6:07 PM Friday21 - February 2025
ಬ್ರೇಕಿಂಗ್ ನ್ಯೂಸ್
ಹಾವೇರಿ ಜಾನಪದ ವಿಶ್ವವಿದ್ಯಾಲಯ ಸಿಬ್ಬಂದಿ ನೇಮಕಾತಿಯಲ್ಲಿ ಅಕ್ರಮ?: ರಾಜಕೀಯ ಕರಿನೆರಳು.!? State Budget | ವಾಣಿಜ್ಯ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ… Deeptech & AI | ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಲು ನವೋದ್ಯಮಗಳಿಗೆ ನೆರವು: ಸಚಿವದ್ವಯರಾದ… ಇಂದಿರಾ ಕ್ಯಾಂಟಿನಿನಲ್ಲಿ ಕಳಪೆ ಗುಣಮಟ್ಟದ ಆಹಾರ: ಗುತ್ತಿಗೆ ರದ್ದುಪಡಿಸಲು ಕರವೇ ಒತ್ತಾಯ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಬ್ಲಾಕ್ ಪೇಪರ್ ಬಿಡುಗಡೆ: ಮಾಜಿ ಸಿಎಂ ಬಸವರಾಜ… Lokayukta | ಮುಡಾ ಹಗರಣದಲ್ಲಿ ಸಿಎಂಗೆ ಕ್ಲೀನ್ ಚಿಟ್ ನಿರೀಕ್ಷಿತ: ಹುಬ್ಬಳ್ಳಿಯಲ್ಲಿ ಕೇಂದ್ರ… ನಂಜನಗೂಡು: ಆಹಾರ ಸುರಕ್ಷತಾ ಅಧಿಕಾರಿಗಳಿಂದ ಹೋಟೆಲ್ ಗಳಿಗೆ ದಿಢೀರ್ ದಾಳಿ; ಇಡ್ಲಿ ತಯಾರಿಕೆಯಲ್ಲಿ… ಲಿಂಗಸುಗೂರ: ಉದ್ಯೋಗ ಖಾತ್ರಿ ಅನುದಾನ ದುರ್ಬಳಕೆ; ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ನಾಗರತ್ನ,… Waterfalls Tragedy | ಚಿಕ್ಕಮಗಳೂರು ಕಾಮೇನಹಳ್ಳಿ ಜಲಪಾತ: ಈಜಲು ಹೋದ ಯುವಕನ ತಲೆ… CM PROMISE | ಪತ್ರಿಕೋದ್ಯಮ -ಪತ್ರಕರ್ತರ ಹಿತರಕ್ಷಣೆಗೆ ಬದ್ಧ: ಮುಖ್ಯಮಂತ್ರಿ ಸಿದ್ಧರಾಮಯ್ಯ

ಇತ್ತೀಚಿನ ಸುದ್ದಿ

Bantwal | ಬಿ.ಸಿ.ರೋಡು- ಅಡ್ಡಹೊಳೆ ಚತುಷ್ಪಥ ಹೆದ್ದಾರಿ: ಕಲ್ಲಡ್ಕ ಫ್ಲೈ ಓವರ್‌ ಮೇ ತಿಂಗಳಲ್ಲಿ ಸಂಚಾರಕ್ಕೆ ಮುಕ್ತ?

21/02/2025, 17:47

ಜಯಾನಂದ ಪೆರಾಜೆ ಬಂಟ್ವಾಳ

info.reporterkarnataka@gmail.com

ಬಿ.ಸಿ.ರೋಡು- ಅಡ್ಡಹೊಳೆ ಚತುಷ್ಪಥ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯ ಭಾಗವಾಗಿ ನಿರ್ಮಾಣ ಹಂತದಲ್ಲಿರುವ ಕಲ್ಲಡ್ಕದ ಫ್ಲೈಓವರ್‌ನ್ನು ಮೇ ತಿಂಗಳ ಆರಂಭದಲ್ಲಿ ಸಂಚಾರಕ್ಕೆ ಮುಕ್ತಗೊಳಿಸುವ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್‌ಎಚ್‌ಎಐ)ವು ಭರವಸೆ ನೀಡಿದ್ದು, ಅದಕ್ಕೆ ಪೂರಕವಾಗಿ ಕಲ್ಲಡ್ಕದ ನರಹರಿ ಪರ್ವತ ಭಾಗದಲ್ಲಿ ಫ್ಲೈಓವರ್‌ ರಸ್ತೆಯನ್ನು ಸಾಮಾನ್ಯ ರಸ್ತೆಗೆ ಜೋಡಿಸುವ ಕಾರ್ಯ ಭರದಿಂದ ಸಾಗಿದೆ.


2.1 ಕಿ.ಮೀ. ಉದ್ದದ ಫ್ಲೈಓವರ್‌ ಅನ್ನು ಪೂರ್ಲಿಪ್ಪಾಡಿ ಭಾಗದಲ್ಲಿ ಈಗಾಗಲೇ ಕೆಳರಸ್ತೆಗೆ ಸಂಪರ್ಕಿಸುವ ಕಾಮಗಾರಿ ಬಹುತೇಕ ಪೂರ್ತಿಗೊಳಿಸಲಾಗಿದ್ದು, ಮತ್ತೂಂದು ಬದಿಯ ಕಾಮಗಾರಿಯನ್ನು ಪೂರ್ತಿಗೊಳಿಸಲು ಕಾಯಲಾಗುತ್ತಿದೆ. ನಿರೀಕ್ಷಿತ ಮಟ್ಟದಲ್ಲಿ ಕಾಮಗಾರಿ ಸಾಗಿದರೆ ಪ್ರಾಧಿಕಾರ ನೀಡಿದ ಭರವಸೆಯಂತೆ ಮೇ ಆರಂಭದಲ್ಲೇ ಫ್ಲೈಓವರ್‌ ಸಂಚಾರ ಆರಂಭಗೊಳ್ಳುವ ಸಾಧ್ಯತೆ ಇದೆ.
ಕಳೆದ ಹಲವು ವರ್ಷಗಳಿಂದ ಸಾಕಷ್ಟು ಟೀಕೆಗೆ ಒಳಗಾಗಿದ್ದ ಕಲ್ಲಡ್ಕ ಪೇಟೆಯಲ್ಲಿ ಮಾ.15ರ ವೇಳೆಗೆ ಸರ್ವೀಸ್‌ ರಸ್ತೆ ಕಾಮಗಾರಿ ಪೂರ್ತಿಗೊಳ್ಳಲಿದ್ದು, ಇದರ ಬಳಿಕ ಬಹುತೇಕ ಸಮಸ್ಯೆ ನಿವಾರಣೆಯಾಗುತ್ತದೆ. ಫ್ಲೈಓವರ್‌ನಲ್ಲಿ ಸಂಚಾರ ಆರಂಭಗೊಂಡರೆ ಹೆದ್ದಾರಿಯಲ್ಲಿ ಸಾಗುವ ಶೇ.75 ರಷ್ಟು ವಾಹನಗಳು ಕಲ್ಲಡ್ಕ ಪೇಟೆಗೆ ಬಾರದೆ ನೇರವಾಗಿ ಸಾಗಲಿದೆ.
ನರಹರಿ ಪರ್ವತದಲ್ಲಿ ಕಾಮಗಾರಿ ವಿಳಂಬ
ಬಿ.ಸಿ.ರೋಡು- ಅಡ್ಡಹೊಳೆ ಹೆದ್ದಾರಿಯ 48 ಕಿ.ಮೀ.ಗಳ ಕಾಮಗಾರಿಯಲ್ಲಿ ಈಗಾಗಲೇ ಸುಮಾರು 35 ಕಿ.ಮೀ. ಕಾಂಕ್ರೀಟ್‌ ರಸ್ತೆಯ ಕಾಮಗಾರಿ ಪೂರ್ಣಗೊಂಡಿದ್ದು, ಅಲ್ಲಲ್ಲಿ ಒಂದಷ್ಟು ಕಾಮಗಾರಿಗಳು ಬಾಕಿಯಾಗಿವೆ. ವಿನ್ಯಾಸ ಬದಲಾವಣೆ, ಭೂಸ್ವಾಧೀನ ಪ್ರಕ್ರಿಯೆ ಗೊಂದಲ, ಬಂಡೆಗಳ ಸ್ಫೋಟ ಕಾರ್ಯ ಹೀಗೆ ಹಲವು ಕಾರಣಕ್ಕೆ ಒಂದಷ್ಟು ಕಡೆ ಕಾಮಗಾರಿ ವಿಳಂಬವಾಗಿದೆ. ಪ್ರಸ್ತುತ ಕಲ್ಲಡ್ಕ ಫ್ಲೈಓವರ್‌ ಸಂಚಾರಕ್ಕೆ ಮುಕ್ತಗೊಂಡರೂ, ನರಹರಿ ಪರ್ವತ ಭಾಗದಲ್ಲಿ ವಿನ್ಯಾಸ ಬದಲಾವಣೆಯಿಂದ ಒಂದಷ್ಟು ಗೊಂದಲಗಳು ಉಂಟಾಗಿವೆ. ಹಿಂದಿನ ವಿನ್ಯಾಸದ ಪ್ರಕಾರ ನರಹರಿ ಪರ್ವತ ಭಾಗದಲ್ಲಿ ಈಗ ಸಾಗಿರುವ ಹೆದ್ದಾರಿಯಂತೆ ವಿನ್ಯಾಸವನ್ನು ಮಾಡಲಾಗಿತ್ತು. ಪ್ರಸ್ತುತ ಕಾಮಗಾರಿ ಸಂಪೂರ್ಣ ಬದಲಾಗಿದೆ. ನರಹರಿ ಪರ್ವತದ ಎರಡೂ ಬದಿಯೂ ತಗ್ಗು ಪ್ರದೇಶವಾಗಿದ್ದು, ಹೀಗಾಗಿ ವಾಹನಗಳು ಏರು ರಸ್ತೆಯಲ್ಲಿ ಸಾಗಿ ಇಳಿಯಬೇಕಿತ್ತು. ಆದರೆ ಈಗ ಏರುರಸ್ತೆಯನ್ನು ಸಂಪೂರ್ಣ ತಗ್ಗಿಸಿ ನೇರ ರಸ್ತೆಯಾಗಿ ಮಾರ್ಪಾಡು ಮಾಡಲಾಗುತ್ತಿದೆ. ಇಲ್ಲಿ ಸರ್ವೀಸ್‌ ರಸ್ತೆಯು ಇಲ್ಲದೇ ಇರುವುದರಿಂದ ನರಹರಿ ಪರ್ವತ ದೇವಸ್ಥಾನ ಸಂಪರ್ಕ ರಸ್ತೆಯನ್ನೂ ಹೆದ್ದಾರಿಗೆ ಸಂಪರ್ಕಿಸಬೇಕಿದೆ. ಪ್ರಸ್ತುತ ಮಣ್ಣು ಅಗೆಯುವ ಕಾಮಗಾರಿಯೇ ಮುಗಿದಿಲ್ಲ. ಒಂದಷ್ಟು ಬಂಡೆ ಸ್ಫೋಟದ ಕಾಮಗಾರಿಯೂ ನಡೆಯಬೇಕಿದೆ. ಹೀಗಾಗಿ ಸಹಜವಾಗಿಯೇ ಇಲ್ಲಿ ಕಾಮಗಾರಿ ವಿಳಂಬವಾಗುವ ಸಾಧ್ಯತೆ ಹೆಚ್ಚಿದೆ.
*ಮಾಣಿಯ ವಿಳಂಬಕ್ಕೆ ಆಕ್ರೋಶ:*
ಬಿ.ಸಿ.ರೋಡು-ಅಡ್ಡಹೊಳೆ ಹೆದ್ದಾರಿಗೆ ಮಾಣಿ ಜಂಕ್ಷನ್‌ನಲ್ಲಿ ಮಾಣಿ-ಮೈಸೂರು ಹೆದ್ದಾರಿ ಸಂಪರ್ಕಿಸುತ್ತಿದ್ದು, ಎರಡೂ ಹೆದ್ದಾರಿಯಲ್ಲೂ ಒಂದೇ ಪ್ರಮಾಣದಲ್ಲಿ ವಾಹನಗಳು ಸಾಗುತ್ತವೆ. ಹೀಗಾಗಿ ಮಾಣಿಯಲ್ಲಿ ಈಗಲೂ ಒಂದೇ ಬದಿಯ ಸರ್ವೀಸ್‌ ರಸ್ತೆಯಲ್ಲಿ ಸಂಚಾರಕ್ಕೆ ಅವಕಾಶವಿದ್ದು, ಕಲ್ಲಡ್ಕ ಭಾಗದಿಂದ ಸಾಗುವಾಗ ಎಡ ಬದಿಯ ಸರ್ವೀಸ್‌ ರಸ್ತೆ ಸಂಚಾರಕ್ಕೆ ಮುಕ್ತಗೊಳಿಸದೇ ಇರುವುದು ಸಾಕಷ್ಟು ಆರೋಪಗಳಿಗೆ ಕಾರಣವಾಗುತ್ತಿದೆ. ಇಲ್ಲಿ ಮತ್ತೂಂದು ಹೆದ್ದಾರಿಗೆ ಸಂಪರ್ಕಿಸುವುದರಿಂದ ಎಡಬದಿಯ ಸರ್ವೀಸ್‌ ರಸ್ತೆ ಕಿರಿದಾಗಿದೆ ಎಂಬ ಆರೋಪಗಳು ಕೂಡ ಇವೆ. ಪಾಣೆಮಂಗಳೂರು, ಮೆಲ್ಕಾರ್‌ ಎಲಿವೇಟೆಡ್‌ ರಸ್ತೆಗಳು ಈಗಾಗಲೇ ಸಂಚಾರಕ್ಕೆ ಮುಕ್ತಗೊಂಡಿದ್ದು, ಕೆಲವು ದಿನಗಳ ಹಿಂದೆ ಉಪ್ಪಿನಂಗಡಿಯ ನೆಕ್ಕಿಲಾಡಿ ಭಾಗದಲ್ಲಿ ವಾಹನ ಸಂಚರಿಸುತ್ತಿವೆ. ಆದರೆ ಮಾಣಿಯ ಎಲಿವೇಟೆಡ್‌ ರಸ್ತೆ ಕಾಮಗಾರಿಯು ವಿಳಂಬವಾಗಿದೆ. ಜಂಕ್ಷನ್‌ ಬಳಿಕ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದೆ. ಸದ್ಯಕ್ಕೆ ಮಾಣಿಯಲ್ಲಿ ಕಾಮಗಾರಿಯೇ ನಡೆಯುತ್ತಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು