ಇತ್ತೀಚಿನ ಸುದ್ದಿ
ಆ್ಯಂಟಿ ಡ್ರಗ್ ತಂಡದ ಕಾರ್ಯಾಚರಣೆ: ಮಾದಕ ವಸ್ತು ಮಾರುತ್ತಿದ್ದ ಇಬ್ಬರ ಬಂಧನ; 21 ಲಕ್ಷಕ್ಕೂ ಅಧಿಕ ಮೌಲ್ಯದ ಸೊತ್ತು ವಶ
05/02/2024, 22:31
ಮಂಗಳೂರು(reporterkarnataka.com): ನಗರದ ಬಲ್ಮಠ ನ್ಯೂ ರೋಡ್ ಸಮೀಪ ಸಾರ್ವಜನಿಕ ರಸ್ತೆ ಬದಿಯಲ್ಲಿ ಮಾದಕ ವಸ್ತುಗಳ ಮಾರಾಟದಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮಾದಕ ದ್ರವ್ಯ ವ್ಯಸನ, ನಿಯಂತ್ರಣ ಮತ್ತು ಮಾರಾಟ ತಡೆಗಟ್ಟು ನಿಟ್ಟಿನಲ್ಲಿ ಮಂಗಳೂರು ಪೊಲೀಸ್ ಆಯುಕ್ತರ ಆದೇಶದಂತೆ ರಚಿತವಾಗಿರುವ ANTI DRUG TEAM ಕೇಂದ್ರ ಉಪ ವಿಭಾಗದ ಸಿಬ್ಬಂದಿಗಳು ನಗರದ ಬಲ್ಮಠ ನ್ಯೂ ರೋಡ್ ನಲ್ಲಿರುವ ಕೆಎಂಸಿ ಆಸ್ಪತ್ರೆಯ ವಿಸಿಟರ್ಸ್ ವಾಹನ ಪಾರ್ಕಿಂಗ್ ಬಳಿ ಸಾರ್ವಜನಿಕ ರಸ್ತೆ ಬದಿಯಲ್ಲಿ ಮಾದಕ ವಸ್ತುಗಳ ಮಾರಾಟದಲ್ಲಿ ತೊಡಗಿದ್ದ ಅತ್ತಾವರ ವೈದ್ಯನಾಥ ನಗರದ ನಿವಾಸಿ ಆದಿತ್ಯ ಕೆ. (29) ಹಾಗೂ ಅಡ್ಯಾರ್ ಪದವು ನಿವಾಸಿ ರೋಹನ್ ಸಿಕ್ಕೇರ (33) ಎಂಬವರನ್ನು
ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 50 ಸಾವಿರ ರೂ. ಮೌಲ್ಯದ ಡ್ರಗ್ಸ್,16,800 ಮೌಲ್ಯದ ಎರಡು ಡಿಜಿಟಲ್ ತೂಕ ಮಾಪಕ, 90 ಸಾವಿರ ರೂ. ಮೌಲ್ಯದ ಎರಡು ಮೊಬೈಲ್ ಫೋನ್ ಮತ್ತು ರೂ 20 ಲಕ್ಷ ಮೌಲ್ಯದ ಕಪ್ಪು ಬಣ್ಣದ ಹುಂಡೈ ಕಂಪೆನಿಯ ವೆರ್ನ ಮಾಡೆಲ್ ನ ಕಾರು ಮತ್ತು ಇತರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳ ವಿರುದ್ಧ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಎನ್.ಡಿ ಪಿಎಸ್ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಲಾಗಿದೆ.
ಕಾರ್ಯಾಚರಣೆಯನ್ನು ಮಂಗಳೂರು ನಗರ ಪೊಲೀಸ್ ನ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಮಾರ್ಗದರ್ಶನದಲ್ಲಿ ಪೊಲೀಸ್ ಆಯುಕ್ತರು ( ಕಾನೂನು ಸುವ್ಯವಸ್ಥೆ), ದಿನೇಶ್ ಕುಮಾರ್ ಉಪ ಪೊಲೀಸ್ ಆಯುಕ್ತರು (ಅಪರಾಧ ಮತ್ತು ಸಂಚಾರ) ರವರ ಮಾರ್ಗದರ್ಶನದಲ್ಲಿ ಕೇಂದ್ರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಪ್ರತಾಪ್ ಸಿಂಗ್ ತೋರಟ್ ಅವರ ನೇತೃತ್ವದಲ್ಲಿ ಮಂಗಳೂರು ಉತ್ತರ ಪೊಲೀಸ್ ಠಾಣೆ ಸಿಬ್ಬಂದಿಗಳು ನಡೆಸಿದರು.