ಇತ್ತೀಚಿನ ಸುದ್ದಿ
ಅನ್ನಭಾಗ್ಯದ ತುತ್ತು ಅನ್ಯರ ಪಾಲಾಗುತ್ತಿದೆ: 1 ಟನ್ ಅಕ್ಕಿ ವಶ; ಅಕ್ರಮ ಬಯಲಿಗೆಳೆದ ರಿಪೋರ್ಟರ್ ಕರ್ನಾಟಕ ವರದಿ
05/06/2021, 14:48

ಮಾಯಪ್ಪ ಪಾಟ್ಲು ಲೋಖಂಡೆ ವಿಜಯಪುರ
info.reporterkarnataka@gmail.com
ವಿಜಯಪುರ ತಾಲೂಕಿನ ಮಖಣಾಪೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿರನಾಳದಲ್ಲಿ ಇಂದು ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 1 ಟನ್ ಅನ್ನಭಾಗ್ಯದ ಅಕ್ಕಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಟಾಂಟಾಂ ವಾಹನದಲ್ಲಿ ಅನ್ನಭಾಗ್ಯಕ್ಕೆ ಸೇರಿದ ಅಕ್ಕಿಯನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಅಕ್ಕಿ ಶಿರನಾಳ ನ್ಯಾಯಬೆಲೆ ಅಂಗಡಿಗೆ ಸೇರಿದ್ದು ಎನ್ನಲಾಗಿದೆ. ಈ ಪ್ರದೇಶವು ತಿಡಗುಂದಿ ಉಪ ಠಾಣೆ ವ್ಯಾಪ್ತಿಗೆ ಬರುತ್ತದೆ. ರಿಪೋರ್ಟರ್ ಕರ್ನಾಟಕದ ವಿಜಯಪುರ ತಾಲೂಕು ವರದಿಗಾರ ಮಾಯಪ್ಪ ಪಾಟ್ಲು ಲೋಖಂಡೆ ಅವರು ಸ್ಥಳೀಯರ ನೆರವಿನಿಂದ ಈ ಕಾರ್ಯಾಚರಣೆ ನಡೆಸಿ ಅಕ್ಕಿಯನ್ನು ವಶಪಡಿಸಿಕೊಂಡು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಮಾಯಪ್ಪ ಅವರು ಟಾಂಟಾಂ ಚಾಲಕನನ್ನು ವಿಚಾರಿಸಿದಾಗ ಅಕ್ಕಿಯನ್ನು ಶಿರನಾಳ ರೇಶನ್ ಅಂಗಡಿಯಿಂದ ತಂದಿರುವುದಾಗಿ ತಿಳಿಸಿದ್ದಾರೆ. ಘಟನೆಯ ಕುರಿತು ಮಾಯಪ್ಪ
ಅವರು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ ಅವರಿಗೆ ತಿಳಿಸಿದ್ದು, ಆಹಾರ ಮತ್ತು ನಾಗರಿಕ ಪೂರೈಕೆ ಉಪ ನಿರ್ದೇಶಕ ಉಸ್ತುವಾರಿಯಲ್ಲಿ ತನಿಖೆ ನಡೆಸುವಂತೆ ಸಚಿವರು
ಆದೇಶಿಸಿದ್ದಾರೆ. ಆಹಾರ ನಿರೀಕ್ಷಕರು ಈಗಾಗಲೇ ಸ್ಥಳಕ್ಕೆ ಆಗಮಿಸಿದ್ದಾರೆ. ಅಕ್ಕಿಯನ್ನು ವಿಜಯಪುರ ಪಟ್ಟಣಕ್ಕೆ ಸಾಗಿಸಲಾಗುತ್ತಿತ್ತು. ಅಕ್ಕಿಯ ಚೀಲದಲ್ಲಿ ಅನ್ನಭಾಗ್ಯ ಸೀಲ್ ಇದೆ.
ಸಾಮಾಜಿಕ ಕಾರ್ಯಕರ್ತರು ಆಗಿರುವ ಮಾಯಪ್ಪ ಅವರ ತಾಯಿ
ಗಂಗೂಬಾಯಿ ಪಾಟ್ಲು ಲೋಖಂಡೆ ಅವರು ಮಖಣಾಪೂರ ಗ್ರಾಮ ಪಂಚಾಯಿತಿ ಸದಸ್ಯೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ರಾಜ್ಯದಲ್ಲಿ ಬಡವರಿಗೆ ಸೇರಿದ ಅನ್ನಭಾಗ್ಯದ ಅಕ್ಕಿ ಅಕ್ರಮ ಸಾಗಾಟ ದಿನ ಕಳೆದಂತೆ ಹೆಚ್ಚಾಗುತ್ತಿರುವುದು ಕಳವಳಕಾರಿಯಾಗಿದೆ. ಅನ್ನಭಾಗ್ಯದ ಅಕ್ಕಿಯನ್ನು ಕದ್ದು ಖಾಸಗಿ ಗೋದಾಮಿಗೆ ಕೊಂಡೋಗಿ ಅಲ್ಲಿ ಅದನ್ನು ಬೇರೆ ಚೀಲಕ್ಕೆ ತುಂಬಿಸಿ ಮಾರಾಟ ಮಾಡುವ ಜಾಲ ಇಡೀ ರಾಜ್ಯದಲ್ಲಿ ಹಬ್ಬಿದೆ.