9:17 AM Thursday31 - July 2025
ಬ್ರೇಕಿಂಗ್ ನ್ಯೂಸ್
ಮೈಸೂರಿನಲ್ಲಿ ನಿಷೇಧಿತ ಎಂಡಿಎಂಎ ಡ್ರಗ್ಸ್ ತಯಾರಿಕಾ ಘಟಕ ಪತ್ತೆ: ಸಂಸತ್ ನಲ್ಲಿ ಯದುವೀರ್… 3 ವರ್ಷ ಬಳಿಕ ಯಾವ ಪಕ್ಷದಿಂದ ಸ್ಪರ್ಧಿಸುತ್ತೇನೋ ಗೊತ್ತಿಲ್ಲ: ಶಾಸಕಿ ನಯನಾ ಮೋಟಮ್ಮ… ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ: ಏನಿಲ್ಲ ಏನಿಲ್ಲ ಎನ್ನುವುದರ ನಡುವೆ ಸಿಕ್ಕೇ ಬಿಡ್ತು… ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ: ಸ್ಪಾಟ್ ನಂಬರ್ 4ರ ಉತ್ಖನನ ಪ್ರಕ್ರಿಯೆ ಆರಂಭ ಬಾಲಮಂದಿರ, ಮಹಿಳಾ ನಿಲಯಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ದಿಢೀರ್ ಭೇಟಿ: ಚಿಣ್ಣರನ್ನು ಮುದ್ದಾಡಿದ… USA | ಡ್ರೈವರ್ ಇಲ್ಲದ ಕಾರಿನಲ್ಲಿ ಪ್ರಯಾಣಿಸಿದ ಸ್ಪೀಕರ್ ಯು.ಟಿ. ಖಾದರ್!: ಇದು… Bangaluru | ಪತ್ರಿಕಾ ಸಂಪಾದಕರ ಕೈಕಟ್ಟಿ ಹಾಕಲಾಗುತ್ತಿದೆ: ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ… Mandya | ಒಂದೇ ದಿನ 1146 ಕೋಟಿ ವೆಚ್ಚದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ… ಬಾಳೆಬೈಲು – ಕುರುವಳ್ಳಿ ಬೈಪಾಸ್ ರಸ್ತೆಯಲ್ಲಿ ಕುಸಿಯುತ್ತಿರುವ ಗುಡ್ಡ: ಬ್ಯಾರಿಕೆಡ್ ಹಾಕಿರುವ ಪೊಲೀಸರು Shivamogga | ತೀರ್ಥಹಳ್ಳಿ: ಬೆಜ್ಜವಳ್ಳಿ ಸಮೀಪ ಸ್ಕೂಟಿಗೆ ಹಿಂಭಾಗದಿಂದ ಬಸ್ ಡಿಕ್ಕಿ; ಸವಾರ…

ಇತ್ತೀಚಿನ ಸುದ್ದಿ

ಬಂಟ್ವಾಳ ತಾಲೂಕು ಮಟ್ಟದ 2025 -26 ನೇ ಸಾಲಿನ ಶಾಲಾ ಪ್ರಾರಂಭೋತ್ಸವ: ಮಜಿ ದ.ಕ. ಜಿಪಂ ಪ್ರಾಥಮಿಕ ಶಾಲೆಯಲ್ಲಿ ಸಂಭ್ರಮ

04/06/2025, 23:56

ಬಂಟ್ವಾಳ(reporterkarnataka.com): ದೇಶದ ಭವಿಷ್ಯ ತರಗತಿಯ ಕೋಣೆಗಳಲ್ಲಿ ಇದೆ, ಸರಕಾರವು ಶಿಕ್ಷಣಕ್ಕೆ ಸಂಬಂಧಿಸಿದಂತೆ ಹಲವಾರು ರೀತಿಯ ಸಹಕಾರ ನೀಡುತ್ತಿದೆ. ಪ್ರತಿ ಮಗುವಿಗೂ ಕಲಿಕೆಯ ಬಗ್ಗೆ ಯಾವುದೇ ಕಾರಣದಲ್ಲೂ ಯಾವ ರೀತಿಯಲ್ಲೂ ಲೋಪವಾಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ, ಶಿಕ್ಷಣದ ಮೂಲಕ ಮಾತ್ರ ಸ್ವಾಭಿಮಾನದ ಬದುಕು ಬದುಕಲು ಸಾಧ್ಯ ಇಂದಿನ ವೈಜ್ಞಾನಿಕ ಯುಗದಲ್ಲಿ ಶೈಕ್ಷಣಿಕವಾಗಿ ಬೆಳೆದ ಮಗು ಯಾವುದೇ ಕ್ಷೇತ್ರದಲ್ಲೂ ಹಿಂದುಳಿಯಲಾರ ಬದುಕಿನ ಏಳುಬೀಳುಗಳಿಗೆ ಶಿಕ್ಷಣವು ಮನೋಬಲ ತುಂಬುತ್ತದೆ , ಮಗುವಿನಲ್ಲಿ ಆತ್ಮವಿಶ್ವಾಸವನ್ನು ಬೆಳೆಸಬೇಕು ಹಾಗೂ ಉತ್ತಮ ಹವ್ಯಾಸವನ್ನು ರೂಢಿಸಿದಾಗ ಅದು ಮಕ್ಕಳನ್ನು ಸದೃಢರನ್ನಾಗಿ ಮಾಡುತ್ತದೆ, ಮಕ್ಕಳ ಮನಸ್ಸನ್ನು ಮುಟ್ಟುವ ಕೆಲಸ ನಮ್ಮದಾಗಬೇಕು ಎಂದು ಬಂಟ್ವಾಳ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ. ಜಿ. ಹೇಳಿದರು.


ಅವರು ಸೋಮವಾರ ಬಂಟ್ವಾಳ ತಾಲೂಕಿನ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮಜಿ ವೀರಕಂಭ ಇಲ್ಲಿ 2025-26 ನೇ ಶೈಕ್ಷಣಿಕ ವರ್ಷದ ತಾಲೂಕು ಮಟ್ಟದ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಾಧಿಸುವ ಛಲ ನಿಮ್ಮಲ್ಲಿದ್ದರೆ ಜಗತ್ತು ನಮ್ಮ ಕೈಯಲ್ಲಿರುತ್ತದೆ ಶಿಕ್ಷಣವು ಮಗುವಿನ ಸಾಮಾಜಿಕ ಜೀವನವನ್ನು ಬಲಗೊಳಿಸುತ್ತದೆ ಅದನ್ನು ಪಡೆಯುವಲ್ಲಿ ನಮ್ಮಲ್ಲಿ ಛಲವಿರಬೇಕು ಜೀವನ ಪಡೆಯುವುದು ಶಿಕ್ಷಣದಿಂದ ಮಾತ್ರ ಸಾಧ್ಯ, ಉತ್ತಮ ಜೀವನ ಶೈಲಿಯ ಜೊತೆಗೆ ನಿರಂತರ ಅಭ್ಯಾಸವು ಗುರಿಮಟ್ಟುವಲ್ಲಿ ಸಹಾಯ ಮಾಡುತ್ತದೆ, ಪೋಷಕರು ಮತ್ತು ಶಿಕ್ಷಕರು ಮಗುವಿನ ಕಲಿಕೆಗೆ ಸಹಭಾಗಿಗಳಾದಾಗ ಮಗು ಆಸಕ್ತಿದಾಯಕವಾಗಿ ಕಲಿಯಲು ಸಹಕಾರಿಯಾಗುತ್ತದೆ ಎಂಬುದಾಗಿ ಬಂಟ್ವಾಳ ಕ್ಷೇತ್ರ ಸಂಪನ್ಮೂಲ ಕೇಂದ್ರದ ಪ್ರಭಾರ ಸಮನ್ವಯಾಧಿಕಾರಿ ವಿದ್ಯಾ ಅಭಿಪ್ರಾಯ ಪಟ್ಟರು
ಇಂದಿನ ಪ್ರಜ್ಞಾವಂತ ಮಗು ದೇಶದ ಭವಿಷ್ಯದ ಮುನ್ನುಡಿಯಾಗಿದೆ ಶಿಕ್ಷಣವೇ ಇದಕ್ಕೆ ಪೂರಕ ಶಕ್ತಿ.ಉತ್ತಮ ಛಲ ಮತ್ತು ಆಸಕ್ತಿಯು ಮಗುವಿನ ಕಲಿಕೆಗೆ ಸಹಕಾರಿಯಾಗಿದೆ ಈ ಪ್ರಪಂಚದಲ್ಲಿ ಜ್ಞಾನಕ್ಕಿಂತ ದೊಡ್ಡ ವರವಿಲ್ಲ ಪ್ರತಿ ಹಂತದಲ್ಲೂ ಶಿಕ್ಷಣ ನಮ್ಮ ಕೈಹಿಡಿದೆ ಜೊತೆಯಾಗಿರುತ್ತದೆ ಸಮುದಾಯದ ಸಹಕಾರದಿಂದ ಶಾಲೆಗಳು ಉತ್ತಮ ಅಭಿವೃದ್ಧಿಯನ್ನು ಕಾಣುತ್ತಿವೆ ಪೋಷಕರು ಮಗುವಿಗಾಗಿ ಆಸ್ತಿ ಮಾಡುವ ಬದಲು ಮಗುವನ್ನೇ ಆಸ್ತಿ ಯನ್ನಾಗಿ ಮಾಡಿ ಮಗುವಿಗೆ ಉತ್ತಮ ಸಂಸ್ಕಾರಯುತ ಶಿಕ್ಷಣ ನೀಡಿ ಆಗ ಮಾತ್ರವೇ ಅದರ ಭವಿಷ್ಯ ಉಜ್ವಲವಾಗಲು ಸಾಧ್ಯ. ಸರಕಾರಿ ಶಾಲೆಗಳು ಇಂದು ಬಹಳಷ್ಟು ಬದಲಾವಣೆಯನ್ನು ಕಂಡಿದೆ ಭೌತಿಕ ಮತ್ತು ಶೈಕ್ಷಣಿಕವಾಗಿ ಪ್ರಗತಿಯನ್ನು ಸಾಧಿಸಿ ಸಮಾಜದ ಕನ್ನಡಿಯಾಗಿ ಪ್ರಕಾಶಿಸುತ್ತಿವೆ ಮಗುವಿನ ಬೆಳವಣಿಗೆಯಲ್ಲಿ ಪ್ರಾಥಮಿಕ ಹಂತದಲ್ಲಿ ಸರಿಯಾದ ಶಿಕ್ಷಣ ದೊರಕಿದಾಗ ಉತ್ತಮ ಫಲದರಕಲು ಸಾಧ್ಯವೆಂದು ಬಂಟ್ವಾಳ ನಗರ ಪ್ರಾಧಿಕಾರದ ಅಧ್ಯಕ್ಷ ಬೇಬಿ ಕುಂದರ್ ಹೇಳಿದರು.
ವಿದ್ಯಾರ್ಥಿಗಳು ಕಾಣುವ ಕನಸು ಭವ್ಯ ಭಾರತದ ಸಂಸ್ಕೃತಿಯನ್ನು ಎತ್ತಿ ಹಿಡಿಯುವಂತಿರಬೇಕು ಮಗುವಿನ ಉತ್ತಮ ಆರೋಗ್ಯ ಮತ್ತು ಶಿಕ್ಷಣ ಭಾರತದ ಅಭಿವೃದ್ಧಿಗೆ ಪೂರಕವಾಗಿದೆ, ಶಿಕ್ಷಕ ಮತ್ತು ಮಗುವಿನ ನಡುವಿನ ಸಂಬಂಧ ಅವಿನಾಭಾವವಾಗಿರುತ್ತದೆ ತರಗತಿ ಕೋಣೆಗಳಲ್ಲಿ ಮಗುವಿನ ಜೀವನ ಹಾಗೂ ಭವಿಷ್ಯ ಅಡಗಿದೆ, ಪ್ರತಿ ಹಂತದಲ್ಲೂ ಗುರುವಿನ ನೆರಳಿನಲ್ಲಿ ಬೆಳೆದ ಮಗು ಸಮಾಜಕ್ಕೆ ಶಕ್ತಿಯಾಗಿ ನಿಲ್ಲುತ್ತದೆ ಎಂಬುದಾಗಿ ಶಾಲಾ ಹಿರಿಯ ವಿದ್ಯಾರ್ಥಿ ಶತಮಾನೋತ್ಸವ ಸಮಿತಿಯ ಕಾರ್ಯದರ್ಶಿ ಹಾಗೂ ವಿಟ್ಲ ಗ್ರಾಮೀಣ ಬ್ಯಾಂಕಿನ ನಿರ್ದೇಶಕ ವಿಶ್ವನಾಥ.ಎಮ್ ಹೇಳಿದರು.
ತಾನು ಕಲಿತ ಶಾಲೆ ಬಗ್ಗೆ ಮಗುವಿಗೆ ಪ್ರೀತಿ ಇರಬೇಕು, ಕಲಿವಿನ ಬಗ್ಗೆ ಒಲವಿರಬೇಕು ನಿರಂತರ ಶ್ರಮದಿಂದ ಮಾತ್ರ ಗೆಲುವು ಸಾಧ್ಯವಾಗುತ್ತದೆ ಶಿಕ್ಷಣ ಒಂದು ಸಂಪತ್ತು ಅದು ನಮ್ಮನ್ನು ಬೆಳೆಸುತ್ತದೆ ಎಂಬುದಾಗಿ ಮಜಿ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಈಶ್ವರ ಭಟ್ ರಾಕೋಡ್ ಮಾತನಾಡಿದರು.
ಬಂಟ್ವಾಳ ತಾಲೂಕಿನ ಕಲ್ಲಡ್ಕ ಕ್ಲಸ್ಟರ್ ಇದರ ಶಿಕ್ಷಣ ಸಂಯೋಜಕಿ ಪ್ರತಿಮಾ ಅವರು ಸರಕಾರದಿಂದ ಸಿಗುವ ಸೌಲಭ್ಯಗಳು ಶಿಕ್ಷಣದಲ್ಲಿ ಮಗುವಿಗೆ ದೊರಕುವ ಸೌಲಭ್ಯಗಳು ಹಾಗೂ ಇಲಾಖಾ ಮಾಹಿತಿಯನ್ನು ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ಒಲುಮೆಯನ್ನು ಹೆಚ್ಚಿಸಲು ನಿರಂತರವಾಗಿ ನಡೆಯುವ ಚಟುವಟಿಕೆಗಳು ಮತ್ತು ಶೈಕ್ಷಣಿಕವಾಗಿ ಬಲಪಡಿಸುವ ಕಾರ್ಯಕ್ರಮದ ಕುರಿತು ತಿಳಿಸಿದರು. ಮಗುವಿನ ಆಸಕ್ತಿಯನ್ನು ತಿಳಿದು ಪೋಷಕರು ಮಗುವನ್ನು ಬೆಳೆಸಿದಾಗ ಮಗು ಸರ್ವತೋಮುಖವಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂಬುದಾಗಿ ತಿಳಿಸಿದರು.
2025- 26ನೇ ಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿಗಳನ್ನು ಘೋಷವಾದ್ಯದ ಮೂಲಕ ಮೆರವಣಿಗೆಯಲ್ಲಿ ಕರೆತರಲಾಯಿತು, ತದನಂತರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಯವರ ಜೊತೆಯಲ್ಲಿ ಶಾಲಾ ಶಿಕ್ಷಕಿಯರು , ಎಸ್.ಡಿ. ಎಂ.ಸಿ ಸದಸ್ಯರು ಪನ್ನೀರು ಹಾಗೂ ಹೂದಳಗಳನ್ನು ಸಿಂಪಡಿಸಿ ಆರತಿ ಬೆಳಗಿ ಬರಮಾಡಿಕೊಳ್ಳಲಾಯಿತು. ಗುಬ್ಬಚ್ಚಿ ಗೂಡು ಕಾರ್ಯಕ್ರಮದ ರೂವಾರಿಗಳಾದ ರಮ್ಯಾ ಹಾಗೂ ನಿತ್ಯಾನಂದ ಶೆಟ್ಟಿ ದಂಪತಿ ವಿದ್ಯಾರ್ಥಿಗಳಿಗೆ ಕಾರ್ಟೂನ್ ನೆಟ್ವರ್ಕ್ ಗೊಂಬೆ ಮುಖವಾಡದೊಂದಿಗೆ ಮಕ್ಕಳನ್ನು ಆಕರ್ಷಿಸಿದರು.
ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ಅಭಿಯಾನ ನಿರ್ಮಾಣ ಕಾರ್ಯಕ್ರಮದಲ್ಲಿ ಅಕ್ಷರ ದಾಸೋಹ ಕಾರ್ಯಕ್ರಮಕ್ಕೆ ಸಹಕರಿಸುವಂತೆ “ಅಕ್ಷಯ ಬುಟ್ಟಿ’ ಎನ್ನುವ ವಿನೂತನ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಉತ್ತಮ ಹಾಗೂ ಆರೋಗ್ಯಕರ ಕುಡಿಯುವ ನೀರಿನ ವ್ಯವಸ್ಥೆಗಾಗಿ ಯುವ ಸೇವಾಪಥ ಕಡೇಶಿವಾಲಯ ಇವರ ವತಿಯಿಂದ ನೀಡಲ್ಪಟ್ಟ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಲಾಯಿತು. ಇಲಾಖೆಯಿಂದ ನೀಡುತ್ತಿರುವ ಎಲ್ಲಾ ಉಚಿತ ಯೋಜನೆಗಳಿಗೆ ಚಾಲನೆ ನೀಡಿ ಸದರಿ ಶೈಕ್ಷಣಿಕ ವರ್ಷವನ್ನು ಪ್ರಾರಂಭಿಸಲಾಯಿತು. ಉಪಹಾರದೊಂದಿಗೆ ಸಿಹಿಯೂಟವನ್ನು ಸವಿಯುವ ಮೂಲಕ ಊರಿಗೆ ಊರೇ ಪ್ರಾರಂಭೋತ್ಸವದಲ್ಲಿ ಸಂಭ್ರಮಿಸಿದರು.
ಕಾರ್ಯಕ್ರಮದಲ್ಲಿ ವೀರಕಂಭ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜನಾರ್ಧನ ಪೂಜಾರಿ ನಾರುಕೋಡಿ, ಎಸ್.ಡಿ.ಎಂ.ಸಿ. ಉಪಾಧ್ಯಕ್ಷೆ ವನಿತಾ, ಬಂಟ್ವಾಳ ಕ್ಷೇತ್ರ ಸಂಪನ್ಮೂಲ ಕೇಂದ್ರದ ಕ್ಷೇತ್ರ ವಿಶೇಷ ಸಂಪನ್ಮೂಲ ವ್ಯಕ್ತಿ ರವೀಂದ್ರ, ಮಾತೃಶ್ರೀ ಗೆಳೆಯರ ಬಳಗದ ಅಧ್ಯಕ್ಷರಾದ ರಮೇಶ್ ಗೌಡ ಮೈರ, ಕಲ್ಲಡ್ಕ ಮತ್ತು ಕಂಬಳಬೆಟ್ಟು ಸಮೂಹ ಸಂಪನ್ಮೂಲ ವ್ಯಕ್ತಿ ಜ್ಯೋತಿ, ಮೆಲ್ಕಾರ್ ಚಂದ್ರಿಕಾ ವೆಜಿಟೇಬಲ್ಸ್ ನ ಮಾಲಕ ಮೊಹಮದ್ ಶರೀಫ್, ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು, ಮಕ್ಕಳ ಪೋಷಕರು, ಶಾಲಾಭಿವೃದ್ಧಿ ಸಮಿತಿಯ ಸದಸ್ಯರುಗಳು, ಸಂಘ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರುಗಳು ಭಾಗವಹಿಸಿದ್ದರು.
ಶಾಲಾ ಮಕ್ಕಳು ಪ್ರಾರ್ಥಿಸಿ, ಬಂಟ್ವಾಳ ತಾಲೂಕಿನ ಶಿಕ್ಷಣ ಸಂಯೋಜಕಿ ಪ್ರತಿಮಾ ಸ್ವಾಗತಿಸಿ, ಮಜಿಶಾಲಾ ಮುಖ್ಯ ಶಿಕ್ಷಕಿ ಬೆನಡಿಕ್ಟಾ ಆಗ್ನೇಸ್ ಮಂಡೋನ್ಸಾ ವಂದಿಸಿದರು. ಶಿಕ್ಷಕಿ ಸಂಗೀತ ಶಮ೯ ಪಿ ಜಿ ಕಾರ್ಯಕ್ರಮ ನಿರೂಪಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು