ಇತ್ತೀಚಿನ ಸುದ್ದಿ
ಬೆಸೆಂಟ್ ಸಂಧ್ಯಾ ಕಾಲೇಜು: ಎಂಕಾಂನಲ್ಲಿ ಪ್ರಥಮ ರ‍್ಯಾಂಕ್ ಪಡೆದ ಶೀತಲ್ ನಾಯಕ್ ಗೆ ಸನ್ಮಾನ
13/05/2022, 22:02
ಮಂಗಳೂರು(reporterkarnataka.com); ಬೆಸೆಂಟ್ ಸಂಧ್ಯಾ ಕಾಲೇಜಿನ ಸ್ನಾತಕೋತ್ತರ (ಎಂ.ಕಾಂ) ವಿಭಾಗದ ಶೀತಲ್ ನಾಯಕ್ ಅವರು ಮಂಗಳೂರು ವಿಶ್ವವಿದ್ಯಾನಿಲಯ ೨೦೨೧ ರ ಅಕ್ಟೋಬರ್‌ನಲ್ಲಿ ನಡೆಸಿದ ಎಂ.ಕಾಂ ಪರೀಕ್ಷೆಯಲ್ಲಿ ಪ್ರಥಮ ರ‍್ಯಾಂಕ್‌ನೊಂದಿಗೆ ಎರಡು ಚಿನ್ನದ ಪದಕ ಪಡೆದಿದ್ದು, ಈ ಹೆಮ್ಮೆಯ ಸಾಧನೆಗಾಗಿ ಕಾಲೇಜಿನ ವತಿಯಿಂದ ಅವರನ್ನು ಸನ್ಮಾನಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಡಾ. ಲಕ್ಷ್ಮೀನಾರಾಯಣ ಭಟ್ ಅವರು ಅತಿಥಿಗಳನ್ನು ಹಾಗೂ ಆಹ್ವಾನಿತರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿದರು.
ಸ್ನಾತಕೋತ್ತರ ವಿಭಾಗದ ಉಪನ್ಯಾಸಕಿ ತಾರಾ ಶೆಟ್ಟಿ ಅವರು ಶೀತಲ್ ಅವರ ಶೈಕ್ಷಣಿಕ ಹಾಗೂ ಶೈಕ್ಷಣಿಕೇತರ ಸಾಧನೆಗಳನ್ನು ಪರಿಚಯಿಸುತ್ತಾ ಅವರು ಶಿಕ್ಷಣದಲ್ಲಿ ಮಾತ್ರವಲ್ಲದೆ ತುಳು ಚಲನಚಿತ್ರಗಳಾದ “ದಬಕ್ ದಬಕ್ ಐಸಾ” ದಲ್ಲಿ ನಾಯಕಿಯಾಗಿ, “ಕುದುಕನ ಮದಿಮೆ”, “ಭೋಜರಾಜ್ ಎಂ.ಬಿ.ಬಿ.ಎಸ್” ಇವುಗಳಲ್ಲಿ ನಟಿಸಿದ್ದಾರೆ ಹಾಗೂ ಅವರು ಮೆಹಂದಿ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆಂಬ ಅಂಶವನ್ನು ತಿಳಿಸಿದರು.
ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಸುರೇಶ್ ಪೈ (ಕಾರ್ಯದರ್ಶಿ, ಡಬ್ಲ್ಯು.ಎನ್.ಇ.ಎಸ್) ಅವರು ಮಾತನಾಡಿ ಶೀತಲ್‌ನ ಸಾಧನೆಯನ್ನು ಅಭಿನಂದಿಸಿದರು. ಮತ್ತೊಬ್ಬ ಅತಿಥಿಗಳಾದ ಮಣೆಲ್ ಅಣ್ಣಪ್ಪ ನಾಯಕ್, (ಉಪಾಧ್ಯಕ್ಷರು, ಡಬ್ಲ್ಯು.ಎನ್.ಇ.ಎಸ್)ಮಾತನಾಡಿ, ಶೀತಲ್‌ನ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷರಾಗಿದ್ದ ಕುಡ್ಪಿ ಜಗದೀಶ್ ಶೆಣೈ (ಅಧ್ಯಕ್ಷರು ಡಬ್ಲ್ಯು.ಎನ್.ಇ.ಎಸ್) ಅವರು ಮಾತನಾಡಿ, ಬೆಸೆಂಟ್ ಸಂಧ್ಯಾ ಕಾಲೇಜಿಗೆ ಕೀರ್ತಿಯನ್ನು ತಂದುಕೂಟ್ಟ ಶೀತಲ್ ರವರ ಸಾಧನೆಗೆ ಅಭಿನಂದಿಸಿ ಹರಸಿದರು. ಮಾತ್ರವಲ್ಲದೆ ಹಗಲು ಹೊತ್ತು ಕೆಲಸ ಕಾರ್ಯಗಳನ್ನು ಮಾಡಿ ಸಂಜೆ ಕಾಲೇಜಿನಲ್ಲಿ ಓದು ಮುಂದುವರೆಸಿ ವಿಶ್ವವಿದ್ಯಾನಿಲಯದಲ್ಲೇ ರ‍್ಯಾಂಕ್ ಪಡೆಯುವುದೆಂದರೆ ಬಹಳ ಹೆಮ್ಮೆಯ ವಿಚಾರ ಎಂದು ತಿಳಿಸಿದರು.
ಸ್ನಾತಕೋತ್ತರ ವಿಭಾಗದ ಹಿಂದಿನ ಮುಖ್ಯಸ್ಥರಾಗಿದ್ದ ಡಾ. ಶ್ರೀಧರ್ ಜೋಯಿಸರು ಹಾಗೂ ಗ್ರಂಥಪಾಲಕರಾದ ಡಾ. ವಾಸಪ್ಪ ಗೌಡರು ಮಾತನಾಡಿ ಶೀತಲ್‌ರವರನ್ನು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಎಂ.ಪಿ.ಭಟ್ (ಖಜಾಂಚಿ,
ಡಬ್ಲ್ಯು.ಎನ್.ಇ.ಎಸ್),ಸಂಧ್ಯಾ ಕಾಲೇಜಿನ ಸಂಚಾಲಕಗಣೇಶ ಕೃಷ್ಣಭಟ್
ಜೀವನ್‌ದಾಸ್ ನಾರಾಯಣ್ , ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳು, ಹಳೆ ವಿದ್ಯಾರ್ಥಿಗಳು ಹಾಗೂ ಸ್ನಾತಕ-ಸ್ನಾತಕೋತ್ತರ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸ್ನಾತಕೋತ್ತರ ವಿಭಾಗದ ಮುಖ್ಯಸ್ಥರಾಗಿದ್ದ ಡಾ. ಶ್ರೀಧರ್ ಮಣಿಯಾಣಿ ಇವರು ವಂದಿಸಿದರು.ಸಾತ್ವಿಕಾ ಶೆಟ್ಟಿ, (ಸ್ನಾತಕೋತ್ತರ ವಿಭಾಗದ ಉಪನ್ಯಾಸಕಿ) ಅವರು ಕಾರ್ಯಕ್ರಮ ನಿರೂಪಿಸಿದರು.