ಇತ್ತೀಚಿನ ಸುದ್ದಿ
ಬಂಗಾಳ ಕೊಲ್ಲಿಯಲ್ಲಿ ‘ಯಾಸ್ ‘ ಚಂಡಮಾರುತ ಅಬ್ಬರ : ರಾಜ್ಯದಲ್ಲಿ 5 ದಿನ ಭಾರಿ ಮಳೆ ಸಾಧ್ಯತೆ
24/05/2021, 11:24
ಬೆಂಗಳೂರು(reporterkarnataka news):
‘ತೌಕ್ತೆ’ ಚಂಡಮಾರುತದ ಬೆನ್ನಲ್ಲಿಯೇ ‘ಯಾಸ್’ ಚಂಡಮಾರುತದ ಅಬ್ಬರ ಶುರುವಾಗಿದ್ದು, ರಾಜ್ಯದಲ್ಲಿ 5 ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ.
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಸೃಷ್ಟಿಯಾದ ಚಂಡಮಾರುತ ಮೇ 26 ರಂದು ಓಡಿಶಾ ಮತ್ತು ಪಶ್ಚಿಮ ಬಂಗಾಳ ಕರಾವಳಿಗೆ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ಚಂಡಮಾರುತದ ಪರಿಣಾಮ ಪೂರ್ವ ಕರಾವಳಿಯಲ್ಲಿ ಭಾರಿ ಮಳೆಯಾಗಲಿದೆ. ಪಶ್ಚಿಮ ಕರಾವಳಿ ಪ್ರದೇಶದಲ್ಲಿ ಅದರ ಪರಿಣಾಮ ಇರಲಿದೆ. ಅರಬ್ಬಿ ಸಮುದ್ರದಲ್ಲಿ ಎದ್ದಿರುವ ಸುಳಿಗಾಳಿ ಪ್ರಭಾವದಿಂದ ಮೇ 26 ರವರೆಗೆ ರಾಜ್ಯದ ಕರಾವಳಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ.
ಮೇ 25ರ ವರೆಗೆ ಮೈಸೂರು, ಬೆಂಗಳೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗಲಿದೆ. ಅದೇ ರೀತಿ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು,
ಕೊಡಗು, ಹಾಸನ ಭಾಗದಲ್ಲಿಯೂ ಮೂರ್ನಾಲ್ಕು ದಿನ ಭಾರಿ ಮಳೆಯಾಗುವ ಸಾಧ್ಯತೆಯಿದ್ದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮೇ 29 ರವರೆಗೆ ಭಾರೀ ಮಳೆಯಾಗಲಿದೆ ಎನ್ನಲಾಗಿದೆ.