ಇತ್ತೀಚಿನ ಸುದ್ದಿ
ತುಳುನಾಡಿನ ದೈವ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ದ.ಕ. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
25/06/2024, 12:09
ಮಂಗಳೂರು(reporterkarnataka.com):ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸದಸ್ಯರಾಗಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಸೋಮವಾರ ಪ್ರಮಾಣ ವಚನ ಸ್ವೀಕಾರ ಮಾಡಿದರು.

ಲೋಕಸಭೆಯಲ್ಲಿ ಅವರು ಕನ್ನಡದಲ್ಲಿ ಮಾಡಿದ ಪ್ರಮಾಣವಚನದಲ್ಲಿ ತುಳುನಾಡಿನ ದೈವ ದೇವರನ್ನು ಸ್ಮರಿಸಿದ್ದು ವಿಶೇಷವಾಗಿತ್ತು.
“ನಾನು ಕ್ಯಾಪ್ಟನ್ ಬ್ರಿಜೇಶ್ ಚೌಟ ಲೋಕಸಭೆಯ ಸದಸ್ಯನಾಗಿ ಚುನಾಯಿತನಾದವನಾಗಿ ಕಾನೂನಿನ ಮೂಲಕ ಸ್ಥಾಪಿತವಾದ ಭಾರತದ ಸಂವಿಧಾನದ ವಿಷಯದಲ್ಲಿ ನಿಜವಾದ ಶ್ರದ್ದೆ ಮತ್ತು ನಿಷ್ಠೆಯನ್ನು ಹೊಂದಿರುತ್ತೇನೆಂದೂ, ಭಾರತದ ಸಾರ್ವಭೌಮತ್ವವನ್ನು ಮತ್ತು ಅಖಂಡತೆಯನ್ನು ಎತ್ತಿಹಿಡಿಯುತ್ತೇನೆಂದೂ ಮತ್ತು ನಾನು ಈಗ ವಹಿಸಿಕೊಳ್ಳಲಿರುವ ಕರ್ತವ್ಯವನ್ನು ಶ್ರದ್ಧಾಪೂರ್ವಕವಾಗಿ ನಿರ್ವಹಿಸುತ್ತೇನೆಂದೂ, ದೈವ ದೇವರ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ ಶ್ರದ್ಧಾಪೂರ್ವಕವಾಗಿ ಪ್ರತಿಜ್ಞೆ ಮಾಡುತ್ತೇನೆ” ಎಂದು ಹೇಳಿ ನಂತರ “ಮಾತೆರೆಗ್ಲಾ ಸೊಲ್ಮೆಲು” ಎಂದು ಸಂಸತ್ತನ್ನು ಅಭಿನಂದಿಸಿದರು.
ತುಳುನಾಡಿಗೆ, ತುಳುಭಾಷೆಗೆ ಅವರು ಸಲ್ಲಿಸಿದ ಈ ಗೌರವ ಸಾಮಾಜಿಕ ಜಾಲತಾಣದಲ್ಲಿಯೂ ಸುದ್ದಿ ಮಾಡಿದೆ ಹಾಗೂ ಮೆಚ್ಚುಗೆ ಪಡೆದಿದೆ.














