ಇತ್ತೀಚಿನ ಸುದ್ದಿ
ಬಣಕಲ್ ಹೋಬಳಿಯ ಗ್ರಾಮಗಳಿಗೆ ಕೊನೆಗೂ ಬಂತು ಬಸ್!: ಸ್ವಾತಂತ್ರ್ಯ ಬಂದು 75 ವರ್ಷಗಳ ಬಳಿಕ ಸಾರಿಗೆ ಭಾಗ್ಯ!!
01/08/2022, 20:24
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಸ್ವಾತಂತ್ರ್ಯ ಬಂದಾಗಿನಿಂದ ಬಸ್ಸನ್ನೇ ಕಾಣದ ಗ್ರಾಮ 75ನೇ ಸ್ವಾತಂತ್ರ್ಯ ದಿನಾಚರಣೆಯ ಹೊಸ್ತಿಲಲ್ಲಿ ಬಸ್ಸನ್ನ ಕಂಡಿರೋ ಸಂತಸದ ಸುದ್ದಿ ಕಾಫಿನಾಡು ಚಿಕ್ಕಮಗಳೂರಿನಲ್ಲಿ ನಡೆದಿದೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಣಕಲ್ ಹೋಬಳಿಯ ಹೆಗ್ಗುಡ್ಲು, ಮತ್ತಿಕಟ್ಟೆ, ದೊಡ್ಡನಂದಿ ಸೇರಿದಂತೆ ನಾಲ್ಕೈದು ಗ್ರಾಮಗಳಿಗೆ ಬಸ್ ಸೌಲಭ್ಯವೇ ಇರಲಿಲ್ಲ. ಈ ಭಾಗದಲ್ಲಿ ಸುಮಾರು 250ಕ್ಕೂ ಹೆಚ್ಚು ಕುಟುಂಗಳು ವಾಸವಿವೆ. ಬಣಕಲ್ ಹೋಬಳಿಗೆ ಬರಲು ಈ ಗ್ರಾಮಗಳ ಜನ ಸುಮಾರು 5-7 ಕಿ.ಮೀ. ನಡೆದೇ ಬರಬೇಕಿತ್ತು. ಶಾಲಾ-ಕಾಲೇಜಿಗೆ ಹೋಗುವ ಮಕ್ಕಳು ಕೂಡ 5-7 ಕಿ.ಮೀ. ನಡೆದೇ ಬರಬೇಕಿತ್ತು.
ಇದೀಗ ಸ್ಥಳಿಯರ ದಶಕಗಳ ಮನವಿ ಮೇರೆಗೆ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಈ ಗ್ರಾಮಗಳಿಗೆ ಬಸ್ಸನ್ನ ಬಿಟ್ಟಿದ್ದಾರೆ. ದಿನಕ್ಕೆ ಎರಡು ಬಾರಿ ಓಡಾಡುವ ಬಸ್ಸು ಬೆಳಗ್ಗೆ-ಸಂಜೆ ಈ ಹಳ್ಳಿಗಳಿಗೆ ಹೋಗಿ ಬರಲಿದೆ. ಈ ಬಸ್ ಸ್ಥಳಿಯರ ಜೊತೆ ಹೆಚ್ಚಾಗಿ ಶಾಲಾ ಮಕ್ಕಳಿಗೆ ಅನುಕೂಲವಾಗಲಿದೆ. ಈ ಹಳ್ಳಿಗಳಿಗೆ ರಸ್ತೆ ಕೂಡ ಸರಿ ಇರಲಿಲ್ಲ. ಇದೀಗ ಎರಡು ಕೋಟಿ ವೆಚ್ಚದಲ್ಲಿ ರಸ್ತೆ ಕೂಡ ನಿರ್ಮಾಣವಾಗಿ, ಹಳ್ಳಿಗಳಿಗೆ ಬಸ್ ಸೌಲಭ್ಯ ಸಿಕ್ಕಿರೋದ್ರಿಂದ ಹಳ್ಳಿಗರು ಖುಷಿಪಟ್ಟಿದ್ದಾರೆ. ಇಂದು ಬಸ್ಸನ್ನ ಉದ್ಘಾಟಿಸಿದ ಶಾಸಕ ಕುಮಾರಸ್ವಾಮಿ ಅದೇ ಬಸ್ಸಿನಲ್ಲಿ ಮತ್ತಿಕಟ್ಟೆ ಗ್ರಾಮದಿಂದ ಬಣಕಲ್‍ವರೆಗೂ ಸ್ಥಳಿಯರ ಜೊತೆಯೇ ಸಂಚರಿಸಿದ್ದಾರೆ.