ಇತ್ತೀಚಿನ ಸುದ್ದಿ
ಬಣಕಲ್ ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಡಿ.ವಿ.ರೇಣುಕಾ ಅವರಿಂದ ಆಟೋ ಚಾಲಕರಿಗೆ ಜಾಗೃತಿ, ದಂಡದ ಎಚ್ಚರಿಕೆ
30/11/2023, 19:24

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಬಣಕಲ್, ಕೊಟ್ಟಿಗೆಹಾರದಲ್ಲಿ ಆಟೋ ಚಾಲಕರ ವಾಹನ ದಾಖಲೆ ಪರಿಶೀಲನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್, ಕೊಟ್ಟಿಗೆಹಾರದಲ್ಲಿ ಆಟೋ ವಾಹನ ಚಾಲಕರ ವಾಹನ ದಾಖಲೆಗಳನ್ನು ಬಣಕಲ್ ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಡಿ.ವಿ.ರೇಣುಕಾ ಪರಿಶೀಲನೆ ಮಾಡಿದರು.
ನಂತರ ಕೊಟ್ಟಿಗೆಹಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಣಕಲ್, ಕೊಟ್ಟಿಗೆಹಾರದಲ್ಲಿ ಅನೇಕ ಆಟೋಗಳಿವೆ. ಆದರೆ ಕೆಲವು ಆಟೋಗಳಿಗೆ ಯಾವುದೇ ದಾಖಲೆಗಳಿಲ್ಲ. ಕಳೆದ ಕೆಲವು ದಿನಗಳ ಹಿಂದೆ ಆಟೋವೊಂದು ವ್ಯಕ್ತಿಗೆ ಡಿಕ್ಕಿ ಹೊಡೆದಿತ್ತು. ಆದರೆ ಡಿಕ್ಕಿ ಹೊಡೆದ ಆಟೋದಲ್ಲಿ ದಾಖಲೆಗಳು ಸರಿಯಿಲ್ಲದೇ ಮೃತ ವ್ಯಕ್ತಿಗೆ ಪರಿಹಾರವೇ ಸಿಗದೇ ಕುಟುಂಬ ಪರದಾಡುವಂತಾಗಿದೆ. ಅದಕ್ಕಾಗಿ ಬಣಕಲ್, ಕೊಟ್ಟಿಗೆಹಾರದಲ್ಲಿ ಎಲ್ಲಾ ಆಟೋಗಳ ವಾಹನ ಚಾಲಕರ ಪರವಾನಗಿ, ಎಫ್ ಸಿ, ಹೊಗೆ ತಪಾಸಣೆ, ಮತ್ತಿತರ ವಾಹನ ದಾಖಲೆ ಪರಿಶೀಲಿಸಲಾಗಿದೆ. ಯಾರ ವಾಹನಗಳ ದಾಖಲೆಗಳು ಸರಿಯಿಲ್ಲ ಅವರು ಕೂಡಲೇ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳಲು ಸೂಚಿಸಲಾಗಿದೆ. ಸೂಚನೆ ಕೊಟ್ಟ ನಂತರವೂ ಕೂಡ ದಾಖಲೆಗಳನ್ನು ನವೀಕರಿಸಿ ಇಡದಿದ್ದರೆ ಅಂಥವರ ವಾಹನಗಳನ್ನು ವಶಕ್ಕೆ ಪಡೆದು ದಂಡ ಹಾಕಲಾಗುವುದು ಎಂದು ಎಚ್ಚರಿಸಿದರು.
ಬರೀ ದಾಖಲೆ ಮಾತ್ರವಲ್ಲದೇ ವಾಹನ ಚಾಲಕರು ಸಂಚಾರಿ ನಿಯಮಗಳನ್ನು ಪಾಲಿಸಬೇಕು. ಯಾವುದೇ ಕಾರಣಕ್ಕೂ ಆಟೋ ಮಾತ್ರವಲ್ಲ ಇತರ ವಾಹನಗಳ ಚಾಲಕರು ಕೂಡ ಸಂಚಾರಿ ನಿಯಮ ಪಾಲಿಸಿ ವಾಹನಗಳ ದಾಖಲೆಗಳನ್ನು ಇಟ್ಟುಕೊಳ್ಳಬೇಕು ಎಂದು ಆಟೋ ವಾಹನ ಚಾಲಕರಿಗೆ ಖಡಕ್ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಗಳು ಇದ್ದರು.