ಇತ್ತೀಚಿನ ಸುದ್ದಿ
ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಪ್ರಕರಣ ಠಾಣೆಯಿಂದ ಕೋರ್ಟ್ ಗೆ: ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಚಾರ್ಜ್ ಶೀಟ್ ಸಲ್ಲಿಕೆ
28/05/2024, 19:33
ಬೆಂಗಳೂರು(reporterkarnataka.com): ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ವಿರುದ್ದದ ಎರಡು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
ಪ್ರಕರಣದ ಕುರಿತು ತನಿಖೆಗಾಗಿ ರಚಿಸಲ್ಪಟ್ಟ ವಿಶೇಷ ತನಿಖಾ ತಂಡದ ಮುಖ್ಯಸ್ಥರಾದ ಪುತ್ತೂರು ಠಾಣೆ ಇನ್ಸ್ ಪೆಕ್ಟರ್ ಸತೀಶ್ ಅವರು ಬೆಂಗಳೂರಿನಲ್ಲಿರುವ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಇದರೊಂದಿಗೆ ಶಾಸಕರ ವಿರುದ್ಧದ ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲೇರಿದಂತಾಗಿದೆ.
ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ ಅವರನ್ನು ಬೆಳ್ತಂಗಡಿ ಪೊಲೀಸರು ಅಕ್ರಮ ಗಣಿಗಾರಿಕೆ ಮತ್ತು ಸ್ಫೋಟಕ ಕಾಯ್ದೆಯಡಿ ಇತ್ತೀಚೆಗೆ ಬಂಧಿಸಿದ್ದರು. ಇದರಿಂದ ಆಕ್ರೋಶಗೊಂಡ ಶಾಸಕ ಹರೀಶ್ ಪೂಂಜ ಅವರು ಬೆಳ್ತಂಗಡಿ ಠಾಣೆಗೆ ತೆರಳಿ ಅಮಾಯಕರನ್ನು ಬಂಧಿಸಲಾಗಿದೆ ಎಂದು ಆರೋಪಿಸಿ ಬೆಳ್ತಂಗಡಿ ಪೊಲೀಸರ ವಿರುದ್ಧ ಕೂಗಾಡಿದ್ದರು. ಸಬ್ ಇನ್ಸ್ ಪೆಕ್ಟರ್ ಅವರಿಗೆ ಪೊಲೀಸ್ ಠಾಣೆ ನಿಮ್ಮ ಅಪ್ಪಂದಾ? ಎಂದು ಪ್ರಶ್ನಿಸಿದರು. ಮರುದಿನ ನಡೆದ ಪ್ರತಿಭಟನೆಯಲ್ಲಿ ಹರೀಶ್ ಪೂಂಜ ಅವರು ಬೆಳ್ತಂಗಡಿಯನ್ನು ಡಿಜೆ ಹಳ್ಳಿ ಕೆಜೆ ಹಳ್ಳಿ ಮಾಡುವುದಾಗಿ ಭಾಷಣ ಮಾಡಿದ್ದರು.