ಇತ್ತೀಚಿನ ಸುದ್ದಿ
ಬಂಡಿಪುರ ವಿಭಾಗದಲ್ಲಿ ಹೊಸ ಆನೆ ಕಾರ್ಯಪಡೆ ರಚನೆ: ಜನಸಂಪರ್ಕ ಸಭೆಯಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ
24/01/2024, 20:43

ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.com
ಬಂಡೀಪುರ ಅರಣ್ಯದಲ್ಲಿ ಅತಿ ಹೆಚ್ಚು ಆನೆಗಳಿದ್ದು, ಆನೆಗಳಿಂದ ಕಾಡಿನಂಚಿನ ಜನರಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ಮತ್ತು ಆನೆಗಳನ್ನು ಕೂಡಲೇ ಕಾಡಿಗೆ ಮರಳಿಸಲು ಪ್ರತ್ಯೇಕ ಆನೆ ಕಾರ್ಯಪಡೆ ರಚಿಸುವುದಾಗಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ.
ತಾಲೂಕಿನ ಹೆಡಿಯಾಲ ಗ್ರಾಮದ ಜನ ಸಂಪರ್ಕ ಸಭೆಯಲ್ಲಿ ಜನರ ಸಮಸ್ಯೆಗೆ ಸ್ಪಂದಿಸಿದ ಸಚಿವರು, ಕಾಡಿನಲ್ಲಿ ವನ್ಯಜೀವಿಗಳಿಗೆ ಸೂಕ್ತ ಆಹಾರ ಮತ್ತು ನೀರು ಲಭಿಸುತ್ತಿಲ್ಲ ಎಂಬ ಸಮಸ್ಯೆಗೆ ಉತ್ತರ ನೀಡಿ, ಈ ಬಾರಿ ಮಳೆಯ ಕೊರತೆ ಆಗಿದ್ದು, ಬೇಸಿಗೆಯಲ್ಲಿ ಕಾಡು ಪ್ರಾಣಿಗಳು ನಾಡಿಗೆ ಬಾರದಂತೆ ತಡೆಯಲು ಕಾಡಿನಲ್ಲಿರುವ ಎಲ್ಲ ಕೆರೆಗಳಿಗೆ ಕೊಳವೆ ಬಾವಿಗಳಿಂದ ಸೌರ ಪಂಪ್ ಸೆಟ್ ಮೂಲಕ ನೀರು ಹಾಯಿಸಲು ಸೂಚಿಸಿರುವುದಾಗಿ ತಿಳಿಸಿದರು.
ವನ್ಯಜೀವಿ ದಾಳಿಯಿಂದ ಕಾಡಂಚಿನ ಗ್ರಾಮಗಳಲ್ಲಿರುವ ಜನರಿಗೆ ಮತ್ತು ರೈತರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಲು ಶಾಶ್ವತ ಪರಿಹಾರ ಒದಗಿಸಲು ಶ್ರಮಿಸುವ ಭರವಸೆಯನ್ನೂ ನೀಡಿದರು.
ಜಂಟಿ ಸರ್ವೆ ಆಗಿಲ್ಲ, ಕಾಡಿನಿಂದ ಪ್ರಾಣಿಗಳು ಊರಿಗೆ ನುಗ್ಗುತ್ತಿವೆ ಜೊತೆಗೆ ಬೆಳೆ ಹಾನಿ ಆಗುತ್ತಿದೆ.ಕೆಲವು ಪ್ರಾಣಿಗಳಿಂದ ಆಗುವ ಬೆಳೆ ಹಾನಿಗೆ ಪರಿಹಾರ ದೊರಕುತ್ತಿಲ್ಲ ಎಂದು ಅಳಲು ತೋಡಿಕೊಂಡರು.
ಇದಕ್ಕೆ ಸ್ಪಂದಿಸಿದ ಸಚಿವರು, ಅಮೂಲ್ಯ ಪ್ರಾಣಹಾನಿ ಮತ್ತು ಜೀವಹಾನಿ ಆಗದ ರೀತಿಯಲ್ಲಿ ಕ್ರಮಕೈಗೊಳ್ಳಲು ಮತ್ತು ಬೆಳೆ ಹಾನಿಗೆ ಸೂಕ್ತ ಪರಿಹಾರ ದೊರಕಿಸಲು ಏನೆಲ್ಲಾ ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿ, ಎಲ್ಲ ವನ್ಯಮೃಗಗಳಿಂದ ಆಗುವ ಬೆಳೆ ಹಾನಿಗೆ ಹೆಚ್ಚಿನ ಪರಿಹಾರ ದೊರಕಿಸಲು ಪ್ರಯತ್ನಿಸಲಾಗುವುದು ಎಂದರು.
ಅರಣ್ಯ ಹಕ್ಕು ಕಾಯಿದೆ ಅಡಿ ಪರಿಹಾರವನ್ನು ಸಮಾಜ ಕಲ್ಯಾಣ ಇಲಾಖೆ ನಿರ್ವಹಿಸುತ್ತಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ಈ ಕುರಿತಂತೆ ಸಮಾಲೋಚಿಸಿ ಸಾಧ್ಯವಾದಷ್ಟೂ ಶೀಘ್ರ ಪರಿಹಾರ ಒದಗಿಸಲು ಪ್ರಯತ್ನಿಸುವರು ಎಂದರು.
ರೈಲ್ವೆ ಬ್ಯಾರಿಕೇಡ್ ಗೆ ಅಡ್ಡ ಕಂಬಿ ಹಾಕಬೇಕು, ಕಾಡು ಹಂದಿ, ಚಿರತೆ, ಹುಲಿ, ಕರಡಿಗಳು ನಾಡಿಗೆ ಬಾರದಂತೆ ತಡೆಯಲು ನುಗು ಬಳಿ ತಂತಿಬೇಲಿಯನ್ನೂ ಅಳವಡಿಸಬೇಕು ಎಂಬ ಜನರ ಬೇಡಿಕೆಗೆ ಸ್ಪಂದಿಸಿದ ಸಚಿವರು, 312 ಕಿಲೋ ಮೀಟರ್ ರೈಲ್ವೆ ಬ್ಯಾರಿಕೇಡ್ ಈಗಾಗಲೇ ಮುಗಿದ್ದು, 120 ಕಿಲೋ ಮೀಟರ್ ರೈಲ್ವೆ ಬ್ಯಾರಿಕೇಡ್ ಅಳವಡಿಸಲು ಮಂಜೂರಾತಿ ನೀಡಿರುವುದಾಗಿ ತಿಳಿಸಿದ ಸಚಿವರು, ಇನ್ನೂ ಹೆಚ್ಚಿನ ಬೇಡಿಕೆ ಬಂದರೆ ಅದಕ್ಕೂ ಮಂಜೂರಾತಿ ನೀಡಲಾಗುವುದು ಎಂದು ಅವರು ನುಡಿದರು.
ಬೇಲದಕುಪ್ಪೆ ಮಹದೇಶ್ವರ ಎಂಬ ದೇವಾಲಯ ಅರಣ್ಯ ಪ್ರದೇಶದಲ್ಲಿದ್ದು, ಸಾರ್ವಜನಿಕರು ವಾರಾಂತ್ಯದಲ್ಲಿ ಅಲ್ಲಿಗೆ ಹೋಗಿ ಪೂಜೆ ಸಲ್ಲಿಸುತ್ತಾರೆ. ಈ ದೇವಾಲಯಕ್ಕೆ ಮೂಲಸೌಕರ್ಯ ಇಲ್ಲ, ರಸ್ತೆ ಇಲ್ಲ ಇದಕ್ಕೆ ಅವಕಾಶ ಕಲ್ಪಿಸಬೇಕು ಎಂದು ಕೋರಿದಾಗ, ಉತ್ತರ ನೀಡಿದ ಸಚಿವರು, ಅರಣ್ಯ ಸಂರಕ್ಷಣಾ ಕಾಯಿದೆ ಅತ್ಯಂತ ಕಠಿಣವಾಗಿದ್ದು, ಈ ಮೊದಲೇ ರಸ್ತೆ ಇದ್ದರೆ ಅದನ್ನು ದುರಸ್ತಿ ಮಾಡಬಹುದೇ ಹೊರತು, ವಿಸ್ತರಣೆ ಮಾಡಲು ಮತ್ತು ಮೇಲ್ದರ್ಜೆಗೇರಿಸಲು ಅವಕಾಶವಿಲ್ಲ. ಸುಪ್ರೀಂಕೋರ್ಟ್ ನಿಂದ ಇದಕ್ಕೆ ನಿರ್ಬಂಧವೂ ಇದೆ, ಈ ಬಗ್ಗೆ ಸಭೆ ಕರೆದು ಪರಿಶೀಲಿಸಲಾಗುವುದು ಎಂದು ತಿಳಿಸಿದರು.
ಹುಲಿ ಯೋಜನೆ ಅಡಿಯಲ್ಲಿ ಬರುವ ನಿಧಿಯನ್ನು ಸಮರ್ಪಕವಾಗಿ ಬಳಸಿದ್ದರೆ ಇಂದು ಸಮಸ್ಯೆ ಬರುತ್ತಿರಲಿಲ್ಲ ಎಂದಾಗ, ಕೇಂದ್ರದಿಂದ ಮತ್ತು ರಾಜ್ಯ ಸರ್ಕಾರದಿಂದ ಬರುವ ಯಾವುದೇ ನಿಧಿ ಹೇಗೆ ವಿನಿಯೋಗವಾಗಿದೆ ಎಂಬ ಬಗ್ಗೆ ಆಡಿಟ್ ಆಗುತ್ತದೆ. ನಿರ್ದಿಷ್ಟ ಪ್ರಕರಣದಲ್ಲಿ ಯಾವುದೇ ಲೋಪ ಆಗಿದ್ದರೆ ದಾಖಲೆ ಸಮೇತ ದೂರು ನೀಡಿ ತನಿಖೆ ನಡೆಸಿ ಕ್ರಮ ವಹಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಅರಣ್ಯ ಸಿಬ್ಬಂದಿ ನಾಗರಿಕರೊಂದಿಗೆ ಸೌಜನ್ಯ ಪೂರ್ವಕವಾಗಿ ವರ್ತಿಸಬೇಕು, ಜನಸ್ನೇಹಿಯಾಗಿ ಕಾರ್ಯ ನಿರ್ವಹಿಸಬೇಕು ಎಂದು ಇದೇ ಸಂದರ್ಭದಲ್ಲಿ ಸಚಿವರು ಸಿಬ್ಬಂದಿಗೆ ನಿರ್ದೇಶನ ನೀಡಿದರು.
ಇದಕ್ಕೂ ಮುನ್ನ ಬಳ್ಳೂರು ಹುಂಡಿಯಲ್ಲಿ ಇತ್ತೀಚೆಗೆ ಹುಲಿ ದಾಳಿಯಿಂದ ಮೃತಪಟ್ಟ ರತ್ನಮ್ಮ ಅವರ ನಿವಾಸಕ್ಕೆ ತೆರಳಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ ಬಳಿಕ, ಹೆಡಿಯಾಲದಲ್ಲಿ ಆನೆಗಳು ನಾಡಿಗೆ ಬಾರದಂತೆ ಅಳವಡಿಸಿರುವ ರೈಲ್ವೆ ಬ್ಯಾರಿಕೇಡ್ ಗಳಿಗೆ ಹಂದಿ, ಕರಡಿ, ಹುಲಿ ಇತ್ಯಾದಿ ವನ್ಯಮೃಗಗಳೂ ಬಾರದಂತೆ ಅಳವಡಿಸಲಾಗಿರುವ ತಂತಿಬೇಲಿಯನ್ನು ವೀಕ್ಷಿಸಿದರು.
ಸಭೆಯಲ್ಲಿ ಶಾಸಕರುಗಳಾದ ದರ್ಶನ್ ಧ್ರುವನಾರಾಯಣ್, ಗಣೇಶ್ ಪ್ರಸಾದ್, ವನ್ಯಜೀವಿ ವಿಭಾಗದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸುಭಾಷ್ ಮಾಲ್ಕೇಡ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.