ಇತ್ತೀಚಿನ ಸುದ್ದಿ
ಪಾಪದ ಪ್ರಾಯಶ್ಚಿತದಿಂದ ಉತ್ತಮ ನಡತೆ ರೂಡಿಸಿಕೊಳ್ಳಿ: ಉರ್ವ ಪೊಂಪೈ ಮಾತೆಯ ಪುಣ್ಯಕ್ಷೇತ್ರದಲ್ಲಿ ಮಂಗಳೂರು ಬಿಷಪ್
10/12/2024, 16:01
ಮಂಗಳೂರು(reporterkarnataka.com):ಮೇರಿ ಮಾತೆ ಪ್ರೀತಿಯಿಂದ ಬರಮಾಡಿಕೊಳ್ಳುವ ಜತೆಗೆ ತನ್ನ ದಯೆಯನ್ನು ಎಲ್ಲರಿಗೂ ನೀಡುತ್ತಾ ಪೋಷಿಸುತ್ತಾರೆ. ಇದಕ್ಕಾಗಿ ನಾವು ಪಾಪದ ಪ್ರಾಯಶ್ಚಿತ ಮಾಡುವ ಮೂಲಕ ಉತ್ತಮ ನಡತೆಯನ್ನು ರೂಡಿಸಿಕೊಳ್ಳುವ ಅಗತ್ಯವಿದೆ ಎಂದು ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಬಿಪಷ್ ಡಾ.ಪೀಟರ್ ಪಾವ್ಲ್ ಸಲ್ಡಾನ ಹೇಳಿದರು.


ಅವರು ಭಾನುವಾರ ನಗರದ ಲೇಡಿಹಿಲ್‍ನ ಉರ್ವ ಪೊಂಪೈ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಹಬ್ಬದ ಸಂಭ್ರಮದ ಕೃತಜ್ಞತಾ ಪೂಜೆಯಲ್ಲಿ ಪ್ರವಚನ ನೀಡುತ್ತಾ, ದೇವರು ಎಂದಿಗೂ ಬಲಪ್ರಯೋಗಕ್ಕೆ ಇಳಿಯುವುದಿಲ್ಲ. ಭಕ್ತರು ದೇವರಲ್ಲಿ ಪ್ರಾರ್ಥನೆ ಮೂಲಕ ವಿನಂತಿಸಿಕೊಂಡಾಗ ಮಾತ್ರ ಅವರು ತಮ್ಮ ದಯೆಯನ್ನು ತೋರಿಸುತ್ತಾರೆ. ಮನುಷ್ಯರು ಸದಾ ಕಾಲ ಪಾಪದ ಕಡೆಗೆ ವಾಲುತ್ತಾರೆ ಆದರೆ ದೇವರ ಆಧಾರ ಇದ್ದಾಗ ಮಾತ್ರ ಈ ಪಾಪದ ಕೂಪದಿಂದ ಹೊರಬಂದು ಉತ್ತಮ ಸನ್ನಡತೆಯನ್ನು ರೂಡಿಸಿಕೊಳ್ಳಲು ಸಾಧ್ಯವಿದೆ ಎಂದರು.
ಇಟಲಿಯ ಪೊಂಪೈ ನಗರದಲ್ಲಿ ಪೊಂಪೈ ಮಾತೆಯ ಭಕ್ತಿ ಪ್ರಸಾರ ಮಾಡಲು ಬಾರ್ತಾಲೊ ಲೊಂಗೋ ಕಾರಣಕರ್ತನಾದ. ಇದೇ ರೀತಿಯಲ್ಲಿ ನಿರಂತರ ದೇವರ ಪ್ರಾರ್ಥನೆಯ ಮೂಲಕ ಮನಸ್ಸಿನಲ್ಲಿರುವ ಕಂದಕಗಳನ್ನು ನಿವಾರಿಸಿಕೊಂಡು ನಾವು ಉತ್ತಮ ಜೀವನವನ್ನು ನಡೆಸುವ ಮೂಲಕ ಲ್ಲರಿಗೂ ಒಳಿತನ್ನು ಮಾಡುವಂತಾಗರಬೇಕು ಎಂದರು.
ವಿಶೇಷ ಅರಾಧನಾ ವಿಧಿಯನ್ನು ಮಂಗಳ ಜ್ಯೋತಿ ಸಂಸ್ಥೆಯ ನಿರ್ದೇಶಕ ಫಾ. ವಿಜಯ್ ಮಚಾದೋ ನಡೆಸಿಕೊಟ್ಟರು. ಈ ಸಂದರ್ಭ ಉರ್ವ ಚರ್ಚಿನ ಪ್ರಧಾನ ಧರ್ಮಗುರು ಫಾ. ಬೆಂಜಮಿನ್ ಪಿಂಟೋ, ಅಶೋಕನಗರ ಸಂತ ಡಾಮಿನಿಕ್ ಚರ್ಚಿನ ಪ್ರಧಾನ ಧರ್ಮಗುರು ಫಾ.ಡೇನಿಯಲ್ ಸಂಪತ್ ವೇಗಸ್, ಉರ್ವ ಚರ್ಚಿನ ಫಾ. ಹೆನ್ರಿ ಸಿಕ್ವೇರಾ, ಸಹಾಯಕ ಧರ್ಮ ಗುರು ಫಾ. ಲ್ಯಾನ್ಸನ್ ಪಿಂಟೋ ಸೇರಿದಂತೆ ಸುತ್ತಮುತ್ತಲಿರುವ ಚರ್ಚ್‍ಗಳ ಸರಿಸುಮಾರು 60ಕ್ಕೂ ಅಧಿಕ ಧರ್ಮಗುರುಗಳು ಕೃತಜ್ಞತಾ ಪೂಜೆಯಲ್ಲಿ ಭಾಗವಹಿಸಿದ್ದರು. ಸಾವಿರಕ್ಕೂ ಅಧಿಕ ಮಂದಿ ಭಕ್ತರು ಈ ಸಂಭ್ರಮದ ಕೃತಜ್ಞತಾ ಪೂಜೆಯಲ್ಲಿ ಭಾಗವಹಿಸಿ ಧನ್ಯರಾದರು. ಪೂಜೆಯ ಬಳಿಕ ಪರಮ ಪ್ರಸಾದದ ಮೆರವಣಿಗೆ ಉರ್ವ ಚರ್ಚಿನ ಮೂಲಕ ಉರ್ವ ಮಾರ್ಕೆಟ್, ಗಾಂಧಿನಗರ, ಮಣ್ಣಗುಡ್ಡೆ, ಲೇಡಿಹಿಲ್ ಸರ್ಕಲ್ ಮೂಲಕ ಉರ್ವ ಚರ್ಚ್‍ಗೆ ಮತ್ತೆ ಬರಲಾಯಿತು. ಈ ಬಳಿಕ ಸಾವಿರಾರು ಮಂದಿ ಭಕ್ತರು ಪರಮ ಪ್ರಸಾದದ ಆಶೀರ್ವಾದವನ್ನು ಪಡೆದುಕೊಂಡರು.














