ಇತ್ತೀಚಿನ ಸುದ್ದಿ
ಏಪ್ರಿಲ್ 26, 27: ಮಡಿಕೇರಿಯ ಮ್ಯಾನ್ಸ್ ಕಾಂಪೌಂಡು ಮೈದಾನದಲ್ಲಿ ಕುಲಾಲ ಸಮ್ಮಿಲನ 2025 ಉದ್ಘಾಟನೆ
21/04/2025, 15:46

ಮಡಿಕೇರಿ(reporterkarnataka.com): ಕೊಡಗು ಜಿಲ್ಲಾ ಕುಲಾಲ(ಕುಂಬಾರ)ರ ಸಂಘದ ಆಶ್ರಯದಲ್ಲಿ ಕೊಡಗು ಜಿಲ್ಲಾ ಕುಲಾಲ ಕುಂಬಾರ ಬಾಂಧವರ ಕ್ರೀಡೋತ್ಸವದ ಪ್ರಯುಕ್ತ ಸಮ್ಮಿಲನ 2025 ಏಪ್ರಿಲ್ 26 ಮತ್ತು 27ರಂದು ನಡೆಯಲಿದೆ.
ಏಪ್ರಿಲ್ 26ರಂದು ಬೆಳಗ್ಗೆ 9 ಗಂಟೆಗೆ ಮಡಿಕೇರಿಯ ಮ್ಯಾನ್ಸ್ ಕಾಂಪೌಂಡ್‌ನ ಕೆಳಗಿನ ಮೈದಾನದಲ್ಲಿ ನಡೆಯುವ ಈ ಕ್ರೀಡೋತ್ಸವವನ್ನು ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್ ಉದ್ಘಾಟಿಸಲಿದ್ದಾರೆ.
ನಂತರ ಕುಲಾಲ ಬಾಂಧವರಿಗೆ ಕ್ರಿಕೆಟ್, ಹಗ್ಗಜಗ್ಗಾಟ, ಭಾರದ ಗುಂಡು ಎಸೆತ, ಗೋಣಿ ಚೀಲದ ಓಟ, ಮೂರು ಕಾಲಿನ ಓಟ, 100 ಮೀಟರ್ ಓಟ, 200 ಮೀಟರ್ ಓಟ, ವೇಗದ ನಡಿಗೆ, ಬಾಲ್ ಪಾಸಿಂಗ್ ಪುರಷರಿಗಾಗಿ ನಡೆಯಲಿದೆ. ಅಲ್ಲದೆ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ಸಂಗೀತ ಕುರ್ಚಿ, ಹಗ್ಗ ಜಗ್ಗಾಟ, ಬಾಂಬ್ ಇನ್ ದ ಸಿಟಿ, ನಿಂಬೆ ಚಮಚ,, ಸೂಜಿಗೆ ದಾರ, ಭಾರದ ಗುಂಡು ಎಸೆತ, ಗೋಣಿಚೀಲದ ಓಟ, ಬಕೆಟಿಗೆ ಚೆಂಡು ಹಾಕುವುದು, ಮೂರು ಕಾಲಿನ ಓಟ, 100 ಮೀಟರ್ ಓಟ, 200 ಮೀಟರ್ ಓಟ, ವಾಟರ್ ಪಾಸಿಂಗ್, ವೇಗದ ನಡಿಗೆ ಹಾಗೂ ಮಕ್ಕಳಿಗಾಗಿ 50 ಮೀಟರ್ ಓಟ, 100 ಮೀಟರ್ ಓಟ, ಕಾಳು ಹೆಕ್ಕುವುದು, ಮೆಮೊರಿ ಗೇಮ್, ಕಪ್ಪೆ ಜಿಗಿತ, ಚಕ್ಕುಲಿ ತಿನ್ನುವ ಸ್ಪರ್ಧೆ, ಸೂಜಿಗೆ ದಾರ ಸೇರಿದಂತೆ ಹಲವು ಆಟೋಟ ಸ್ಪರ್ಧೆಗಳು ನಡೆಯಲಿದೆ.
ಏಪ್ರಿಲ್ 27ರಂದು ಸಂಜೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ಕುಲಾಲ(ಕುಂಬಾರ)ರ ಸಂಘದ ಅಧ್ಯಕ್ಷರಾದ ಕೆ.ಕುಶಾಲಪ್ಪ ಮೂಲ್ಯ ವಹಿಸಲಿದ್ದಾರೆ. ಕೊಡಗು ಜಿಲ್ಲಾ ಕುಲಾಲ(ಕುಂಬಾರ)ರ ಸಂಘದ ಸ್ಥಾಪಕ ಅಧ್ಯಕ್ಷರಾದ ಮುತ್ತಮ್ಮ ಕೋಟಿ, ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ, ಮಡಿಕೇರಿ ಶಾಸಕ ಮಂತರ್‌ಗೌಡ, ಕೊಡಗು ಜಿಲ್ಲಾ ವಿಧಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ, ಮಾಜಿ ಶಾಸಕರಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚುರಂಜನ್, ಚಲನಚಿತ್ರ ನಟರಾದ ಭುವನ್ ಪೊನ್ನಣ್ಣ, ನಟಿ ಹರ್ಷಿಕಾ ಪೂಣಚ್ಚ, ಕೊಡಗು ಜಿಲ್ಲಾ ಗ್ರಾಹಕರ ನ್ಯಾಯಾಲಯದ ನ್ಯಾಯಾಧೀಶರಾದ ರೇಣುಕಾಂಬಾ, ಅಖಿಲ ಭಾರತೀಯ ಗ್ರಾಹಕರ ಕಲ್ಯಾಣ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಎಂ.ಪಿ.ಹರ್ಷ, ದಾವಣಗೆರೆ ಸರ್ವಜ್ಞ ಸಂಶೋಧನಾ ಪೀಠದ ಅಧ್ಯಕ್ಷ ಡಾ.ಮಂಜಪ್ಪ ಶರಣರು, ಬೆಂಗಳೂರಿನ ಕುಲಾಲ ಸಮಾಜದ ಉಪಾಧ್ಯಕ್ಷ ಕೆ.ಎಂ.ಚಿನ್ನಪ್ಪ, ಕೊಡಗು ಜಿಲ್ಲಾ ಕುಲಾಲ(ಕುಂಬಾರ)ರ ಸಂಘದ ಮಾಜಿ ಅಧ್ಯಕ್ಷ ಎಂ.ಡಿ.ನಾಣಯ್ಯ ಹಾಗೂ ಕೊಡಗು ಜಿಲ್ಲಾ ಕುಲಾಲ(ಕುಂಬಾರ)ರ ಸಂಘದ ಉಪಾಧ್ಯಕ್ಷರಾದ ದಾಮೋದರ ಕೆ.ಕೆ. ಅವರು ಗೌರವ್ಯ ಉಪಸ್ಥಿತಿಯಲ್ಲಿ ಭಾಗವಹಿಸಲಿದ್ದಾರೆ.