ಇತ್ತೀಚಿನ ಸುದ್ದಿ
Bangalore | ಕ್ಯಾನ್ಸರ್ ತಡೆಗೆ ಪರಿಣಾಮಕಾರಿ ಕಾರ್ಯಕ್ರಮ ಅವಶ್ಯ: ಮಾಜಿ ಡಿಸಿಎಂ ಡಾ. ಸಿ.ಎನ್. ಅಶ್ವತ್ಥನಾರಾಯಣ
11/05/2025, 22:58

ಬೆಂಗಳೂರು(reporterkarnataka.com): ಮಹಿಳೆಯರಲ್ಲಿ ಶತ್ರುವಿನ ರೀತಿ ಕಾಡುವ ಅಂಡಾಶಯ ಕ್ಯಾನ್ಸರ್ ರೋಗದ ಬಗ್ಗೆ ಸರಿಯಾಗಿ ಜಾಗೃತಿ ಮೂಡಿಸಲು ಸರ್ಕಾರ ಮತ್ತು ವೈದ್ಯಕೀಯ ಸಂಸ್ಥೆಗಳು ಪರಿಣಾಮಕಾರಿ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.
ಬೆಂಗಳೂರಿನಲ್ಲಿಂದು ಪುನರ್ ಭವ ಸಂಸ್ಥೆ ಹಾಗೂ ಬೆಂಗಳೂರು ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸಂಘದ ವತಿಯಿಂದ ಆಯೋಜಿಸಿದ್ದ ವಿಶ್ವ ಅಂಡಾಶಯ ಕ್ಯಾನ್ಸರ್ ದಿನಾಚರಣೆ ಹಾಗೂ ಅಂಡಾಶಯ ಕ್ಯಾನ್ಸರ್ ನಿಂದ ಗುಣಮುಖರಾದವರಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಹಿಳೆಯರ ಸೈಲೆಂಟ್ ಕಿಲ್ಲರ್:
ಇತ್ತೀಚೆಗೆ ಮಹಿಳೆಯರನ್ನು ಅಂಡಾಶಯ ಕ್ಯಾನ್ಸರ್ ದೊಡ್ಡ ಮಾರಕ ರೋಗವಾಗಿ ಕಾಡುತ್ತಿದೆ. ಗೊತ್ತೇ ಆಗದಂತೆ ದೇಹದಲ್ಲಿ ಬೆಳೆದು ಆತಂಕಕ್ಕೆ ಕಾರಣವಾಗುತ್ತದೆ. ಅಂಡಾಶಯ ಕ್ಯಾನ್ಸರ್ ಅಥವಾ ಯಾವುದೇ ಕ್ಯಾನ್ಸರ್ ಮಾರಕ ರೋಗ ನಿಜ; ಆದರೆ ಖಂಡಿತ ಗುಣಪಡಿಸಲಾಗದ ಕಾಯಿಲೆಯಲ್ಲ. ರೋಗ ಲಕ್ಷಣಗಳನ್ನು ಆರಂಭಿಕ ಹಂತದಲ್ಲೇ ಅರಿತು, ಸೂಕ್ತ ಚಿಕಿತ್ಸೆ ಪಡೆದರೆ ನಿಶ್ಚಿತವಾಗಿ ಕ್ಯಾನ್ಸರ್ ನಿಂದ ದೂರವಾಗಬಹುದು ಎಂದರು.
ದೇಶದಲ್ಲಿಗ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಬಹಳಷ್ಟು ಕ್ರಾಂತಿಕಾರಿಕ ಬದಲಾವಣೆಗಳು ಆಗಬೇಕಿದೆ. ಅದು ನಮ್ಮ ಕರ್ನಾಟಕದಿಂದ ಆಗಬೇಕೆನ್ನುವುದು ನಮ್ಮೆಲ್ಲರ ಆಶಯ. ವೈದ್ಯಕೀಯ ಸಂಶೋಧನೆಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಸರ್ಕಾರಗಳು ಗಮನಹರಿಸಬೇಕು. ಕ್ಯಾನ್ಸರ್ ಸೇರಿದಂತೆ ಸ್ತ್ರೀರೋಗ ವಿಷಯದಲ್ಲಿ ಬಹಳ ಪರಿಣಿತಿ ಪಡೆದಿರುವ ಅಂತಾರಾಷ್ಟ್ರೀಯ ಖ್ಯಾತಿಯ ವೈದ್ಯ ಡಾ. ರೂಪೇಶ್ ಅವರ ಸೇವೆ ರಾಜ್ಯಕ್ಕೆ ಬಹಳ ಅಗತ್ಯವಿದೆ ಎಂದು ಹೇಳಿದರು.
*ಅಂತಕಬೇಡ; ಕ್ಯಾನ್ಸರ್ ಗೆಲ್ಲಬಹುದು!!:*
ಅಂತಾರಾಷ್ಟ್ರೀಯ ಸ್ತ್ರೀರೋಗ ತಜ್ಞ ಹಾಗೂ ಕರ್ನಾಟಕ ರಾಜ್ಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸಂಘದ ಅಧ್ಯಕ್ಷ ಡಾ. ಎನ್. ರೂಪೇಶ್ ಮಾತನಾಡಿ, ಅಂಡಾಶಯ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿವರ್ಷ ಮೇ 8ರಂದು ವಿಶ್ವ ಅಂಡಾಶಯ ಕ್ಯಾನ್ಸರ್ ದಿನವನ್ನಾಗಿ ಆಚರಿಸಲಾಗುತ್ತಿದೆ. ರಾಜ್ಯದಲ್ಲಿ ಅಂಡಾಶಯ ಕ್ಯಾನ್ಸರ್ ಬಗ್ಗೆ ಮಹಿಳೆಯರಲ್ಲಿ ಪರಿಣಾಮಕಾರಿಯಾಗಿ ಜಾಗೃತ ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಿರುವುದಾಗಿ ಅವರು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ಅಂಡಾಶಯ ಕ್ಯಾನ್ಸರ್ ಪ್ರಕರಣಗಳು ದಿನೇ ದಿನೇ ಏರಿಕೆಯಾಗುತ್ತಿವೆ. ಸಾವನ್ನಪ್ಪುತ್ತಿರುವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ವೈದ್ಯಕೀಯ ಕ್ಷೇತ್ರವೂ ಅಂಡಾಶಯ ಕ್ಯಾನ್ಸರ್ ತಡೆಗೆ ಅನೇಕ ಸಂಶೋಧನೆಗಳಲ್ಲಿ ತೊಡಗಿದೆ. ಆದರೂ ರೋಗ ನಿರ್ಣಯವು ಬಹಳ ಸವಾಲುಗಳಿಂದ ಕೂಡಿದೆ. ವಿಶ್ವಾಸಾರ್ಹ ಆರಂಭಿಕ ಪತ್ತೆ ಕೊರತೆಯಿಂದ ಗಮನಾರ್ಹವಾಗಿ ರೋಗ ನಿಯಂತ್ರಣಕ್ಕೆ ತಡೆಯಾಗಿದೆ. ಮುಖ್ಯವಾಗಿ ಮಹಿಳೆಯರು ಜಾಗೃತ ವಹಿಸುವುದು ಅತಿಮುಖ್ಯ ಎಂದರು.
ಬೆಂಗಳೂರು ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸಂಘದ ಅಧ್ಯಕ್ಷೆ ಡಾ. ಕೆ.ಆರ್. ಮಂಗಳಾದೇವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಘದ ಗೌರವ ಕಾರ್ಯದರ್ಶಿ ಡಾ. ಬಿ.ಆರ್. ನಿರ್ಮಲಾ, ಗೌರವ ಖಜಾಂಚಿ ಡಾ. ಮಂಜುಳಾ ಪಾಟೀಲ್ ಸೇರಿದಂತೆ ಪ್ರಸಿದ್ದ ಸ್ತ್ರೀರೋಗ ತಜ್ಞರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಇದೇ ವೇಳೆ ಕ್ಯಾನ್ಸರ್ ನಿಂದ ಗುಣಮುಖರಾದವರನ್ನು ಗೌರವಿಸಲಾಯಿತು. ನಂತರ ಖ್ಯಾತ ಸ್ತ್ರೀರೋಗ ತಜ್ಞರು ಅಂಡಾಶಯ ಕ್ಯಾನ್ಸರ್ ಚಿಕಿತ್ಸೆ ಬಗ್ಗೆ ವಿಷಯ ಮಂಡನೆ ಮಾಡಿದರು.