ಇತ್ತೀಚಿನ ಸುದ್ದಿ
ಅವಕಾಶ ನೀಡಿದರೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ: ಬದ್ರಿನಾಥ್ ಕಾಮತ್
22/04/2022, 09:03
ಮಂಗಳೂರು(reporterkarnataka.com): ನಾನೊಬ್ಬ ಬಿಜೆಪಿ ನಿಷ್ಠಾವಂತ ಸೇವಕ. ಪಕ್ಷ ಅವಕಾಶ ಕಲ್ಪಿಸಿದರೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಉದ್ಯಮಿ,ಪಕ್ಷದ ಮುಖಂಡ ಬದ್ರಿನಾಥ್ ಕಾಮತ್ ಹೇಳುತ್ತಾರೆ.
ಪಕ್ಷಕ್ಕೆ ನಾನು ಮಾಡಿದ ಸೇವೆ ಹಾಗೂ ನನ್ನ ಸಮಾಜ ಸೇವೆಯನ್ನು ಪಕ್ಷ ಒಂದಲ್ಲ ಒಂದು ದಿನ ಗುರುತಿಸಿ ಅವಕಾಶ ನೀಡುತ್ತದೆ ಎಂಬ ಆಶಾಭಾವನೆ ನನಗಿದೆ ಎಂದು ರಿಪೋರ್ಟರ್ ಕರ್ನಾಟಕ ಜತೆ ಮಾತನಾಡಿದ ಅವರು ಹೇಳಿದರು.
ಟಿಕೆಟ್ ಗಾಗಿ ಅರ್ಜಿ ಹಾಕುವ ಸಂಸ್ಕೃತಿ ನಮ್ಮ ಪಕ್ಷದಲ್ಲಿಲ್ಲ. ಪ್ರಾಮಾಣಿಕ, ನಿಷ್ಠಾವಂತ ಸಮಾಜ ಸೇವಕರನ್ನು ಪಕ್ಷ ತಾನಾಗಿಯೇ ಗುರುತಿಸಿ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುತ್ತದೆ. ಪಕ್ಷ ಅಂತಹ ಅವಕಾಶ ಕಲ್ಪಿಸಿದರೆ ಹಿಂತಿರುಗಿ ನೋಡುವ ಪ್ರಶ್ನೆಯೇ ಇಲ್ಲ ಎಂದು ವಿಶ್ವಾಸದಿಂದ ಅವರು ನುಡಿದರು.
ಟಿಕೆಟ್ ಗಾಗಿ ನಾನು ದುಂಬಾಲು ಬೀಳಲಾರೆ. ಬದಲಿಗೆ ಪಕ್ಷವೇ ನನ್ನ ಸೇವೆಯನ್ನು ಗುರುತಿಸುವ ಆಶಾಭಾವನೆ ನನಗಿದೆ. ಹಾಗಾಗಿ ನಾನು ಯಾವತ್ತೂ ತಯಾರಿಯಾಗಿದ್ದೇನೆ ಎಂದರು.
ಉದ್ಯಮಿಯಾಗಿರುವ ಬದ್ರಿನಾಥ್ ಕಾಮತ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಕಟ್ಟಾ ಅನುಯಾಯಿ. ಪ್ರಧಾನಿ ಅವರ ಯಾವುದೇ ಯೋಜನೆಯಲ್ಲಿ ಭವಿಷ್ಯದ ಕನಸಿದೆ ಎಂದು ಹೇಳುತ್ತಾರೆ. ಉದ್ಯಮಿ ಬದ್ರಿನಾಥ್ ಕಾಮತ್ ಅವರು ಕಳೆದ ಬಾರಿ ಮಂಗಳೂರು ದಕ್ಷಿಣ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸುವ ಇರಾದೆ ಹೊಂದಿದ್ದರು. ಆದರೆ ಕೊನೆ ಕ್ಷಣದಲ್ಲಿ ಅವರು ಬಿಜೆಪಿ ಟಿಕೆಟ್ ನಿಂದ ವಂಚಿತರಾದರು. ಈ ಬಾರಿ ಮತ್ತೆ ಸನ್ನದ್ಧ ಸ್ಥಿತಿಯಲ್ಲಿದ್ದಾರೆ. ಪಕ್ಷ ಅವಕಾಶ ನೀಡಲಿದೆ ಎಂಬ ಆಶಾಭಾವನೆ ಹೊಂದಿದ್ದಾರೆ.
ಮುಂಬರುವ ವಿಧಾನಸಭೆ ಚುನಾವಣೆ ಸಂಬಂಧಿದಂತೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಬಿಜೆಪಿಯಲ್ಲಿ ಈಗಾಗಲೇ ಆರಂಭವಾಗಿದೆ. ಮಂಗಳೂರು ಸೇರಿದಂತೆ ಮೂರು ಕಡೆ ವಿಭಾಗೀಯ ಮಟ್ಟದ ಸಭೆ ನಡೆದಿದೆ. ಇನ್ನು ಕ್ಷೇತ್ರವಾರು ಸಮೀಕ್ಷೆ ನಡೆಯಲಿದೆ. ಪ್ರತಿ ತಂಡದಲ್ಲಿ 9 ಮಂದಿ ಧುರೀಣರು ಇರುತ್ತಾರೆ. ಇವರು ಮುಂದಿನ ಅಭ್ಯರ್ಥಿಗಳ ಆಯ್ಕೆ ನಡೆಸಲಿದ್ದಾರೆ. ಇಲ್ಲಿ ಪ್ರಭಾವ ಬಳಕೆ, ಹಣ ಬಲಕ್ಕೆ ಯಾವುದೇ ಅವಕಾಶ ಇರುವುದಿಲ್ಲ.
ಬಿಜೆಪಿಯ ಒಂದು ಮೂಲಗಳ ಪ್ರಕಾರ ಈ ಬಾರಿ ರಾಜ್ಯದಲ್ಲಿ ಎರಡು ಡಜನಿಗೂ ಅಧಿಕ ಹಾಲಿ ಶಾಸಕರು ಟಿಕೆಟ್ ಕಳೆದುಕೊಳ್ಳಲಿದ್ದಾರೆ. ದ.ಕ. ಜಿಲ್ಲೆಯಲ್ಲೇ ಮೂರು ಮಂದಿ ಹಾಲಿ ಶಾಸಕರ ತಲೆ ದಂಡವಾಗುವ ಸಾಧ್ಯತೆಗಳಿವೆ. ಪಕ್ಷ ಈ ಸಲ ಸ್ವಂತ ಬಲದಿಂದ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾತ್ರ ಮಣೆ ಹಾಕಲಿದೆ. ಅದಲ್ಲದೆ ಕಮಿಷನ್ ವ್ಯವಹಾರ, ಸ್ವಜನಪಕ್ಷಪಾತ, ಭ್ರಷ್ಟಾಚಾರದಲ್ಲಿ ತೊಡಗಿ ಸ್ವಪಕ್ಷೀಯರ ಕೆಂಗಣಿಗೆ ಗುರಿಯಾಗಿರುವ ಹಾಲಿ ಶಾಸಕರನ್ನು ದೂರ ಇರಿಸಲು ಸೂಚಿಸಲಾಗಿದೆ ಎನ್ನಲಾಗಿದೆ.
ಬಿಜೆಪಿಯಲ್ಲಿ ಏನು ಬೇಕಾದರೂ ಸಾಧ್ಯವಾಗಲಿದೆ. ಮಂಗಳೂರು ಲೋಕಸಭೆ ಕ್ಷೇತ್ರದ ಹಾಲಿ ಸಂಸದರಾಗಿದ್ದಾಗಲೇ ವಿ. ಧನಂಜಯ ಕುಮಾರ್ ಅವರಿಗೆ ಟಿಕೆಟ್ ನಿರಾಕರಿಸಿ ನಳಿನ್ ಕುಮಾರ್ ಕಟೀಲ್ ಅವರಂತಹ ಸಾಮಾನ್ಯ ವ್ಯಕ್ತಿಗೆ ಟಿಕೆಟ್ ನೀಡಿ ಗೆಲ್ಲಿಸಿದ ಕೀರ್ತಿ ಪಕ್ಷದಾಗಿದೆ. ಹಿಂದಿನ ವಿಟ್ಲ ಕ್ಷೇತ್ರದಲ್ಲಿ ಎ. ರುಕ್ಮಯ ಪೂಜಾರಿ ಅವರಿಗೆ ಟಿಕೆಟ್ ನಿರಾಕರಿಸಿ ಪದ್ಮನಾಭ ಕೊಟ್ಟಾರಿ ಎಂಬ ಸಾಮಾನ್ಯ ಟೈಲರ್ ಗೆ ಟಿಕೆಟ್ ನೀಡಿ ಗೆಲ್ಲಿಸಿದ ಪರಂಪರೆ ಬಿಜೆಪಿಯದ್ದಾಗಿದೆ. ಇದರ ಹಿಂದೆ ಸಂಘ ಶಕ್ತಿ ಪ್ರಬಲವಾಗಿ ಕೆಲಸ ಮಾಡಿದೆ.