ಇತ್ತೀಚಿನ ಸುದ್ದಿ
ಅಥಣಿ: ಅರಣ್ಯ ಇಲಾಖೆಯ ಕಾರ್ಯಾಚರಣೆ; ಸೆರೆಸಿಕ್ಕ ಕತ್ತೆ ಕಿರುಬ; ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
07/11/2022, 10:08
ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.com
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಹೊರವಲಯದಲ್ಲಿ ಇರುವ ಶಿವಯೋಗಿ ನಗರದ, ಕುಮಠಳ್ಳಿ ಫಾರ್ಮಹೌಸ್ ನಲ್ಲಿ ಕತ್ತೆ ಕಿರುಬ ಒಂದು ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಭಯದ ವಾತಾವರಣ ಮೂಡಿಸಿತ್ತು, ಕತ್ತೆ ಕಿರುಬವನ್ನ ದೂರದಿಂದ ನೋಡಿದ ಸಾರ್ವಜನಿಕರು ಚಿರತೆ ಬಂದಿದೆ ಎಂದು ವದಂತಿ ಹಬ್ಬಿಸಿದ್ದು ಅಥಣಿ ಪ್ರಾದೇಶಿಕ ಅರಣ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳೀಯರ ಸಹಕಾರದಿಂದ ಕಾರ್ಯಾಚರಣೆ ನಡೆಸಿ ಬೋನಿಗೆ ಬೀಳಿಸುವಲ್ಲಿ ಯಶಸ್ವಿಯಾದರು.
ಈ ಹಿಂದೆ ಅಥಣಿ ಮತ್ತು ಕಾಗವಾಡ ತಾಲೂಕಿನ ಹಲವು ಗ್ರಾಮಗಳಲ್ಲಿ ಚಿರತೆ ಕಾಣಿಸಿಕೊಂಡ ವದಂತಿ ಹಬ್ಬಿದ್ದು ಸ್ಥಳಕ್ಕೆ ಭೇಟಿ ನೀಡಿ ಹೆಜ್ಜೆ ಗುರುತುಗಳನ್ನು ಪರಿಶೀಲಿಸಿದ್ದ ಅರಣ್ಯ ಇಲಾಖೆಯ ಸಿಬ್ಬಂದಿ ಇದು ಕತ್ತೆ ಕಿರುಬದ ಹೆಜ್ಜೆ ಎಂದು ಹೇಳಿದ್ದರು. ಸದ್ಯ ಅಥಣಿ ಶಾಸಕ ಮಹೇಶ್ ಕುಮಠಳ್ಳಿಯವರ ಫಾರ್ಮಹೌಸ್ ನಲ್ಲಿ ಪತ್ತೆಯಾದ ಕತ್ತೆ ಕಿರುಬವನ್ನು ಸತತವಾಗಿ ಎರಡು ಗಂಟೆ ಯಶಸ್ವಿ ಕಾರ್ಯಾಚರಣೆ ಮಾಡಿ ಹಿಡಿದು ಸಾರ್ವಜನಿಕರ ಆತಂಕ ದೂರ ಮಾಡಿದ್ದಾರೆ.
ಈ ಕುರಿತು ಮಾತನಾಡಿದ ಅರಣ್ಯಾಧಿಕಾರಿ ಪ್ರಶಾಂತ ಗಾಣಿಗೇರ ಅವರು ಕತ್ತೆ ಕಿರುಬು ಕಾಣಿಸಿಕೊಂಡ ಕರೆ ಬಂದ ನಂತರ ಯಶಸ್ವಿಯಾಗಿ ಹಿಡಿದಿದ್ದಾರೆ ಜೊತೆಗೆ ಅಥಣಿ ತಾಲೂಕಿನ ವ್ಯಾಪ್ತಿಯಲ್ಲಿ ಎಲ್ಲಿಯೂ ಚಿರತೆ ಬಂದಿಲ್ಲ ಇದು ಕತ್ತೆ ಕಿರುಬದ ಹೆಜ್ಜೆ ಗುರುತುಗಳಾಗಿದ್ದು ಒಂದು ವೇಳೆ ಕಾಡು ಪ್ರಾಣಿಗಳು ಕಂಡುಬಂದಲ್ಲಿ ಭಯಬೀತರಾಗದೆ ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರುವಂತೆ ತಿಳಿಸಿದರು.