ಇತ್ತೀಚಿನ ಸುದ್ದಿ
ಬಂಟ್ವಾಳ ವಿಧಾನಸಭೆ ಕ್ಷೇತ್ರ: ಮತ್ತೆ ಹಾಲಿ V/S ಮಾಜಿ: ರೈ ಅವರಿಗೆ ಇದು ಕೊನೆಯ ಚುನಾವಣೆಯಂತೆ!
02/03/2023, 11:53
ಬಂಟ್ವಾಳ(reporterkarnataka.com): ಇದು ನನ್ನ ಕೊನೆಯ ಚುನಾವಣೆ. ನಾನು ಕೊನೆಯ ಬಾರಿಗೆ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದೇನೆ. ಕ್ಷೇತ್ರದ ಜನತೆ ಮತ್ತೆ ಆಶೀರ್ವಾದ ಮಾಡಿದರೆ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ತೋರಿಸುತ್ತೇನೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು.
ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,
ಕೇವಲ ಚುನಾವಣೆಗೆ ಸ್ಪರ್ಧಿಸುವ ಉದ್ದೇಶದಿಂದ ನಾನು ಬಂಟ್ವಾಳದಲ್ಲಿ ರಾಜಕೀಯಕ್ಕೆ ಬಂದಿಲ್ಲ. ವಿದ್ಯಾರ್ಥಿ ಜೀವನದಿಂದಲೇ ಜನಸೇವೆ ಹಾಗೂ ಸಮಾಜ ಸೇವೆಗಾಗಿ ರಾಜಕೀಯಕ್ಕೆ ಬಂದಿದ್ದೇನೆ ಎಂದರು.
ನಾನು ಯಾವತ್ತೂ ಸುಳ್ಳು ಹೇಳಲಾರೆ. ಹೇಳಿದ್ದನ್ನು ಮಾಡುತ್ತೇನೆ. ಮಾಡಿದ್ದನ್ನು ಮಾತ್ರ ಹೇಳುತ್ತೇನೆ. ಮುಂದೆಯೂ ಈ ಮಾತಿಗೆ ನಾನು ಬದ್ಧನಿದ್ದೇನೆ.
ಬಿ.ಸಿ. ರೋಡಿನಿಂದ ಪೂಂಜಾಲಕಟ್ಟೆವರೆಗೆ ಹೆದ್ದಾರಿ ವಿಸ್ತರಣೆ ಕಾಮಗಾರಿಗೆ ನಾನೇ ಅನುದಾನ ಒದಗಿಸಿದ್ದೇನೆ. ಯಾರೋ ಮಾಡಿದ ಕೆಲಸವನ್ನು ನಾನು ಮಾಡಿದ್ದು ಎಂದು ಹೇಳುವ ಜಾಯಮಾನ ನನ್ನದಲ್ಲ ಎಂದು ಮಾಜಿ ಸಚಿವರು ನುಡಿದರು.
ನನ್ನ ಅವಧಿಯಲ್ಲಿ ಬಂಟ್ವಾಳ ಕ್ಷೇತ್ರದಲ್ಲಿ ಐದು ಸಾವಿರ ಕೋಟಿಗೂ ಹೆಚ್ಚು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವತಃ ಕ್ಷೇತ್ರಕ್ಕೆ ಬಂದು ಈ ಎಲ್ಲಾ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಮಾಡಿದ್ದಾರೆ. ಸರಕಾರದಲ್ಲಿ ಉಸ್ತುವಾರಿ ಮಂತ್ರಿಯಾಗಿ ಸ್ವಕ್ಷೇತ್ರದ ಜೊತೆಗೆ ಇಡೀ ಜಿಲ್ಲೆಯನ್ನು ಅಭಿವೃದ್ಧಿ ವಿಚಾರದಲ್ಲಿ ಸಮಾನವಾಗಿ ಕಂಡಿದ್ದೇನೆ. ಎಲ್ಲೂ ತಾರತಮ್ಯ ನೀತಿ ಅನುಸರಿಸಿಲ್ಲ. ಅನುದಾನವಾಗಲೀ, ಅಭಿವೃದ್ಧಿ ಕಾಮಗಾರಿಯಾಗಲೀ ಎಲ್ಲೂ ತಾರತಮ್ಯ ಮಾಡದೆ ಮನಪೂರ್ವಕವಾಗಿ ನಡೆಸಿದ್ದೇನೆ ಎಂದರು.
ಪಶ್ಚಿಮ ವಾಹಿನಿ ಯೋಜನೆ ಪ್ರಕಾರ ನದಿಗೆ ಡ್ಯಾಂ ಹಾಗೂ ಸೇತುವೆ ಕಟ್ಟಲು ಕಾರಣ ರಮಾನಾಥ ರೈ ಆಗಿದ್ದು, ಸ್ವತಃ ನಾನೇ ಸಿಎಂ ಸಿದ್ದರಾಮಯ್ಯ ಅವರಲ್ಲಿಗೆ ನಿಯೋಗ ಕೊಂಡೊಯ್ದು ಈ ಬಗ್ಗೆ ಮನವರಿಕೆ ಮಾಡಿಕೊಟ್ಟು ಯೋಜನೆ ಜಾರಿಗೆ ಪ್ರಯತ್ನಿಸಿದ್ದೇನೆ, ಪ್ರತಿ ಪಂಚಾಯತ್ ವ್ಯಾಪ್ತಿಯಲ್ಲಿ ರಾಜೀವ್ ಗಾಂಧಿಸಭಾ ಭವನ, ಶಾಲಾ-ಕಾಲೇಜುಗಳಿಗೆ ಕೊಠಡಿಗಳು, ರಸ್ತೆಗಳು, ತಾಲೂಕಿನಲ್ಲಿ 100 ಬೆಡ್ ಆಸ್ಪತ್ರೆಗೆ ಕಟ್ಟಡ ನಿರ್ಮಾಣ, ಒನ್ ಟೈಮ್ ಇಂಪ್ರೂವ್ ಮೆಂಟ್ ನನ್ನ ಕಾಲದಲ್ಲಿ ಮಂಜೂರುಗೊಂಡಿದೆ ಎಂದರು.
ರಾಜ್ಯದಲ್ಲಿ ಅತ್ಯಂತ ಹೆಚ್ಚು ಹೊಸ ಪಂಚಾಯತ್ ಸ್ಥಾಪನೆಯಾದದ್ದು ಬಂಟ್ವಾಳದಲ್ಲಿ. ಅದು ನನ್ನ ಅವಧಿಯಲ್ಲಿ. ರಾಜ್ಯದಲ್ಲೇ ಹೆಚ್ಚು ಅಂಗನವಾಡಿ ನಿರ್ಮಾಣ ವಾಗಿರುವುದೂ ಬಂಟ್ವಾಳದಲ್ಲಿ. ಬಡವರ ಸೇವೆ ಮಾಡುವ ಸಂದರ್ಭ ಯಾವತ್ತೂ ರಾಜಕೀಯ, ತಾರತಮ್ಯ ಮಾಡಿಲ್ಲ. ಅನ್ಯಾಯವೆಸಗಿಲ್ಲ. ಆದರೆ ಇದೀಗ ಕೇವಲ ಆದೇಶ ಪತ್ರ ಮಾತ್ರ ನೀಡಲಾಗುತ್ತಿದೆ, ಮನೆ ನೀಡುತ್ತಿಲ್ಲ ಎಂದರು.
ಅನಂತಾಡಿ ಪಂಚಾಯತಿನಲ್ಲಿ ಕಾಂಗ್ರೆಸ್ ಇದುವರೆಗೆ ಗೆದ್ದಿಲ್ಲ. ಆದರೆ ಇದೀಗ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬಹುಸಂಖ್ಯಾತರೇ ಮತ ನೀಡಿ ಗೆಲ್ಲಿಸಿದ್ದಾರೆ. ಇಲ್ಲಿನ ಗೆಲುವು ನನ್ನ ಪಾಲಿಗೆ ಅತ್ಯಂತ ಹೆಚ್ಚು ಸಂತೋಷ ತಂದಿದೆ ಎಂದರು.
ಕೊರೊನಾ ಸಂದರ್ಭ 35 ಸಾವಿರ ಕಿಟ್ ವಿತರಿಸಲಾಗಿದೆ. ಅದೂ ಕೂಡಾ ಪಕ್ಷದ ಕಾರ್ಯಕರ್ತರ ಸ್ಪಂದನೆಯಿಂದ ಈ ಕಾರ್ಯ ಮಾಡಲಾಗಿದೆ. ಕೊರೊನಾ ಪೀಡಿತರಿಗೆ ಪಕ್ಷಾತೀತವಾಗಿ ನೆರವಾಗಿದ್ದೇನೆ ಎಂದು ರೈ ತಿಳಿಸಿದರು. ಪಕ್ಷ ನನಗೆ ಎಲ್ಲ ರೀತಿಯ ಜವಾಬ್ದಾರಿ, ಅಧಿಕಾರ ಎಲ್ಲವನ್ನೂ ಕೊಟ್ಟಿದೆ. ನಾನು ಪಕ್ಷಕ್ಕೆ ಜೀವಮಾನವಿಡೀ ಕೆಲಸ ಮಾಡಿದರೂ ಋಣ ತೀರದು ಎಂದು ರೈ ಹೇಳಿದರು.
ಈ ನಡುವೆ ಬಿಜೆಪಿಯಿಂದ ಹಾಲಿ ಶಾಸಕ ರಾಜೇಶ್ ನಾಯ್ಕ್ ಸ್ವರ್ಧಿಸುವುದು ಬಹುತೇಕ ಖಚಿತವಾಗಿದೆ.














