ಇತ್ತೀಚಿನ ಸುದ್ದಿ
ಭೂಮಿ ಕೊಟ್ಟ ರೈತರಿಗೆ ಉಚಿತವಾಗಿ ರೋಗ ಕೊಟ್ಟ ಎಂಆರ್ ಪಿಎಲ್, ಎಸ್ ಇಝಡ್!: ಹೋರಾಟದ ಹಾದಿಯಲ್ಲಿ ಸ್ಥಳೀಯರು
04/03/2023, 22:31
ಅಶೋಕ್ ಕಲ್ಲಡ್ಕ ಮಂಗಳೂರು
ಅನುಷ್ ಪಂಡಿತ್ ಮಂಗಳೂರು
info.reporterkarnataka@gmail.com
ಜಿಲ್ಲೆಗೆ ಬೃಹತ್ ಕೈಗಾರಿಕೆಗಳು ಬಂದರೆ ಸ್ಥಳೀಯರಿಗೆ ಉದ್ಯೋಗ ದೊರಕುತ್ತದೆ. ಆರ್ಥಿಕ ವ್ಯವಹಾರ ಕುದುರುತ್ತದೆ ಎಂಬ ಆಸೆ ತೋರಿಸಿ 3-4 ದಶಕಗಳ ಹಿಂದೆ ಕರಾವಳಿಗೆ ಎಂಟ್ರಿ ಕೊಟ್ಟ ಬೃಹತ್ ಕೈಗಾರಿಕೆಗಳ ನಿಜ ಸ್ವರೂಪ ಒಂದೊಂದಾಗಿ ಬಯಲಾಗುತ್ತಿದೆ. ಸಾರ್ವಜನಿಕ ರಂಗದ ಪ್ರತಿಷ್ಠಿತ ಕಂಪನಿಯಾದ ಎಂಆರ್ ಪಿಎಲ್ ಬಂದ ಬಳಿಕ ಸಾಲು ಸಾಲಾಗಿ ಲಗ್ಗೆ ಇಟ್ಟ ಬೃಹತ್ ಕೈಗಾರಿಕೆಗಳು ಉದ್ಯೋಗ ಏನೋ ಸೃಷ್ಟಿಸಿದೆ. ಆದರೆ ಸ್ಥಳೀಯರಿಗೆ ನೌಕರಿ ನೀಡಿಲ್ಲ. ಬದಲಿಗೆ ಸಾವಿರಾರು ಎಕರೆ ಫಲವತ್ತಾದ ಭೂಮಿಯನ್ನು ಕೊಟ್ಟ ರೈತ – ಕೃಷಿಕರಿಗೆ ಉಚಿತವಾಗಿ ರೋಗ ಕೊಟ್ಟಿದೆ.
ಸಾರ್ವಜನಿಕ ರಂಗದ ಎಂಆರ್ ಪಿಎಲ್ ತಡರಾತ್ರಿ ಮಾಲಿನ್ಯ ಬಿಡುಗಡೆ ಮಾಡುವಾಗ ಉಂಟಾಗುವ ದುರ್ನಾತ ಕುರಿತು ಇತ್ತೀಚೆಗಷ್ಟೇ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ನೇತೃತ್ವದಲ್ಲಿ ಸ್ಥಳೀಯ ನಾಗರಿಕರು ಬೃಹತ್ ಪ್ರತಿಭಟನೆಯನ್ನು ಎಂಆರ್ ಪಿಎಲ್ ಕಾರ್ಗೋ ಗೇಟ್ ಎದುರು ನಡೆಸಿದ್ದರು. ನಾಗರಿಕರು ತಮ್ಮ ಸಮಸ್ಯೆ ಕೇಳಲು ಎಂಆರ್ ಪಿಎಲ್ ಎಂಡಿ ವೆಂಕಟೇಶ್ ಅವರು ಸ್ಥಳಕ್ಕೆ ಬರಬೇಕೆಂದು ಆಗ್ರಹಿಸಿದರೂ ಎಂಡಿಯಾಗಲಿ, ಸ್ಥಳೀಯರೇ ಆದ ಜನರಲ್ ಮೆನೇಜರ್ ಆಗಲಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸದೆ ವೆಲ್ಫೇರ್ ಆಫೀಸರ್ ಅವರನ್ನು
ಸ್ಥಳೀಯರ ಜತೆ ಮಾತುಕತೆಗೆ ಕಳುಹಿಸಿದ್ದರು.
ಇದೀಗ ಕಳೆದ ನಾಲ್ಕೈದು ದಿನಗಳಿಂದ
ಬೈಕಂಪಾಡಿ ಕೈಗಾರಿಕಾ ವಲಯ, ಎಂಆರ್ ಪಿಎಲ್, ಎಸ್ ಇಝಡ್ ತಮ್ಮ ಕೈಗಾರಿಕಾ ಮಾಲಿನ್ಯದ ತ್ಯಾಜ್ಯವನ್ನು ಫಲ್ಗುಣಿ ನದಿ ಸೇರುವ ತೋಕೂರು ಹಳ್ಳಕ್ಕೆ ಹರಿಯಬಿಟ್ಟಿದೆ. ಇದರಿಂದ ನೀರು ಕಪ್ಪು ಬಣ್ಣಕ್ಕೆ ತಿರುಗಿ ಪೂರ್ತಿ ಕೊಳೆತು ನಾರುತ್ತಿದ್ದೆ. ಇದೆಲ್ಲ ನೇರವಾಗಿ ಪಲ್ಗುಣಿ ನದಿಗೆ ಸೇರುತ್ತಿದೆ.










ಈ ಕುರಿತು ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಅಧಿಕಾರಿಗೆ ಹೋರಾಟ ಸಮಿತಿ
ದೂರು ನೀಡಿದೆ. ಪ್ರಾದೇಶಿಕ ಅಧಿಕಾರಿ ರಮೇಶ್ ನೇತೃತ್ವದ ತಂಡ ಸ್ಥಳ ಪರಿಶೀಲನೆ ನಡೆಸಿ ನೀರಿನ ಸ್ಯಾಂಪಲ್ ಸಂಗ್ರಹಿಸಿದೆ. ಅಷ್ಟೇ ಅಲ್ಲದೆ ಕೈಗಾರಿಕಾ ಮಾಲಿನ್ಯ ಆಗುತ್ತಿರುವುದು ಮೇಲ್ನೋಟಕ್ಕೆ ಗೋಚರಿಸುತ್ತಿರುವುದಾಗಿ ತಂಡ ಒಪ್ಪಿಕೊಂಡಿದೆ. ಈ ಕುರಿತು ಸರಿಯಾದ ತನಿಖೆ ನಡೆಸಿ ತಪ್ಪಿತಸ್ಥ ಕಂಪೆನಿಗಳ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲು, ಪಲ್ಗುಣಿ ನದಿಯನ್ನು ಉಳಿಸಲು ನಾಗರಿಕ ಹೋರಾಟ ಸಮಿತಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳನ್ನು ಆಗ್ರಹಿಸಿದೆ. ಇಲ್ಲದಿದ್ದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದೆ.
ಎಂಆರ್ ಪಿಎಲ್ ಸೇರಿದಂತೆ ಇಲ್ಲಿನ ಬೃಹತ್ ಕೈಗಾರಿಕೆಗಳು ಪರಿಸರ, ಉದ್ಯೋಗದ ವಿಷಯದಲ್ಲಿ ಖಾಸಗಿ ಕಾರ್ಪೊರೇಟ್ ಕಂಪೆನಿಗಳಿಗಿಂತಲೂ ಕೆಟ್ಟದಾಗಿ ವರ್ತಿಸುತ್ತಿದೆ. ಹಸಿರು ವಲಯ ನಿರ್ಮಾಣದ ಕಡ್ಡಾಯ ನಿಯಮವನ್ನೂ ಉಲ್ಲಂಘಿಸಿದೆ. ಜೋಕಟ್ಟೆ, ಕಳವಾರು, ಕೆಂಜಾರು ಗ್ರಾಮಗಳ ಜನವಸತಿ ಪ್ರದೇಶದಲ್ಲಿ ಮಾರಣಾಂತಿಕ ಪೆಟ್ ಕೋಕ್ ಮಾಲಿನ್ಯ ತಡೆಯಲು 27 ಎಕರೆ ಹಸಿರು ವಲಯ ನಿರ್ಮಿಸುವ ಸರಕಾರಿ ಆದೇಶದಂತೆ ಭೂಮಿ ಗುರುತಿಸಿದರೂ ಕಂಪೆನಿ ಕುಂಟು ನೆಪಗಳನ್ನು ಮುಂದಿಟ್ಟು ಕಾಲಹರಣ ಮಾಡುತ್ತಿದೆ. ಇದರಿಂದ ಜೋಕಟ್ಟೆ, ಕಳವಾರು ಗ್ರಾಮಗಳು ರೋಗಗ್ರಸ್ತಗೊಂಡಿವೆ. ಜನರಿಗೆ ಕಣ್ಣುರಿ, ಚರ್ಮರೋಗ ಶುರುವಾಗಿದೆ. ಉಬ್ಬಸ, ಉಸಿರಾಟ ಸಮಸ್ಯೆಯೂ ಅಧಿಕವಾಗಿದೆ. ಕಂಪೆನಿಗಳ ಮಾಲಿನ್ಯದಿಂದ ಪಲ್ಗುಣಿ ನದಿಯಲ್ಲಿ ಮೀನುಗಳ ಮಾರಣ ಹೋಮ ನಡೆದಿದೆ. ಸಮುದ್ರದಲ್ಲಿ ಮೀನುಗಳ ಸಂತತಿ ಕಡಿಮೆಯಾಗುತ್ತಿದೆ. ಕಂಪೆನಿಯ ಉದ್ಯೋಗ ನೇಮಕಾತಿಯಲ್ಲಿ ಸ್ಥಳೀಯರನ್ನು ಮುಲಾಜಿಲ್ಲದೆ ಹೊರಗಿಡಲಾಗುತ್ತಿದೆ ಎಂದು ಸ್ಥಳೀಯರು ರಿಪೋರ್ಟರ್ ಕರ್ನಾಟಕಕ್ಕೆ ತಿಳಿಸಿದ್ದಾರೆ.














