ಇತ್ತೀಚಿನ ಸುದ್ದಿ
ಅಪ್ಪ ಅಂದ್ರೆ ಆಕಾಶ, ಅಪ್ಪ ಅಂದ್ರೆ ಅಪರಂಜಿ.. ಅಪ್ಪಾ ಯು ಆರ್ ಗ್ರೇಟ್….
20/06/2021, 22:57
“ಅಪ್ಪನೆಂಬ ಅದ್ಭುತ” ಅಪ್ಪನ ಬಗ್ಗೆ ಒಂದಿಷ್ಟು.….
ಅಮ್ಮನ ಕಂಬನಿ ಕಂಡಷ್ಟು ನಮಗೆ, ಅಪ್ಪನ ಬೆವರಹನಿ ಕಾಣುವುದೇ ಇಲ್ಲ..ಅಪ್ಪನೆಂದರೆ ನಮ್ಮ ಮನೆಯ ಕಾಮಧೇನು ಬೇಡಿದ್ದೆಲ್ಲ ನೀಡಲೇ ಬೇಕಾದ ಕಲ್ಪವೃಕ್ಷ ಅಪ್ಪ ಅತ್ತಿದ್ದು..ಕಂಡವರು ಕಡಿಮೆ ಅಪ್ಪ ನೋವುಗಳಿಲ್ಲದ ಸಮಚಿತ್ತ ಸರದಾರ ಹಬ್ಬ ಸಂತಸಗಳಲಿ ರೇಷ್ಮೆಸೀರೆ ಹೊಸಬಟ್ಟೆ ತೊಡಿಸಿ ಸಂಭ್ರಮಿಸುವ ಅಪ್ಪನುಡುಗೆ ಗಮನಿಸಿದವರಾರು?
ಧರೆಯ ನಿತ್ಯ ಪೊರೆವ ಅಂಬರದಂತೆ ತಂದೆ ಸತಿಸುತರ ಹಗಲಿರುಳು ಕಾಯ್ವ ವಾತ್ಸಲ್ಯಧಾರೆ ಅಮ್ಮನ ಮಡಿಲಿಂದ ಕೈಹಿಡಿದು ನಮ್ಮನ್ನೆಲ್ಲ ಹೆಗಲಿಗೇರಿಸಿ, ಲೋಕ ತೋರಿಸಿದ ಮಾರ್ಗದರ್ಶಕ ನೋವು-ಬೇವು ನಿರಾಸೆ ಸಂಸಾರದೊತ್ತಡಗಳ..ಹಾಲಾಹಲವನೆಲ್ಲ ನುಂಗಿ ನಗುವ ನೀಲಕಂಠ ಅಮ್ಮನೆಂದರೆ ಮಮತೆ ಅಪ್ಪನೆಂದರೆ ಭದ್ರತೆ ಸದಾ ಮಡದಿ-ಮಕ್ಕಳ ಭವಿಷ್ಯಕಾಗಿ ಬದುಕನೆ ಮುಡುಪಿಟ್ಟು ಬೆಳಗುವ ಕರ್ಪೂರದ ಹಣತೆ
ಅಪ್ಪನ ಕಣ್ಣಲ್ಲಿ ಯಾವತ್ತೂ ನೀರಿಲ್ಲ ಅಪ್ಪ ನೋವು ನುಂಗಿ ಇಂಗಿದ ಬಾವಿ ನಾವು ಅಳುವಾಗಲೆಲ್ಲಾ ಅಪ್ಪ ಸಂತೈಸುತ್ತಿದ್ದ ಅಪ್ಪ ಅಳುವುದಿಲ್ಲ ಸಂತೈಸಲು ಅಪ್ಪನಿಗೆ ಅಪ್ಪನಿಲ್ಲ .ಅಪ್ಪ ಒಬ್ಬನೇ ನಕ್ಕಿಲ್ಲ ನಗುವಾಗ ನಗಿಸುತ್ತಿದ್ದ ನೋವು ಹಂಚಲಿಲ್ಲ ಮರೆಯಲ್ಲೇ ನುಂಗಿದ್ದ ಅಮ್ಮನ ಕಣ್ಣೀರಿಗೆ ಅಪ್ಪ ಕರಗುವ ಮೌನಿಯಾಗಿ…ಗೋಡೆ ನೋಡುತ್ತಾ ಸೋತು ಒರಗುವ ಅಪ್ಪನ ಮಾತಿಗೆ ಮನೆ ತುಂಬಾ ಮೌನ, ಅಪ್ಪನ ಮೌನಕ್ಕೆ ಮನೆಯೇ ಸ್ಮಶಾನ.
ಅಪ್ಪನ ಸಾಧನೆಗೆ ಅಮ್ಮನಿಗೂ ಸನ್ಮಾನ ಅಪ್ಪ ಸೋತಾಗ ಅಮ್ಮನಿಗೂ..ಅನುಮಾನ ಅಪ್ಪ ಗಂಧದ ಕೊರಡು…ಮನೆ ತುಂಬಾ ಪರಿಮಳ ತೇದು ತೇದು ಸವೆದಿದ್ದು ಯಾರಿಗೂ ತಿಳಿಯಲಿಲ್ಲ
ಅಪ್ಪನ ಏಟು, ನಮ್ಮ ತಪ್ಪಿಗೆ. ನೋವು ಮರೆಸಿದ್ದು ಮದ್ದಲ್ಲ….ಅಪ್ಪನ ಅಪ್ಪುಗೆ.
“ಅಪ್ಪ” ಈ ಶಬ್ಧದಲ್ಲೇ ಅದೆಂಥಾ ಗತ್ತು ಗಾಂಭೀರ್ಯ… .ಯಾವುದೇ ಪ್ರತಿ ಫಲಾಪೇಕ್ಷೆಯಿಲ್ಲದೆ ತನ್ನ ಜೀವನವನ್ನೇ ತನ್ನ ಮಕ್ಕಳಿಗೆ ಮುಡುಪಾಗಿಟ್ಟ ವ್ಯಕ್ತಿ. ತಂದೆಯಾದವನು ತಾನು ವಿದ್ಯೆ ಕಲಿಯದಿದ್ದರು, ತನ್ನ ಮಕ್ಕಳು ವಿದ್ಯೆ ಕಲಿತು ಸಮಾಜದಲ್ಲಿ ಉತ್ತಮ ಸ್ಥಾನಮಾನ ಹೊಂದಬೇಕೆಂಬುದು ಪ್ರತಿಯೊಂದು ತಂದೆಯ ಕನಸಾಗಿದೆ. ತನಗೆ ಅಕ್ಷರ ಜ್ಞಾನವಿಲ್ಲದಿದ್ದರೂ ತನ್ನ ಮಕ್ಕಳಿಗೆ ವಿದ್ಯೆ ಕಲಿಸಿ ತೃಪ್ತಿ ಪಡುತ್ತಾನೆ. ತನ್ನ ಕಷ್ಟ ತನ್ನ ಮಕ್ಕಳಿಗೆ ಬರಬಾರದೆಂಬ ನಿಟ್ಟಿನಲ್ಲಿ ಅವರಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸುತ್ತಾನೆ. ಪ್ರತಿಯೊಬ್ಬ ವ್ಯಕ್ತಿಯ ಬದುಕಿನಲ್ಲೂ ಮಹೋನ್ನತ ಸ್ಥಾನ ನಿರ್ವಹಿಸುವ, ಪ್ರೀತಿಯನ್ನು ಅವ್ಯಕ್ತವಾಗಿಯೇ ಉಳಿಸಿಕೊಳ್ಳುವ ಅಪ್ಪ ಎಂಬ ಪ್ರಶ್ನಾತೀತ ವ್ಯಕ್ತಿತ್ವದ ಬಗ್ಗೆ ಎಷ್ಟು ಬರೆದರೂ ಮುಗಿಯದು. ಎಲ್ಲವನ್ನು ಹೇಳಿದ ಮೇಲೂ ಏನೋ ಉಳಿದು ಬಿಡುವಂತಹ ವ್ಯಕ್ತಿತ್ವ ಅಪ್ಪನದು.
ಅಪ್ಪನ ಬಗ್ಗೆ ಒಂದಿಷ್ಟು ಮಾತು ಅಪ್ಪಾ ….ಲೋಕ ಮೆಚ್ಚದಿರಬಹುದು ನಿನ್ನ…..ನನಗಂತೂ ನೀನು ಅಪರಂಜಿ ಅಪ್ಪಟ ಚಿನ್ನ . ಅಪ್ಪ ಅಂದರೆ ಆಕಾಶ.