11:28 PM Thursday6 - November 2025
ಬ್ರೇಕಿಂಗ್ ನ್ಯೂಸ್
ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ‘ಬಿಸಿತುಪ್ಪ’ವಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ Bangalore | ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದಿಢೀರ್… ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಬೆಳೆಗಾರರ ಆಗ್ರಹದಂತೆ ಕಬ್ಬಿಗೆ ದರ ನಿಗದಿಗೊಳಿಸಲಿ, ಪ್ರತಿ ಟನ್… ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್… 40 ಸಾವಿರ ಲಂಚ ಸ್ವೀಕಾರ: ಮೆಸ್ಕಾಂ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತ…

ಇತ್ತೀಚಿನ ಸುದ್ದಿ

ಸಕಾಲದಲ್ಲಿ ಪ್ರಾಥಮಿಕ ಚಿಕಿತ್ಸೆ ದೊರಕದೆ ರೋಗಿ ಸಾವು: ಸಾರ್ವಜನಿಕರಿಂದ ಭಾರಿ ಪ್ರತಿಭಟನೆ

04/02/2022, 08:51

ಮಡಿಕೇರಿ(reporterkarnataka.com):

ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಾತ್ರಿ ವೇಳೆ ವೈದ್ಯರ ಅಲಭ್ಯತೆಯಿಂದ ರೋಗಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿ ಸಾರ್ವಜನಿಕರಿಗೆ ಪ್ರತಿಭಟನೆ ನಡೆಸಿದರು.

ಸಾಂಕೇತಿಕ ಪ್ರತಿಭಟನೆ ನಡೆಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಗ್ರಾಮಸ್ಥರು, ಮುಂದಿನ 15 ದಿನಗಳಲ್ಲಿ ಆಸ್ಪತ್ರೆಯ ಅವ್ಯವಸ್ಥೆಯನ್ನು ಸರಿಪಡಿಸದಿದ್ದಲ್ಲಿ ರಾಷ್ಟ್ರಿಯ ಹೆದ್ದಾರಿ ತಡೆ ನಡೆಸುವ ಎಚ್ಚರಿಕೆ ನೀಡಿದರು.

ವಿಷಯದ ಗಂಭೀರತೆ ಅರಿತು ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೆಂಕಟೇಶ್ ಹಾಗೂ ತಾಲೂಕು ಆರೋಗ್ಯಾಧಿಕಾರಿ ಶ್ರೀನಿವಾಸ ಅವರು ಸಾರ್ವಜನಿಕರ‌ ಅಹವಾಲು‌‌ ಆಲಿಸಿದರು.

ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರ ಹೋಬಳಿ ಕೇಂದ್ರದ ಸರಕಾರಿ ಆಸ್ಪತ್ರೆಯಾಗಿದೆ. ಪ್ರತಿದಿನ ನೂರಾರು ಹೊರ ರೋಗಿಗಳು, ಹೆರಿಗೆಗೆ ಸಂಬಂಧಿಸಿದಂತೆ ಗರ್ಭೀಣಿಯರು ಬರುತ್ತಾರೆ. ಪಟ್ಟಣದ ನಡುವೆ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದ್ದು, ಅವಘಡ ಸಂಭವಿಸುತ್ತಿರುತ್ತದೆ. ಆದರೆ ರಾತ್ರಿ ಪಾಳಿಯಲ್ಲಿ ವೈದ್ಯರು ಕಾರ್ಯನಿರ್ವಹಿಸದೆ ಮತ್ತು ಪ್ರಥಮ ಚಿಕಿತ್ಸೆ ಸಿಗದೆ ಈಗಾಗಲೇ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಗ್ರಾ.ಪಂ. ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ ಗ್ರಾ.ಪಂ.ಸದಸ್ಯರುಗಳಾದ ಶಬ್ಬೀರ್, ಆಲಿಕುಟ್ಟಿ, ನಾಗರತ್ನ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಏತನ್ಮಧ್ಯೆ ಗ್ರಾಮಸ್ಥರಾದ ಲತೀಫ್, ಇಬ್ರಾಹಿಂ, ಉಸ್ಮಾನ್ ಅವರುಗಳು, ಸರಕಾರ ಬಡವರಿಗೆ ಸರಕಾರಿ ಆಸ್ಪತ್ರೆ ತೆರೆದಿದೆ. ವೈದ್ಯರುಗಳನ್ನು ದೇವರೆಂದು ನಂಬುತ್ತೇವೆ. ವೈದ್ಯರುಗಳೇ ನಮಗೆ ಸಿಗದಿದ್ದರೆ ಎಲ್ಲಿಗೆ ಹೋಗುವುದು ಎಂದು ಡಿಹೆಚ್‍ಓ ಅವರಲ್ಲಿ ಪ್ರಶ್ನಿಸಿದರು.

ಡಿಎಚ್‍ಓ ಡಾ. ವೆಂಕಟೇಶ್ ಅವರು ಜನಪ್ರತಿನಿಧಿಗಳ ಮತ್ತು ಗ್ರಾಮಸ್ಥರ ಎಲ್ಲಾ ಸಮಸ್ಯೆಗಳನ್ನು ಆಲಿಸಿದ ನಂತರ, ಈ ಆಸ್ಪತ್ರೆಯ ಸಮಸ್ಯೆಗಳ ಬಗ್ಗೆ ಲಿಖಿತ ರೂಪದಲ್ಲಿ ಮನವಿ ನೀಡಿ, ಅದನ್ನು ಪರಿಶೀಲಿಸಿ ಹಿರಿಯ ಅಧಿಕಾರಿಗಳಿಗೆ ಕಳುಹಿಸಿ ಕೊಡಲಾಗುವುದು ಎಂದಾಗ ತರಾತುರಿಯಲ್ಲಿ ಗ್ರಾ.ಪಂ.ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು ಮನವಿ ಸಿದ್ಧಪಡಿಸಲು ಮುಂದಾದರು.

ರಾತ್ರಿ ಪಾಳಿಯಲ್ಲಿ ವೈದ್ಯರು ಬೇಕು. ಉಸಿರಾಟದ ತೊಂದರೆಗೆ ಬಂದವರಿಗೆ ಆಕ್ಸಿಜನ್ ವ್ಯವಸ್ಥೆಯಾಗಬೇಕು ಅಂಬ್ಯುಲೆನ್ಸ್ ಸದಾ ಸಿಗಬೇಕು. ಮರಣೋತ್ತರ ಪರೀಕ್ಷೆ ಕೊಠಡಿ ದುರಸ್ತಿಪಡಿಸಬೇಕು. ಶುಶ್ರೂಷಕಿ, ‘ಡಿ’ಗ್ರೂಪ್ ನೌಕರರನ್ನು ನೇಮಿಸಬೇಕು ಎಂದು ಗ್ರಾ.ಪಂ.ಅಧ್ಯಕ್ಷರು ಪಂಚಾಯಿತಿ ವತಿಯಿಂದ ಡಿಹೆಚ್‍ಓಗೆ ಮನವಿ ನೀಡಿದರು.

ಸರಕಾರಿ ಕೆಲಸದಲ್ಲಿ ಕೆಲ ಮಾನದಂಡಗಳಿವೆ ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಆಡಳಿತಾಧಿಕಾರಿ ವೈದ್ಯರು ರಜೆ ಹಾಕದೆ ತೆರಳಿದ್ದಾರೆ. ಇದರಿಂದ ಇಲ್ಲಿ ಗೊಂದಲ ಸೃಷ್ಟಿಯಾಗಿದೆ. ಈಗ ತಾತ್ಕಾಲಿಕವಾಗಿ 3 ವೈದ್ಯರನ್ನು ನೇಮಿಸಿದ್ದೇವೆ. ಸುಂಟಿಕೊಪ್ಪ ಆರೋಗ್ಯ ಕೇಂದ್ರದ ಎಲ್ಲಾ ಸಮಸ್ಯೆಗಳನ್ನು ಪರಿಶೀಲಿಸಿ ಮೇಲಧಿಕಾರಿಗಳಿಗೆ ವರದಿ ನೀಡಲಾಗುವುದು. ಇಲ್ಲಿ ಕರ್ತವ್ಯದಲ್ಲಿದ್ದ ವೈದ್ಯರು ಮತ್ತೆ ಕರ್ತವ್ಯ ನಿರ್ವಹಿಸಲು ಬರಬಹುದು. ಏಕಾಏಕಿ ಸರಕಾರಿ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಲಾಗುವುದಿಲ್ಲ ಎಂದು ಡಿಎಚ್‍ಓ ಡಾ.ವೆಂಕಟೇಶ್ ಹೇಳಿದರು.

ನಮ್ಮ ಸಮಸ್ಯೆ 15 ದಿನಗಳಲ್ಲಿ ಬಗೆಹರಿಯದಿದ್ದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುವುದಾಗಿ ಗ್ರಾ.ಪಂ. ಅಧ್ಯಕ್ಷೆ ಶಿವಮ್ಮ, ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ, ಸದಸ್ಯರಾದ ಆಲಿಕುಟ್ಟಿ, ಶಬ್ಬೀರ್, ರಫೀಕ್‍ಖಾನ್, ರೇಷ್ಮ, ನಾಗರತ್ನ, ಹಸೀನಾ ಹಾಗೂ ಎಸ್‍ಡಿಪಿಐ ಕಾರ್ಯಕರ್ತರಾದ ಲತೀಫ್, ಗ್ರಾ.ಪಂ. ಮಾಜಿ ಸದಸ್ಯ ಉಸ್ಮಾನ್ ಮತ್ತು ಗ್ರಾಮಸ್ಥರು ಎಚ್ಚರಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು