ಇತ್ತೀಚಿನ ಸುದ್ದಿ
ಬೆಂಗಳೂರು: ಬಾಗ್ಮನೆ ಟೆಕ್ ಪಾರ್ಕ್ ಒತ್ತುವರಿ ತೆರವು 3 ವಾರಗಳ ಕಾಲ ಮುಂದೂಡಿಕೆ
15/09/2022, 11:21
ಬೆಂಗಳೂರು(reporterkarnataka.com): ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆ ಮುಂದುವರಿಯಲು ಸ್ವಲ್ಪ ಕಾಲಾವಕಾಶ ಬೇಕಿದೆ. ಸರಿಯಾದ ರೀತಿಯಲ್ಲಿ ಮತ್ತು ತುರ್ತಾಗಿ ತೆರವು ಕಾರ್ಯಾಚರಣೆ ನಡೆಸುವ ನಿಟ್ಟಿನಲ್ಲಿ ಉಭಯ ಪಕ್ಷಕಾರರು ಪರಸ್ಪರ ಸಹಕಾರ ನೀಡಬೇಕು. ಬಾಗ್ಮನೆ ಟೆಕ್‍ಪಾರ್ಕ್ ಪ್ರಕರಣವನ್ನು ಮೂರು ವಾರಗಳ ಕಾಲ ಮುಂದೂಡಲಾಗಿದೆ ಎಂದು ಲೋಕಾಯುಕ್ತ ಆದೇಶದಲ್ಲಿ ಹೇಳಲಾಗಿದೆ.
ಬಿಬಿಎಂಪಿಯು ಬಾಗ್ಮನೆ ಟೆಕ್‍ಪಾರ್ಕ್ ಬಳಿ ರಾಜಕಾಲುವೆ ಒತ್ತುವರಿ ಆಗಿರುವುದನ್ನು ತೆರವು ಮಾಡುವುದಕ್ಕೆ ಸಂಬಂಧಿಸಿದಂತೆ ಮಾರ್ಕ್ ಮಾಡಿತ್ತು. ಈ ಹಿನ್ನೆಲೆಯಲ್ಲಿ ಬಾಗ್ಮನೆ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ ಶನಿವಾರ ನೀಡಿದ್ದ ದೂರಿನ ವಿಚಾರಣೆ ನಡೆಸಿ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಸೆ.12ರಂದೇ ಆದೇಶ ಮಾಡಿದ್ದಾರೆ.
ನಗರದಲ್ಲಿ ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆ ನಡೆಸುವುದಕ್ಕೂ ಮುನ್ನ ಕಾನೂನು ಪ್ರಕ್ರಿಯೆ ಪಾಲಿಸುವಂತೆ ಲೋಕಾಯುಕ್ತ ನಿರ್ದೇಶಿಸಿದ ಹಿನ್ನೆಲೆಯಲ್ಲಿ ಬಾಗ್ಮನೆ ಟೆಕ್‍ಪಾರ್ಕ್ ಬಳಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ಒತ್ತುವರಿ ತೆರವು ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು.
ಬಿಬಿಎಂಪಿಯು ತಾರತಮ್ಯದಿಂದ ಬಾಕ್ಸ್ ಚರಂಡಿಗಳನ್ನು (ಡ್ರೈನ್ಸ್) ತೆರವು ಮಾಡಬಾರದು. ಇದರಿಂದ ದೂರುದಾರರಾದ ಬಾಗ್ಮನೆ ಮತ್ತು ಸಮೀಪದ ಸ್ಥಳಗಳಲ್ಲಿ ಪ್ರವಾಹದ ನೀರು ತುಂಬಿಕೊಳ್ಳುವ ಸಾಧ್ಯತೆ ಇದೆ. ಒಂದು ವೇಳೆ ಆರ್‍ಸಿಸಿ ಕಾಲುವೆಯ ಮಟ್ಟದ ವ್ಯತ್ಯಾಸದಿಂದ ನೀರಿನ ಹರಿವಿನಲ್ಲಿ ಅಡಚಣೆ ಉಂಟಾಗಿ ತೊಂದರೆಯಾಗುತ್ತಿದೆ ಎನ್ನುವ ಆತಂಕ ಬಿಬಿಎಂಪಿಯದಾಗಿದ್ದರೆ, ದೂರುದಾರರು (ಬಾಗ್ಮನೆ ಟೆಕ್‍ಪಾರ್ಕ್) ಕಾಲುವೆಯ ಮೇಲಿನ ನಿರ್ದಿಷ್ಟ ಸ್ಥಳಗಳಲ್ಲಿ ಚಪ್ಪಡಿಗಳನ್ನು ತೆಗೆದು ಅಧಿಕಾರಿಗಳು ಪರಿಶೀಲಿಸಲು ಅನುವು ಮಾಡಲಿ ಎಂದು ಲೋಕಾಯುಕ್ತ ನ್ಯಾ.ಬಿ.ಎಸ್. ಪಾಟೀಲ್ ಅವರು ತಮ್ಮ ಆದೇಶದಲ್ಲಿ ಹೇಳಿರುವುದಾಗಿ ತಿಳಿದುಬಂದಿದೆ.
ಬಾಗ್ಮನೆ ಟೆಕ್‍ಪಾರ್ಕ್ ವಾದ ಮಂಡಿಸಿ, ‘ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆಗೂ ಮುನ್ನ ಬಿಬಿಎಂಪಿಯು ನೋಟಿಸ್ ಜಾರಿ ಮಾಡಿಲ್ಲ. ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡಿರುವ ಮತ್ತೊಂದು ರಿಯಲ್ ಎಸ್ಟೇಟ್ ಕಂಪೆನಿಗೆ ಬಿಬಿಎಂಪಿ ನೆರವು ನೀಡಿದೆ. ಆ ರಿಯಲ್ ಎಸ್ಟೇಟ್ ಕಂಪೆನಿಯು ರಾಜಕಾಲುವೆ ಒತ್ತುವರಿ ಮಾಡಿರುವುದರಿಂದ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗಿಲ್ಲ’ ಎಂದು ತಿಳಿಸಿತ್ತು.
‘ಬಾಗ್ಮನೆ ಟೆಕ್‍ಪಾರ್ಕ್ ಹಾಕಿರುವ ಆರ್‍ಸಿಸಿ ಕಾಲುವೆಯ ಮಟ್ಟದಲ್ಲಿನ ಎತ್ತರ ವ್ಯತ್ಯಾಸದಿಂದಾಗಿ ನೀರು ತುಂಬಿಕೊಂಡು ಪ್ರವಾಹಕ್ಕೆ ಕಾರಣವಾಗಿದೆ. ಅಲ್ಲದೇ, ಇತರೆ ರಿಯಲ್ ಎಸ್ಟೇಟ್ ಕಂಪೆನಿಗಳು ಒತ್ತುವರಿ ಮಾಡಿರುವುದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಹೋರಾಟ ನಡೆಸಿದ್ದು, ನ್ಯಾಯಾಲಯದ ನಿರ್ದೇಶನ ಪಾಲಿಸಲಾಗುವುದು ಎಂದು ಬಿಬಿಎಂಪಿ’ ವಾದ ಮಂಡಿಸಿತ್ತು.