ಇತ್ತೀಚಿನ ಸುದ್ದಿ
ಬಂಟ್ವಾಳ ಕ್ಷೇತ್ರ: 1985ರಿಂದ 2023ರ ವರೆಗೆ ಕಾಂಗ್ರೆಸ್ ನಾಯಕ ರಮಾನಾಥ ರೈ ಅವರ ರಾಜಕೀಯ ಪಯಣ; ಒಂದು ಅವಲೋಕನ
30/03/2023, 18:15
ಬಂಟ್ವಾಳ(reporterkarnata.com): ಕರಾವಳಿ ಕರ್ನಾಟಕದ ಹಿರಿಯ ನೇತಾರ ಬಿ. ರಮಾನಾಥ ರೈ ಅವರು ಮತ್ತೆ ಚುನಾವಣಾ ಅಖಾಡಕ್ಕಿಳಿದಿದ್ದಾರೆ. ಇದೀಗ ಸತತ 9ನೇ ಬಾರಿಗೆ ಅವರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುತ್ತಿದ್ದಾರೆ.
ರಮಾನಾಥ ರೈ ಅವರು 2023ರ ರಾಜ್ಯ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಬಂಟ್ವಾಳ ಕ್ಷೇತ್ರದ ಅಭ್ಯರ್ಥಿ ಆಗಿ ಸ್ಪರ್ಧೆ ಮಾಡುತ್ತಿದ್ದಾರೆ. ಆ ಮೂಲಕ ಅವರು ಸತತ 9ನೇ ಬಾರಿಗೆ ಅದೃಷ್ಟ ಪರೀಕ್ಷೆ ಎದುರಿಸಲಿದ್ದಾರೆ.
ದಕ್ಷಿಣ ಕನ್ನಡ ರಾಜಕೀಯ ಇತಿಹಾಸದಲ್ಲೇ ಒಬ್ಬ ಅಭ್ಯರ್ಥಿ ಒಂದೇ ಪಕ್ಷದಿಂದ 9ನೇ ಬಾರಿ ಸ್ಪರ್ಧಿಸುತ್ತಿರುವುದು ದಾಖಲೆಯಾಗಿದೆ.
1985ರಿಂದ ಸಕ್ರೀಯ ಚುನಾವಣಾ ರಾಜಕೀಯಕ್ಕೆ ಪಾದರ್ಪಣೆ ಮಾಡಿದ ಬೆಳ್ಳಿಪಾಡಿ ರಮಾನಾಥ ರೈ ಅವರು ಮತ್ತೆ ಎಂದೂ ಹಿಂತಿರುಗಿ ನೋಡಿಯೇ ಇಲ್ಲ. ಕಾಂಗ್ರೆಸ್ ಪಕ್ಷದ ಜತೆ ಸುಮಾರು 45 ವರ್ಷಗಳ ದೀರ್ಘ ಪಯಣ ಅವರದ್ದಾಗಿದೆ. ಪಕ್ಷ ಅಧಿಕಾರದಲ್ಲಿರಲಿ, ಇಲ್ಲದಿದರಲಿ ರೈ ಅವರು ಕಾಂಗ್ರೆಸ್ಸೇ ಆಗಿರುತ್ತಾರೆ. ನೆಹರೂ ಕುಟುಂಬದ ಮೇಲಿನ ಅವರ ಗೌರವ ಪ್ರಶ್ನಾತೀತ. ತಾನು ನಂಬಿಕೊಂಡು ಬಂದ ರಾಜಕೀಯ ಸಿದ್ದಾಂತವನ್ನು ಅವರು ಎಂದೂ ಧಿಕ್ಕರಿಸಿದವರಲ್ಲ. ಈ ಹಿನ್ನೆಲೆಯಲ್ಲೇ ನಾಡಿನುದ್ಧಗಲ್ಲೂ ರೈ ಅವರ ಮೇಲೆ ಅಪಾರ ಗೌರವ. ಇದೇ ಕಾರಣದಿಂದ ಇದುವರೆಗೆ ಸ್ಪರ್ಧಿಸಿದ 8 ಚುನಾವಣೆಯಲ್ಲಿ 6 ಬಾರಿ ಅವರು ಜಯಭೇರಿ ಬಾರಿಸಿದ್ದಾರೆ.
ಇದೀಗ ರೈ ಅವರು 9ನೇ ಬಾರಿ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದಾರೆ. ಇದೊಂದು ಹೊಸ ದಾಖಲೆಯೇ ಸರಿ. ರೈ ಅವರು 1985 ರಿಂದ 2023ರ ವರೆಗೆ ನಿರಂತರವಾಗಿ ಚುನಾವಣೆಗಳಲ್ಲಿ ಸ್ಪರ್ಧಿಸುತ್ತಿದ್ದಾರೆ.
1985, 1989,1994 ಹಾಗೂ 1999ರ ಚುನಾವಣೆಯಲ್ಲಿ ಸತತವಾಗಿ ಜಯಗಳಿಸಿದ್ದಾರೆ.
2004ರ ಚುನಾವಣೆಯಲ್ಲಿ ಮೊದಲ ಬಾರಿಗೆ ಅವರಿಗೆ ಹಿನ್ನಡೆಯಾಯಿತು. ಬಿಜೆಪಿಯ ನಾಗರಾಜ ಶೆಟ್ಟಿ ವಿರುದ್ಧ ಸೋಲು ಅನುಭವಿಸಬೇಕಾಯಿತು.
ಮತ್ತೇ 2008 ಹಾಗೂ 2013ರ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಜಯ ಸಾಧಿಸಿದ್ದರು. ಮತ್ತೆ
2018ರ ಚುನಾವಣೆಯಲ್ಲಿ ಬಿಜೆಪಿಯ ರಾಜೇಶ್ ನಾಯ್ಕ್ ವಿರುದ್ಧ ಪರಾಭವಗೊಂಡರು.
ಇದೀಗ 2023 ರಲ್ಲಿ ರೈ ಅವರು ಮತ್ತೆ ಚುನಾವಣೆಗೆ ಬಂಟ್ವಾಳ ಕ್ಷೇತ್ರದಿಂದಲೇ ಸ್ಪರ್ಧೆಗೆ ಇಳಿದಿದ್ದಾರೆ. 1992 ರಲ್ಲಿ ಗೃಹ ಸಚಿವರಾಗಿ, ಮತ್ತೆ 1994 ರಲ್ಲಿ ಅಬಕಾರಿ ಸಚಿವ, 1999 ರಲ್ಲಿ ಬಂದರು, ಮೀನುಗಾರಿಕೆ ಮತ್ತ ಮಲೆನಾಡು ಪ್ರದೇಶಾಭಿವೃದ್ಧಿ ಸಚಿವರಾಗಿ, 2013 – 14 ರಲ್ಲಿ ನಡೆದ ವಿಧಾನಸಭೆಗೆ ಗೆಲುವು ಸಾಧಿಸಿ, ಅರಣ್ಯ ಸಚಿವರಾಗಿದ್ದರು. 2002 ರಲ್ಲಿಯೂ ಅವರು ಸಾರಿಗೆ ಸಚಿವರಾಗಿ ಕೆಲಸ ಮಾಡಿದ್ದಾರೆ. 1982 ಬಂಟ್ವಾಳ ತಾಲ್ಲೂಕು ಕೃಷಿ ಗ್ರಾಮಿಣಾಭಿವೃದ್ಧಿ ಬ್ಯಾಂಕ್ ಅಧ್ಯಕ್ಷರಾಗಿಯೂ ಅವರು ಕೆಲಸ ಮಾಡಿದ್ದಾರೆ. ಕರ್ನಾಟಕ ಮೀನುಗಾರಿಕೆ, ಮಲ್ನಾಡ ಅಭಿವೃದ್ಧಿ ನಿಗಮ, ಬಯಲು ಸೀಮೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ.














