಕೆ ಮಾರುಕಟ್ಟೆ ದರದಂತೆ ಬಾಡಿಗೆ ಪಾವತಿಸುತ್ತಿತ್ತು. ಆದರೆ ಈಗ ಕೇಂದ್ರ ಸರ್ಕಾರದ ಎಸ್ಟೇಟ್ ಇಲಾಖೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದು, ಬರುವ ಮಾರ್ಚ್ 28ರ ಗಡುವಿನೊಳಗೆ ಕಚೇರಿ ಸಂಪೂರ್ಣ ಖಾಲಿ ಮಾಡುವಂತೆ ತಾಕೀತು ಮಾಡಿದೆ.












