ಇತ್ತೀಚಿನ ಸುದ್ದಿ
ಆಧುನಿಕ ಜಗತ್ತಿನಲ್ಲೂ ಗ್ರಂಥಾಲಯ ಮಹತ್ವ ಕಳೆದುಕೊಂಡಿಲ್ಲ; ಗ್ರಂಥಾಲಯ ನಮ್ಮ ಸಂಪತ್ತು: ವಾಮನ್ ಕುದ್ರೋಳಿ
14/08/2025, 10:05
ಮಂಗಳೂರು(reporterkarnataka.com): ಆಧುನಿಕ ಜಗತ್ತಿನ ಈ ಡಿಜಿಟಲ್ ಯುಗದಲ್ಲೂ, ಗ್ರಂಥಾಲಯ ತನ್ನ ಮಹತ್ವವನ್ನು ಎಲ್ಲೂ ಕಳೆದುಕೊಳ್ಳದೆ ಕಾಲಕ್ಕೆ ತಕ್ಕಂತೆ ಹೊಸತನವನ್ನು ಮೈಗೂಡಿಸಿಕೊಂಡು ತನ್ನ ಅನಿವಾರ್ಯತೆಯನ್ನು ಸದಾ ಜಾರಿಯಲ್ಲಿರಿಸಿಕೊಂಡುದನ್ನು ನಾವು ಇವತ್ತಿಗೂ ಕಾಣುತಿದ್ದೇವೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಸಹಾಯಕ ಗ್ರಂಥಪಾಲಕ ವಾಮನ್ ಕುದ್ರೋಳಿ ಹೇಳಿದರು.
ಅವರು ಇತ್ತೀಚಿಗೆ ಮಂಗಳೂರು ವಿವಿ ಕಾಲೇಜಿನಲ್ಲಿ ಕಾಲೇಜು ಗ್ರಂಥಾಲಯ ಹಾಗೂ ಆಂತರಿಕ ಗುಣಮಟ್ಟ ಖಾತರಿ ಕೋಶದ ಸಹಯೋಗದೊಂದಿಗೆ ಆಯೋಜಿಸಿದ್ದ ಗ್ರಂಥಾಲಯ ಪಿತಾಮಹ ಡಾ. ಎಸ್. ಆರ್. ರಂಗನಾಥ್ ಅವರ 133ನೇ ಸಂಸ್ಮರಣಾ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.



ಜ್ಞಾನದಾಹಿಗಳಿಗೆ, ಜಿಜ್ಞಾಸುಗಳಿಗೆ ಗ್ರಂಥಾಲಯ ಒಂದು ವರವಾಗಿದೆ. ಗ್ರಂಥಾಲಯ ಪಿತಾಮಹ ಡಾ.ಎಸ್.ಆರ್ ರಂಗನಾಥ್ ಅವರು ಗ್ರಂಥಾಲಯದ ಮೇಲ್ಮೆಗೆ ‘ ಕೋಲೋನ್ ಕ್ಲಾಸಿಫಿಕೇಷನ್ ‘ ಮೂಲಕ ಆವಿಷ್ಕಾರ ಭಾಷ್ಯಾಸೂತ್ರವನ್ನು ಸಿದ್ದಪಡಿಸಿ ಜಗತ್ತಿಗೆ ನೀಡಿದ ಕಾರಣವಾಗಿ ಓದುಗರು ಗ್ರಂಥಾಲಯಕ್ಕೆ ತುಂಬಾ ಹತ್ತಿರವಾಗುವಂತಾಯಿತು ಮತ್ತು ತನ್ನ ಅಸ್ತಿತ್ವವನ್ನು ಮತ್ತಷ್ಟು ವೃದ್ಧಿಸಿಕೊಳ್ಳಲು ಕಾರಣವಾಯಿತು. ಹಾಗೆ, ವಿದ್ಯಾರ್ಥಿಗಳು ಹೆಚ್ಚು ಹೆಚ್ಚಾಗಿ ಗ್ರಂಥಾಲಯವನ್ನು ಬಳಸಿಕೊಳ್ಳಬೇಕು ಎಂದು ಅವರು ನುಡಿದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಗಣಪತಿ ಗೌಡ ಎಸ್. ಅವರು ವಹಿಸಿ, ಗ್ರಂಥಾಲಯ ಸಂಸ್ಥೆಯೊಂದಕ್ಕೆ ಮೆದುಳು ಇದ್ದಂತೆ. ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಗ್ರಂಥಾಲಯದ ಪಾತ್ರ ಪ್ರಮುಖವಾಗಿದೆಯೆಂದರು.
ಆಂತರಿಕ ಗುಣಮಟ್ಟ ಖಾತರಿ ಕೋಶದ ಸಂಯೋಜಕ ಡಾ. ಸಿದ್ದರಾಜು ಉಪಸ್ಥಿತರಿದ್ದರು.
ಗ್ರಂಥಪಾಲಕಿ. ಡಾ. ವನಜಾ ಸ್ವಾಗತಿಸಿದರು. ವಿದ್ಯಾರ್ಥಿ ಸಂದೀಪ್ ಸಮಯಿ ಕಾರ್ಯಕ್ರಮ ನಿರೂಪಿಸಿದರು. ಡಾ. ಸಿದ್ದರಾಜು ವಂದಿಸಿದರು.














