ಇತ್ತೀಚಿನ ಸುದ್ದಿ
Bangalore | ರಾಜ್ಯದಲ್ಲಿ ಕುಡಿಯುವ ನೀರು, ಒಳಚರಂಡಿ ಯೋಜನೆ: ಕೇಂದ್ರಕ್ಕೆ 6,500 ಕೋಟಿ ರೂ.ಗೆ ಬೇಡಿಕೆ
30/10/2025, 19:35
ಬೆಂಗಳೂರು(reporterkarnataka.com): ರಾಜ್ಯದಲ್ಲಿ ಒಳಚರಂಡಿ ಮತ್ತು ನಿರಂತರ ಶುದ್ಧ ಕುಡಿಯುವ ನೀರು ಪೂರೈಕೆ ಯೋಜನೆಗಳಿಗೆ 6,500 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಬೇಕೆಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಗುರುವಾರ ನಡೆದ ದಕ್ಷಿಣ ಭಾರತ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ನಗರಾಭಿವೃದ್ಧಿ ಸಚಿವರ ಪ್ರಾದೇಶಿಕ ಸಭೆಯಲ್ಲಿ ಕೇಂದ್ರ ಇಂಧನ, ವಸತಿ ಹಾಗೂ ನಗರಾಭಿವೃದ್ಧಿ ವ್ಯವಹಾರಗಳ ಸಚಿವ ಮನೋಹರ ಲಾಲ್ ಅವರಿಗೆ ಬೈರತಿ ಸುರೇಶ್ ಅವರು ಮನವಿ ಪತ್ರ ಸಲ್ಲಿಸಿದರು.
ಕೇಂದ್ರ ಸರ್ಕಾರ ಪುರಸ್ಕೃತ ಅಮೃತ್ 2.0 ಅಡಿಯಲ್ಲಿ ಮಂಜೂರಾಗಿರುವ ಎಲ್ಲಾ ಕುಡಿಯುವ ನೀರು ಯೋಜನೆಗಳನ್ನು ಕಾರ್ಯಗತಗೊಳಿಸಲಾಗುತ್ತಿದೆ. ಈ ಮೂಲಕ ರಾಜ್ಯ 4ನೇ ಸ್ಥಾನದಲ್ಲಿದೆ. ಇನ್ನೂ 61 ಪಟ್ಟಣಗಳಲ್ಲಿ ಯೋಜನೆಯನ್ನು ಕಾರ್ಯಗತಗೊಳಿಸಲು ಹೆಚ್ಚುವರಿಯಾಗಿ 2,500 ಕೋಟಿ ರೂಪಾಯಿಗಳ ಅಗತ್ಯವಿದ್ದು, ಇದನ್ನು ಮಂಜೂರು ಮಾಡಬೇಕೆಂದು ಬೈರತಿ ಸುರೇಶ್ ಅವರು ಮನವಿ ಮಾಡಿದರು.
*ಯುಜಿಡಿಗೆ 4,00 ಕೋಟಿಗೆ ಆಗ್ರಹ:*
ರಾಜ್ಯದಲ್ಲಿ ಶೇ.51ರಷ್ಟು ಯುಜಿಡಿ ವ್ಯವಸ್ಥೆ ಕಲ್ಪಿಸಲಾಗಿದೆ. ಇನ್ನುಳಿದ ಭಾಗಗಳಿಗೆ ಯುಜಿಡಿ ಕಲ್ಪಿಸಲು ಮತ್ತು ಇತರ ಕಾಮಗಾರಿಗಳನ್ನು ಕೈಗೊಳ್ಳಲು 4,000 ಕೋಟಿ ರೂಪಾಯಿಗಳ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ನಾಗರಿಕರ ಹಿತದೃಷ್ಟಿಯಿಂದ ಈ ಹಣವನ್ನು ಬಿಡುಗಡೆ ಮಾಡಬೇಕೆಂದು ಕೋರಿದರು.
ಕರ್ನಾಟಕ ರಾಜ್ಯದ ಆರ್ಥಿಕ ಪ್ರಗತಿಗೆ ಹಾಗೂ ಸಂಪೂರ್ಣವಾಗಿ ಜಲಭದ್ರತೆ , ಒಳಚರಂಡಿ ಹಾಗೂ ಸುಸ್ಥಿರ ನಗರಾಭಿವೃದ್ಧಿಗೆ ಪೂರಕವಾಗಿ ಕೇಂದ್ರ ಸರ್ಕಾರದಿಂದ ಅಗತ್ಯ ಆರ್ಥಿಕ ನೆರವನ್ನು ನೀಡಬೇಕೆಂದು ಸುರೇಶ್ ಮನವಿ ಮಾಡಿದರು.
ಸಮಗ್ರ ಟೌನ್ ಶಿಪ್ ಗೆ ಮನವಿ
ಕಲಬುರಗಿ, ಬಳ್ಳಾರಿ, ಮಂಗಳೂರು, ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಮೈಸೂರು, ಕೋಲಾರ ಮತ್ತು ತುಮಕೂರಿನಲ್ಲಿ ಸಮಗ್ರ ಟೌನ್ ಶಿಪ್ ಅನ್ನು ಜಾರಿಗೊಳಿಸಲು ಉದ್ದೇಶಿಸಲಾಗಿದೆ. ಈ ಯೋಜನೆಗಾಗಿ ಕೇಂದ್ರ ಸರ್ಕಾರ ಸೂಕ್ತ ಅನುದಾನವನ್ನು ಮಂಜೂರು ಮಾಡಬೇಕು ಎಂದು ಮನವಿ ಮಾಡಿದ್ದಾರೆ.














