ಇತ್ತೀಚಿನ ಸುದ್ದಿ
ಬಡವರು ರಸ್ತೆ ಬದಿ ತಿಂಡಿ ಮಾರಿದ್ರೆ ಬೀದಿ ವ್ಯಾಪಾರ! ಉಳ್ಳವರು ಸ್ಟಾಲ್ ಹಾಕಿಸಿ ರಂಗು ಗಂಗಿನ ಲೈಟ್ ಹಾಕಿದ್ರೆ ಫುಡ್ ಫೆಸ್ಟಿವಲ್!!
23/03/2023, 23:57
ಅಶೋಕ್ ಕಲ್ಲಡ್ಕ ಮಂಗಳೂರು
ಅನುಷ್ ಪಂಡಿತ್ ಮಂಗಳೂರು
info.reporterkarnataka@gmail.com
ಬೀದಿ ವ್ಯಾಪಾರಿಗಳನ್ನು ಕಂಡ ಕಂಡಲ್ಲಿ ಓಡಿಸುವ, ಟೈಗರ್ ಕಾರ್ಯಾಚರಣೆ ಮಾಡಿಸುವ ಮಂಗಳೂರು ಮಹಾನಗರ ಪಾಲಿಕೆ ಫುಡ್ ಫೆಸ್ಟಿವಲ್ ಗೆ ಅವಕಾಶ ನೀಡಿದೆ. ಪಾಲಿಕೆ ಕಚೇರಿಯ ಮೂಗಿನಡಿಯಲ್ಲೇ ಇರುವ ಪ್ರಮುಖ ರಸ್ತೆ ಬದಿಯಲ್ಲಿ ಫೆಸ್ಡಿವಲ್ ನಡೆಯುತ್ತಿದೆ. ಬುಧವಾರ ಆರಂಭವಾದ ಆಹಾರೋತ್ಸವ ಈ ತಿಂಗಳ 26ರ ವರೆಗೆ ನಡೆಯಲಿದೆ.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಬಿಜೆಪಿ ಆಡಳಿತದ ಮಂಗಳೂರು ಮಹಾನಗರಪಾಲಿಕೆಗೂ ಬೀದಿ ವ್ಯಾಪಾರಿಗಳಿಗೂ ಅಷ್ಟಕಷ್ಟೇ. ಈ ಹಿಂದೆಯೂ ಪಾಲಿಕೆಯಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದ್ದಾಗ ಅಂದಿನ ಪಾಲಿಕೆ ಕಮಿಷನರ್ ವಿಜಯ ಪ್ರಕಾಶ್ ನೇತೃತ್ವದಲ್ಲಿ ಬೀದಿ ವ್ಯಾಪಾರಿಗಳ ವಿರುದ್ಧ ಭಾರೀ ಕಾರ್ಯಾಚರಣೆ ನಡೆಸಲಾಗಿತ್ತು. ಇದಕ್ಕೆ ಟೈಗರ್ ಕಾರ್ಯಾಚರಣೆ ಎಂದು ಹೆಸರು ಕೂಡ ಇಡಲಾಗಿತ್ತು. ಪಾಲಿಕೆಯ ಕಸ ಎತ್ತುವ ಹಳೆ ಲಾರಿಗೆ ಹುಲಿಯ ಬಣ್ಣದ ಕಲರ್ ಹಾಕಿ ಟೈಗರ್ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಬೀದಿ ವ್ಯಾಪಾರಿಗಳ ಸಾಮಗ್ರಿಗಳನ್ನು ಈ ಲಾರಿಯಲ್ಲಿ ತುಂಬಿಸಿ ತರಲಾಗುತ್ತಿತ್ತು. ಟೈಗರ್ ಲಾರಿಯನ್ನು ಕಂಡ ಕೂಡಲೇ ಬೀದಿ ವ್ಯಾಪಾರಿಗಳು ಎದ್ದು ಬಿದ್ದು ಓಡುತ್ತಿದ್ದರು. ನಂತರ ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಬೀದಿ ವ್ಯಾಪಾರಿಗಳ ಕಲ್ಯಾಣಕ್ಕೆ ಯೋಜನೆಯೊಂದನ್ನು ತಂದರು. ಪ್ರತಿ ಬೀದಿ ವ್ಯಾಪಾರಿಗಳಿಗೆ ತಲಾ 10 ಸಾವಿರ ರೂ. ಸಾಲವನ್ನು ರಾಷ್ಟ್ರೀಕೃತ ಬ್ಯಾಂಕ್ ಮೂಲಕ ನೀಡಿದರು. ಮಂಗಳೂರಿನ ಪುರಭವನದಲ್ಲಿ ಬೃಹತ್ ಸಾಲಮೇಳ ಸಮಾರಂಭವೇ ನಡೆದಿತ್ತು. ಟೈಗರ್ ಕಾರ್ಯಾಚರಣೆ ಮೂಲಕ ಅಂದು ಓಡಿಸಿದ ಬೀದಿ ವ್ಯಾಪಾರಿಗಳಿಗೆ ರೆಡ್ ಕಾರ್ಪೆಟ್ ಹಾಸಿ ಸಾಲ ನೀಡಲಾಯಿತು. ಬಡವರಿಗೆ ಸಾಲ ನೀಡಲು ಕೋಟ್ ದಾರಿ ಕೆಲವು ಮೆನೇಜರ್ ಗಳು ಕೊಸರಾಡಿದ್ದು ಬೇರೆ ವಿಷಯ. ಆದರೆ ಹೆಚ್ಚಿನವರಿಗೆ 10 ಸಾವಿರ ಸಾಲ ದೊರಕಿತ್ತು. ಇಷ್ಟೆಲ್ಲ ನಡೆದ ಬಳಿಕವೂ ಮೊನ್ನೆ ಮೊನ್ನೆ ಪಾಲಿಕೆ ಆಡಳಿತ ಬೀದಿ ವ್ಯಾಪಾರಿಗಳ ಮೇಲೆ ಗದಾ ಪ್ರಹಾರ ಮಾಡಿದೆ.
ಬೀದಿ ಬದಿ ಆಹಾರ ಮಾರುವವರ ಸ್ಟವ್, ಪಾತ್ರೆ, ಜಿನಸಿ ಸಾಮಾಗ್ರಿಗಳನ್ನು ಹೊತ್ತು ಕೊಂಡು ಹೋಗಿದೆ. ಇದರಲ್ಲಿ 10 ಸಾವಿರ ಸಾಲ ಪಡೆದ ಬೀದಿ ವ್ಯಾಪಾರಿಗಳು ಕೂಡ ಇದ್ದರು. ಇದೆಲ್ಲ ಈಗ ಹಳೆ ಕಥೆ. ಹೊಸ ಕಥೆ ಏನೆಂದರೆ ಇದೀಗ ನಡೆಯುತ್ತಿರುವ ಫುಡ್ ಫೆಸ್ಟಿವಲ್. ವಾಸ್ತವದಲ್ಲಿ ಇದು ಕೂಡ ತಾತ್ಕಾಲಿಕ ನೆಲೆಯ ಬೀದಿ ಬದಿ ವ್ಯಾಪಾರವೇ. ಆದರೆ ಇವರು ಸುಂದರವಾದ ಸ್ಟಾಲ್ ಹಾಕಿ ಅದಕ್ಕೆ ಪಂಚತಾರಾ ಸ್ಪರ್ಶ ನೀಡುತ್ತಾರೆ. ಪಾಲಿಕೆ ಕಚೇರಿ ಇರುವ ರಸ್ತೆಯಲ್ಲೇ ಸ್ಟ್ರೀಟ್ ಫುಡ್ ಫೆಸ್ಟಿವಲ್ ಸ್ಟಾಲ್ ಗಳು ಆರಂಭವಾಗಿ ಮಣ್ಣಗುಡ್ಡೆ ಗುರ್ಜಿ ಜಂಕ್ಷನ್ ವರೆಗೆ ಮುಂದುವರಿಯುತ್ತದೆ. ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ಪ್ರಾಯೋಜಕತ್ವದಲ್ಲಿ ಇದು ನಡೆಯುತ್ತಿದೆ. ಪ್ರತಿದಿನ ಸಂಜೆ 5ರಿಂದ ರಾತ್ರಿ 11 ಗಂಟೆಯವರೆಗೆ ಆಹಾರೋತ್ಸವ ನಡೆಯುತ್ತದೆ.
ಸುಮಾರು 200 ಮಳಿಗೆಗಳಿವೆ.








ಸಿನೆಮಾ ತಾರೆಯರು ಭಾಗವಹಿಸುತ್ತಾರೆ. ನೃತ್ಯ, ಹಾಡು, ಮಿಮಿಕ್ರಿ,ನಟನೆ, ಬೀದಿ ಜಾದೂ, ಕರೊಕೆ, ವಾದ್ಯಗೋಷ್ಠಿ, ಬೀದಿ ಸರ್ಕಸ್, ಸೈಕಲ್ ಬ್ಯಾಲೆನ್ಸ್ ಗೇಮ್ಸ್, ಜುಂಬಾ, ಫಿಟ್‌ನೆಸ್ ಕ್ರೀಡೆ, ಯೋಗ, ಮನೋರಂಜನಾ ಕಾರ್ಯಕ್ರಮಗಳಿರುತ್ತವೆ. ದೇಹದಾರ್ಢ್ಯ, ಪಟಾಕಿ ಪ್ರದರ್ಶನ, ಚೆಂಡೆ ಮತ್ತು ನಾಸಿಕ್ ಬ್ಯಾಂಡ್,ಕಿರು ಮ್ಯೂಸಿಕ್ ಬ್ಯಾಂಡ್ ಬೆಂಕಿನೃತ್ಯ, ಫ್ಲಾಶ್ ಬೆಳಕಿನಾಟ ಇರುತ್ತವೆ. ಕಾರ್ಯಕ್ರಮಕ್ಕೆ ಮೆರಗು ನೀಡುವ ನಿಟ್ಟಿನಲ್ಲಿ ವರ್ಣರಂಜಿತ ವಿದ್ಯತ್ ದೀಪಲಂಕಾರ, ತಾಲೀಮು ಪ್ರದರ್ಶನ, ಸಂಗೀತ ಕಾರ್ಯಕ್ರಮ, ಹುಲಿವೇಷ ಬಣ್ಣಗಾರಿಕೆ ಸ್ಪರ್ಧೆ, ಗೂಡುದೀಪ ಮುಂತಾದುವುಗಳನ್ನು ಆಯೋಜಿಸಲಾಗಿದೆ. ಪ್ರತಿ ಜಂಕ್ಷನ್‌ನಲ್ಲೂ ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತದೆ. ಮಕ್ಕಳಿಗಾಗಿ ಪ್ರತ್ಯೇಕ ವಲಯ, ಕುದುರೆ ಸವಾರಿ, ಒಂಟೆ ಸವಾರಿ, ಹಳೆಯ ಮಾದರಿಗಳ ಕಾರುಗಳ ಪ್ರದರ್ಶನ, ಸೆಲ್ಫಿ ಬೂತ್ ಮಾಡಿ ಹೈಫೈ ಟಚ್ ನೀಡಲಾಗಿದೆ.

ನಿಜಕ್ಕೂ ಇಂತಹ ಫೆಸ್ಟಿವಲ್ ಮಾಡುವುದು ಒಳ್ಳೆಯ ವಿಷಯವೇ. ಫುಡ್ ಫೆಸ್ಟಿವಲ್ ತರಹದ ಹಲವು ಫೆಸ್ಟಿವಲ್ ಗಳು ಆಗಾಗ ನಡೆಯುತ್ತಲೇ ಇರಬೇಕು. ಎಲೆಕ್ಷನ್ ಬಂದಾಗ ಮಾತ್ರ ಇದೆಲ್ಲ ನೆನಪಾಗಬಾರದು. ಹಾಗೆ ಬಡವರ ಸುಸ್ಥಿರ ಆದಾಯಕ್ಕೂ ಪಾಲಿಕೆ ಅವಕಾಶ ಮಾಡಿಕೊಡಬೇಕು.














