5:30 PM Thursday9 - January 2025
ಬ್ರೇಕಿಂಗ್ ನ್ಯೂಸ್
ಬಳ್ಳಾರಿಯಲ್ಲಿ ಜೀನ್ಸ್ ಪಾರ್ಕ್ ಸ್ಥಾಪನೆ, ರಾಹುಲ್ ಗಾಂಧಿ ಕೊಟ್ಟಿದ್ದ ಭರವಸೆ ಸಾಕಾರ: ಸಚಿವ… ನಿಮ್ಹಾನ್ಸ್‌ನಲ್ಲಿ ಕರ್ನಾಟಕ ಆಡಳಿತ ಸೇವೆಯ ಅಧಿಕಾರಿಯ ನೇಮಕಾತಿಗೆ ಕ್ರಮ ಕೈಗೊಳ್ಳಿ: ಮುಖ್ಯಮಂತ್ರಿ ಸೂಚನೆ ದೇಸಿ ತಿನಿಸಿನ ಬೇಡಿಕೆ ಹೆಚ್ಚಸಲು ಕ್ರಮ: ಸಚಿವ ಎನ್. ಚಲುವರಾಯಸ್ವಾಮಿ ನಂಜನಗೂಡು: ಶಿವಶರಣ ಒಕ್ಕಲಿಗರ ಮುದ್ದಣನವರ ಪ್ರಪ್ರಥಮ ಜಯಂತಿ ಆಚರಣೆ ಬಳ್ಳಾರಿ: ಎಲ್ಲ ರೈಲುಗಳ ಆರಂಭಕ್ಕಾಗಿ ರಾಜ್ಯ ರೈಲ್ವೆ ಕ್ರಿಯಾ ಸಮಿತಿಯಿಂದ ಒಂದು ತಿಂಗಳ… ಎಂಎಸ್‌ ಐಎಲ್‌ ಟೂರ್‌ ಪ್ಯಾಕೇಜ್‌ ಗೆ ಸಚಿವ ಎಂ. ಬಿ. ಪಾಟೀಲ್ ಚಾಲನೆ ಜ.10-12: ಸೌತ್ ಏಷ್ಯಾ ಮಾಸ್ಟರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್-2025; ದೇಶ – ವಿದೇಶದ 2… ದೇಶದ ವೈವಿಧ್ಯತೆ, ಸೌಹಾರ್ದತೆ ಉಳಿಸಿಕೊಳ್ಳುವ ಮೂಲಕ ಆಂತರಿಕವಾಗಿ ಸಶಕ್ತವಾಗಬೇಕಿದೆ: ಧರ್ಮಸ್ಥಳದಲ್ಲಿ ಉಪ ರಾಷ್ಟ್ರಪತಿ… 60% ಕಮೀಷನ್; ನಿಮ್ಮ ಲೂಟಿ ಸಾಕ್ಷಿಗುಡ್ಡೆ ಇಲ್ಲಿದೆ ನೋಡಿ: ಸಿಎಂಗೆ ಕೇಂದ್ರ ಸಚಿವ… ಇದು 60 ಪರ್ಸೆಂಟ್‌ ಕಮಿಷನ್‌ ಸರ್ಕಾರ, ಗುತ್ತಿಗೆದಾರರಿಗೆ ನೀಡಲು ಹಣವಿಲ್ಲ: ಪ್ರತಿಪಕ್ಷ ನಾಯಕ…

ಇತ್ತೀಚಿನ ಸುದ್ದಿ

ಬಳ್ಳಾರಿಯಲ್ಲಿ ಜೀನ್ಸ್ ಪಾರ್ಕ್ ಸ್ಥಾಪನೆ, ರಾಹುಲ್ ಗಾಂಧಿ ಕೊಟ್ಟಿದ್ದ ಭರವಸೆ ಸಾಕಾರ: ಸಚಿವ ಎಂ ಬಿ. ಪಾಟೀಲ್

09/01/2025, 17:22

*154 ಎಕರೆ ಸ್ವಾಧೀನ, ಪ್ರಮುಖ ಜವಳಿ ಉದ್ಯಮಗಳ ಅಹ್ವಾನಕ್ಕೆ ಸಿದ್ಧತೆ*

ಬೆಂಗಳೂರು(reporterkarnataka.com):
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ಕೊಟ್ಟಿದ್ದ ಭರವಸೆಯಂತೆ ಬಳ್ಳಾರಿಗೆ ಹೊಂದಿಕೊಂಡಿರುವ ಸಂಜೀವರಾಯನ ಕೋಟೆಯಲ್ಲಿ ಕೆಐಎಡಿಬಿ ವತಿಯಿಂದ `ಜೀನ್ಸ್ ಪಾರ್ಕ್’ ಸ್ಥಾಪಿಸಲಾಗುವುದು. ಇದಕ್ಕಾಗಿ ಈಗಾಗಲೇ 154 ಎಕರೆ ಜಮೀನನ್ನು ಸ್ವಾಧೀನಪಡಿಸಲಾಗಿದ್ದು, ಇಲ್ಲಿ ಅಂತಾರಾಷ್ಟ್ರೀಯ ಮಟ್ಟದ ಜೀನ್ಸ್ ಉಡುಪು ತಯಾರಿಕೆಯ ಕಂಪನಿಗಳೂ ಇರುವಂತೆ ನೋಡಿಕೊಳ್ಳಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ್ ಹೇಳಿದರು.
ಗುರುವಾರ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, `ಬಾಂಗ್ಲಾದೇಶದಲ್ಲಿ ರಾಜಕೀಯ ಅಸ್ಥಿರತೆ ಉಂಟಾದ ಮೇಲೆ ಅಲ್ಲಿನ ಜೀನ್ಸ್ ಉಡುಪು ತಯಾರಿಕೆ ಉದ್ಯಮ ನೆಲ ಕಚ್ಚಿದೆ. ಹೂಡಿಕೆದಾರರು ಮತ್ತು ರಫ್ತುದಾರರ ಗಮನ ಈಗ ಬಳ್ಳಾರಿಯಲ್ಲಿನ ಜೀನ್ಸ್ ತಯಾರಿಕೆ ಉದ್ಯಮದ ಮೇಲೆ ಹರಿದಿದೆ. ಇದನ್ನು ನಾವು ಸದವಕಾಶವಾಗಿ ಪರಿವರ್ತಿಸಿಕೊಂಡು, ಹೂಡಿಕೆಯನ್ನು ಆಕರ್ಷಿಸಲಿದ್ದೇವೆ’ ಎಂದಿದ್ದಾರೆ.
ಬಳ್ಳಾರಿಯಲ್ಲಿ 500ಕ್ಕಿಂತಲೂ ಹೆಚ್ಚು ಜೀನ್ಸ್ ಉಡುಪು ತಯಾರಿಕೆ ಘಟಕಗಳಿದ್ದು, ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಹತ್ತಾರು ಸಾವಿರ ಉದ್ಯೋಗಗಳನ್ನು ಸೃಷ್ಟಿಸಿವೆ. ಇದಕ್ಕೆ ವ್ಯವಸ್ಥಿತ ರೂಪ ಕೊಟ್ಟು, ಇದನ್ನು ರಫ್ತು ಕೇಂದ್ರಿತವಾಗಿಯೂ ಬೆಳೆಸಬೇಕು ಎನ್ನುವುದು ಕೈಗಾರಿಕಾ ಇಲಾಖೆಯ ಚಿಂತನೆಯಾಗಿದೆ. ಇದಕ್ಕಾಗಿ ಜವಳಿ ಇಲಾಖೆಯ ಸಹಾಯವನ್ನೂ ಪಡೆಯಲಾಗುವುದು. ಆ ಇಲಾಖೆಯಲ್ಲಿ ಜೀನ್ಸ್ ತಯಾರಿಕೆ ಘಟಕಗಳಿಗೆ ರಿಯಾಯಿತಿ ಕೊಡುವ ವ್ಯವಸ್ಥೆ ಇದ್ದರೆ ಅದನ್ನೂ ಕೊಡಿಸುವ ಕೆಲಸ ಮಾಡಲಾಗುವುದು. ಈ ಸಂಬಂಧ ಜವಳಿ ಸಚಿವರ ಜತೆಗೂ ಸಭೆ ನಡೆಸಲಾಗುವುದು ಎಂದು ಅವರು ವಿವರಿಸಿದ್ದಾರೆ.
ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ರಾಹುಲ್ ಗಾಂಧಿ ಬಳ್ಳಾರಿಯ ಜೀನ್ಸ್ ತಯಾರಿಕೆ ಘಟಕಗಳ ಉದ್ಯೋಗಿಗಳು ಮತ್ತು ಮಾಲೀಕರ ಜತೆ ಮಾತುಕತೆ ನಡೆಸಿದ್ದರು. ಆಗ ಅವರು, ಜೀನ್ಸ್ ಪಾರ್ಕ್ ಸ್ಥಾಪಿಸುವ ಭರವಸೆ ನೀಡಿದ್ದರು. ಇದಾದ ಮೇಲೆ, 2023ರ ಆಗಸ್ಟ್ 1ರಂದು ನಮ್ಮ ಇಲಾಖೆಗೆ ಪತ್ರ ಬರೆದು, ಈ ಬಗ್ಗೆ ಗಮನ ಸೆಳೆದಿದ್ದರು. ಈ ಯೋಜನೆಯ ಅನುಷ್ಠಾನಕ್ಕೆ ಈಗ ಕಾಲ ಪ್ರಶಸ್ತವಾಗಿದ್ದು, ಅಂತಾರಾಷ್ಟ್ರೀಯ ಪರಿಸ್ಥಿತಿ ಅನುಕೂಲಕರವಾಗಿದೆ ಎಂದು ಅವರು ನುಡಿದಿದ್ದಾರೆ.
ಮುಖ್ಯಮಂತ್ರಿ ಸಿದ್ಧರಾಮಯ್ಯ ಕಳೆದ ಫೆಬ್ರವರಿಯಲ್ಲಿ ಮಂಡಿಸಿದ ಬಜೆಟ್ಟಿನಲ್ಲೂ ಬಳ್ಳಾರಿಯಲ್ಲಿ ಜೀನ್ಸ್ ಪಾರ್ಕ್ ಸ್ಥಾಪಿಸುವ ಘೋಷಣೆ ಮಾಡಿದ್ದಾರೆ. ಈಗ ಅಸಂಘಟಿತವಾಗಿರುವ ಜೀನ್ಸ್ ಉದ್ಯಮಕ್ಕೆ ಸಂಘಟಿತ ರೂಪ ಕೊಟ್ಟು, ಇದನ್ನು ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಏರಿಸುವುದು ಇದರ ಹಿಂದಿನ ಉದ್ದೇಶವಾಗಿದೆ. ಬಳ್ಳಾರಿ ಜೀನ್ಸ್ ಪಾರ್ಕ್ ನಿಂದ ಪ್ರಾದೇಶಿಕ ಆರ್ಥಿಕತೆಗೆ ಚೈತನ್ಯ ಬರಲಿದೆ. ಜತೆಗೆ ನಾವೀನ್ಯತೆ ಮತ್ತು ಉಡುಪು ಕ್ಷೇತ್ರಕ್ಕೆ ಸಂಬಂಧಿಸಿದ ಸಂಶೋಧನೆಗಳಿಗೆ ಆದ್ಯತೆ ಸಿಗಲಿದೆ ಎಂದು ಪಾಟೀಲ ಭರವಸೆ ವ್ಯಕ್ತಪಡಿಸಿದ್ದಾರೆ.
ಬಳ್ಳಾರಿ ಸುತ್ತಮುತ್ತ ಈಗಾಗಲೇ ಸಕ್ರಿಯವಾಗಿರುವ ಜೀನ್ಸ್ ಉಡುಪು ತಯಾರಿಕೆ ಘಟಕಗಳಿಗೂ ಹೆಚ್ಚಿನ ನೆರವು ನೀಡಲಾಗುವುದು. ಜೀನ್ಸ್ ಉಡುಪುಗಳು ಯುವಜನಾಂಗಕ್ಕೆ ಅಚ್ಚುಮೆಚ್ಚಿನದಾಗಿವೆ. ಇಲ್ಲಿರುವ ಮಾರುಕಟ್ಟೆಯನ್ನು ನಾವು ಗುರಿಯಾಗಿಟ್ಟುಕೊಂಡು, ದಾಪುಗಾಲಿಡಲಿದ್ದೇವೆ. ರಾಜ್ಯದ ಉದ್ಯಮಸ್ನೇಹಿ ಕೈಗಾರಿಕಾ ನೀತಿಯು ಇದಕ್ಕೆ ಮತ್ತಷ್ಟು ಇಂಬು ಕೊಡಲಿದೆ ಎಂದು ಸಚಿವರು ಹೇಳಿದ್ದಾರೆ.

ಬಳ್ಳಾರಿಯಲ್ಲಿ ಜೀನ್ಸ್ ಪಾರ್ಕ್ ಸ್ಥಾಪಿಸಬೇಕೆಂಬುದು ರಾಹುಲ್ ಗಾಂಧಿಯವರು ಕೊಟ್ಟ ಮಾತಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಕಳೆದ ಬಜೆಟ್ಟಿನಲ್ಲಿ ಇದನ್ನು ಘೋಷಿಸಿದ್ದರು. ಈಗ ಇದಕ್ಕೆ ಮುಂದಡಿ ಇಡಲಾಗಿದೆ. ಜವಳಿ ಇಲಾಖೆಯ ಸಹಕಾರ, ಸಲಹೆಗಳನ್ನೂ ಪಡೆದುಕೊಂಡು, ಅಲ್ಲಿ ಈಗಾಗಲೇ ಇರುವ ಯೋಜನೆಗಳ ಪ್ರಯೋಜನವನ್ನೂ ಜೀನ್ಸ್ ಘಟಕಗಳಿಗೆ ತಲುಪಿಸಲಾಗುವುದು.

ಎಂ ಬಿ ಪಾಟೀಲ್,
ಬೃಹತ್ & ಮಧ್ಯಮ ಕೈಗಾರಿಕಾ ಸಚಿವರು

ಇತ್ತೀಚಿನ ಸುದ್ದಿ

ಜಾಹೀರಾತು