ಇತ್ತೀಚಿನ ಸುದ್ದಿ
ಭಾರೀ ಹಿಮಮಾರುತ: ವಾಹನಗಳಲ್ಲಿ ಸಿಲುಕಿ 9 ಮಕ್ಕಳು ಸಹಿತ 21 ಮಂದಿ ದಾರುಣ ಸಾವು
09/01/2022, 12:26
ಲಾಹೋರ್(reporterkarnataka.com): ಪಾಕಿಸ್ತಾನದ ಪ್ರವಾಸಿ ಧಾಮ ಮುರ್ರಿ ಪಟ್ಟಣದ ಸಮೀಪ ಭಾರೀ ಹಿಮಮಾರುತದಿಂದಾಗಿ ಸಂಚರಿಸಲು ಸಾಧ್ಯವಾಗದೆ, ತಮ್ಮ ವಾಹನಗಳಲ್ಲಿ ತಾಸುಗಟ್ಟಲೆ ಸಿಕ್ಕಿಹಾಕಿಕೊಂಡಿದ್ದ 9 ಮಂದಿ ಮಕ್ಕಳು ಸೇರಿದಂತೆ 21 ಮಂದಿ ಸಾವನ್ನಪ್ಪಿದ ಧಾರುಣ ಘಟನೆ ಭಾನುವಾರ ನಡೆದಿದೆ.
ಮೃತರಲ್ಲಿ ಹೆಚ್ಚಿನವರು ಪ್ರವಾಸಿಗರೆಂದು ತಿಳಿದು ಬಂದಿದೆ.
ಈ ದಾರುಣ ದುರಂತದ ಬಳಿಕ ಮುರ್ರಿ ಪ್ರಾಂತವನ್ನು ಪ್ರಾಕೃತಿಕ ವಿಕೋಪ ಪೀಡಿತ ಪ್ರದೇಶವೆಂದು ಪಂಜಾಬ್ ಪ್ರಾಂತದ ಅಧಿಕಾರಿಗಳು ಘೋಷಿಸಿದ್ದಾರೆಂದು ಡಾನ್ ಸುದ್ದಿಸಂಸ್ಥೆ ವರದಿ ಮಾಡಿದೆ. ಮೃತರಲ್ಲಿ ಕನಿಷ್ಠ 9 ಮಂದಿ ಮಕ್ಕಳೆಂದು ತಿಳಿದು ಬಂದಿದೆ.
ಇಸ್ಲಾಮಾಬಾದ್ ನಿಂದ ಸುಮಾರು 70 ಕಿಮೀ. ದೂರದಲ್ಲಿರುವ ಮುರ್ರಿ ಪ್ರದೇಶಕ್ಕೆ ಭಾರೀ ಸಂಖ್ಯೆಯಲ್ಲಿ ಯಾತ್ರಿಕರ ಮಹಾಪೂರವೇ ಹರಿದುಬಂದಿರುವುದು ದುರಂತಕ್ಕೆ ಕಾರಣವಾಗಿರುವ ಸಾಧ್ಯತೆಯಿದೆಯೆಂದು ಪಾಕಿಸ್ತಾನದ ಸಚಿವ ಶೇಖ್ ರಶೀದ್ ತಿಳಿಸಿದ್ದಾರೆ.
ದುರಂತ ನಡೆದ ಸ್ಥಳದಲ್ಲಿ ಪಾಕ್ ಸೇನೆಯು ನಾಗರಿಕರ ಸಹಕಾರದೊಂದಿಗೆ ರಕ್ಷಣೆ ಹಾಗೂ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಪಾಕಿಸ್ತಾನದ ಪರಿಹಾರ ಕಾರ್ಯಾಚರಣಾ ತಂಡದ ಅಧಿಕಾರಿಗಳ ಜೊತೆ ರಾವಲ್ಪಿಂಡಿ ಹಾಗೂ ಇಸ್ಲಾಮಾಬಾದ್ ನ ಪೊಲೀಸ್ ಅಧಿಕಾರಿಗಳು ನಗರದಲ್ಲಿ ಬೀಡುಬಿಟ್ಟಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರ
ಮುರ್ರಿ ಪ್ರಾಂತಕ್ಕೆ ಪ್ರವಾಸಿಗರ ಆಗಮನವನ್ನು ಸ್ಥಗಿತಗೊಳಿಸುವಂತೆ ಸ್ಥಳೀಯರು ಸರಕಾರಕ್ಕೆ ಮನವಿ ಮಾಡುತ್ತಿರುವ ವಿಡಿಯೋವೊಂದು ಟ್ವಿಟ್ಟರ್ನಲ್ಲಿ ಪ್ರಸಾರವಾಗಿದೆ. ‘‘ ದಯವಿಟ್ಟು ಈ ಸಂದೇಶವನ್ನು ಸರಕಾರಕ್ಕೆ ಕಳುಹಿಸಿ. ಇಲ್ಲಿ ಕಾರಿನೊಳಗೆ ಕನಿಷ್ಠ 18-19 ಮಂದಿ ಸಾವನ್ನಪ್ಪಿರುವುದನ್ನು ಸಾವನ್ನಪ್ಪಿದ್ದು ಇಲ್ಲಿಗೆ ಬಾರದಂತೆ ಪ್ರವಾಸಿಗರನ್ನು ಕೇಳಿಕೊಳ್ಳಿ. ಇವರಲ್ಲಿ ನಾಲ್ಕು ಮಂದಿ ಆಮ್ಲಜನಕದ ಕೊರತೆಯಿಂದ ಮೃತಪಟ್ಟಿದ್ದಾರೆ’’ ಎಂದು ವ್ಯಕ್ತಿಯೊಬ್ಬರು ಟ್ವಿಟ್ಟರ್‌ನಲ್ಲಿ ಹೇಳಿಕೊಂಡಿದ್ದಾರೆ.
ಹಿಮಮಾರುತದಲ್ಲಿ ಸಿಕ್ಕಿಹಾಕಿಕೊಂಡ ಕಾರುಗಳ ಒಳಗೆ ಇರುವವರನ್ನು ರಕ್ಷಿಸಲು ಭಾರೀ ಕಾರ್ಯಾಚರಣೆ ನಡೆಯುತ್ತಿದೆ. ಹಿಮಮಾರುತದಲ್ಲಿ ಸಿಕ್ಕಿಹಾಕಿಕೊಂಡ ಪ್ರಯಾಣಿಕರಿಗೆ ಸ್ಥಳೀಯರು ಕಂಬಳಿಗಳನ್ನು ಹಾಗೂ ಬೆಚ್ಚನೆಯ ಆಹಾರವನ್ನು ಪೂರೈಕೆ ಮಾಡುತ್ತಿದ್ದಾರೆಂಡು ಡಾನ್ ಸುದ್ದಿಸಂಸ್ಥೆ ವರದಿ ಮಾಡಿದೆ.
ಮುರ್ರಿ ಪ್ರಾಂತವು ಇಸ್ಲಾಮಾಬಾದ್‌ನಿಂದ ಈಶಾನ್ಯಕ್ಕೆ 70 ಕಿ.ಮೀ. ದೂರದಲ್ಲಿದೆ. ಹಿಮಮಾರುತದ ಕಾರಣದಿಂದಾಗಿ ಜನರು ಮುರ್ರಿಗೆ ಆಗಮಿಸುವುದನ್ನು ನಿಲ್ಲಿಸುವಂತೆ ಪಂಜಾಬ್ ಪ್ರಾಂತ ಸರಕಾರವು ಈಗಾಗಲೇ ಜನರನ್ನು ಆಗ್ರಹಿಸಿದೆ. ಹಿಮದ ನಡುವೆ ಸಿಕ್ಕಿಹಾಕಿಕೊಂಡಿರುವ ಪ್ರವಾಸಿಗರನ್ನು ತೆರವುಗೊಳಿಸುವುದೇ ತನ್ನ ಆಡಳಿತದ ಪ್ರಥಮ ಆದ್ಯತೆಆಗಿದೆ ಎಂದು ಪಂಜಾಬ್ ಪ್ರಾಂತದ ಮುಖ್ಯಮಂತ್ರಿ ಉಸ್ಮಾನ್ ಬುಝ್‌ದಾರ್ ತಿಳಿಸಿದ್ದಾರೆ.
ಮುರ್ರಿಯಲ್ಲಿ ಭಾರೀ ಸಂಖ್ಯೆಯ ವಾಹನಗಳು ಹಿಮರಾಶಿಯಲ್ಲಿ ಸಿಕ್ಕಿಹಾಕಿಕೊಂಡಿರುವ ಹಲವಾರು ಛಾಯಾಚಿತ್ರಗಳು ಹಾಗೂ ವಿಡಿಯೋಗಳು ಟ್ವ್ಟಿಟ್ಟರ್ ನಲ್ಲಿ ಪ್ರಸಾರವಾಗುತ್ತಿದೆ. ಮುರ್ರಿಟ್ಟಣವು ದೊಡ್ಡ ಸಂಖೆಯ ಪ್ರವಾಸಿಗರ ಹರಿವನ್ನು ನಿಭಾಯಿಸಲು ಸಾಧ್ಯವಾಗಬಲ್ಲಂತಹ ಮೂಲಸೌಕರ್ಯಗಳ ಕೊರತೆಯಿರುವುದಾಗಿ ಅದು ಹೇಳಿದೆ.