ಇತ್ತೀಚಿನ ಸುದ್ದಿ
ಅರ್ಜುನ ಕಳೇಬರ ಮೈಸೂರಿಗೆ ತರಲು ಆಗ್ರಹ: ಯಸಳೂರಿನಲ್ಲಿ ಅಂತ್ಯಕ್ರಿಯೆಗೆ ಅಡ್ಡಿ; ಪ್ರತಿಭಟನಾಕಾರರ ಮೇಲೆ ಪೊಲೀಸ್ ಲಾಠಿ ಚಾರ್ಜ್
05/12/2023, 20:36
ಪ್ರಜ್ಞಾ ಪ್ರದೀಪ್ ಅರಕಲಗೋಡು ಹಾಸನ
info.reporterkarnataka@gmail.com
ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಸಾವನ್ನಪ್ಪಿದ ಅರ್ಜುನನ ಕಳೇಬರವನ್ನು ಮೈಸೂರಿಗೆ ಕರೆತರುವಂತೆ ಕೆಲ ಸಂಘಟನೆಗಳು ಒತ್ತಾಯಿಸಿದರೂ ಅರಣ್ಯ ಇಲಾಖೆ ಅಧಿಕಾರಿಗಳು ಮೃತಪಟ್ಟ ಸ್ಥಳದಲ್ಲೇ ಅಂತ್ಯಕ್ರಿಯೆ ನೆರವೇರಿಸಲು ಮುಂದಾದಾಗ ಗುಂಪೊಂದು ಪ್ರತಿಭಟನೆ ನಡೆಸಿದ್ದು, ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ.
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಯಸಳೂರು- ಬಾಳೆಕೆರೆ ಅರಣ್ಯದಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಪುಂಡಾನೆ ನಡೆಸಿದ ದಾಳಿಗೆ ಅರ್ಜುನ ಸಾವನ್ನಪ್ಪಿದ್ದ. ಅರ್ಜುನನ ಕಳೇಬರವನ್ನು ಮೈಸೂರಿಗೆ ಕರೆತರುವಂತೆ ಕೆಲ ಸಂಘಟನೆಯ ಪ್ರಮುಖರು ಒತ್ತಾಯಿಸಿದ್ದರು. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಮೃತಪಟ್ಟ ಸ್ಥಳದಲ್ಲೇ ಅಂತ್ಯಕ್ರಿಯೆ ನಡೆಸುವುದಾಗಿ ಹೇಳಿದರು. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಮುಂದಾಗಿ ಅಂತ್ಯ ಸಂಸ್ಕಾರಕ್ಕೆ ಗುಂಡಿ ತೆಗೆಯುತ್ತಿದ್ದ ವೇಳೆ ಕೆಲ ಸಂಘಟನೆಯ ಕಾರ್ಯಕರ್ತರು ಅಡ್ಡಿಪಡಿಸಿದರು. ಪ್ರತಿಭಟನಾಕಾರರ ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಪೊಲೀಸರು ಪ್ರತಿಭಟನಾಕಾರರನ್ನು ಬೆನ್ನಟ್ಟಿರುವುದರಿಂದ ಹಲವರು ಬಿದ್ದು ಗಾಯಗೊಂಡರು.
ಅರ್ಜುನ ಅಂತ್ಯಕ್ರಿಯೆ ವೇಳೆ ಗೌರವಾರ್ಥ ವಾಗಿ ಮೂರು ಸುತ್ತು ಗುಂಡು ಹಾರಿಸಲಾಯಿತು. ಸಕಲ ಸರಕಾರಿ ಗೌರವವನ್ನು ಸಲ್ಲಿಸಲಾಯಿತು. ಅರ್ಜುನ ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ 8 ಬಾರಿ ಅಂಬಾರಿ ಹೊತ್ತಿದ್ದ.