2:51 PM Tuesday22 - April 2025
ಬ್ರೇಕಿಂಗ್ ನ್ಯೂಸ್
Karnataka BJP | ಹಾವೇರಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ಸರಕಾರದ ವಿರುದ್ಧ… DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ…

ಇತ್ತೀಚಿನ ಸುದ್ದಿ

ಹೆಣ್ಣಿನ ದೃಷ್ಟಿಕೋನದಿಂದ ಪುರಾಣಗಳನ್ನು ವಿಶ್ಲೇಷಿಸುವುದು ಸಮಕಾಲೀನ ಆದ್ಯತೆ ಆಗಬೇಕು: ಡಾ.ವಿನಯಾ ಒಕ್ಕುಂದ

21/03/2025, 12:32

ಬೆಂಗಳೂರು(reporterkarnataka.com): ಪುರುಷ ಪ್ರಧಾನ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ನಮ್ಮ ಪುರಾಣಗಳನ್ನು ಹೆಣ್ಣಿನ ದೃಷ್ಟಿಕೋನದಿಂದ ವಿಶ್ಲೇಷಿಸುವುದು ಸಮಕಾಲೀನ ಆದ್ಯತೆ ಆಗಬೇಕು. ಆ ಮೂಲಕ ಪುರಾಣ ಮತ್ತು ಸಾಹಿತ್ಯ ಕೃತಿಗಳಲ್ಲಿ ಸ್ತ್ರೀ ಸಂವೇದನೆಯನ್ನು, ಸ್ತ್ರೀ ಸಬಲೀಕರಣವನ್ನು ಹುಡುಕುವ ಪ್ರಯತ್ನ ಮಾಡಬೇಕಿದೆ ಎಂದು ಖ್ಯಾತ ಬರಹಗಾರ್ತಿ ಡಾ. ವಿನಯಾ ಒಕ್ಕುಂದ ಅಭಿಪ್ರಾಯಪಟ್ಟಿದ್ದಾರೆ. ಅವರು ಕನ್ನಡ ಪುಸ್ತಕ ಪ್ರಾಧಿಕಾರವು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಬೆಂಗಳೂರಿನ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಆಯೋಜಿಸಿದ್ದ “ಅಂಗಳದಲ್ಲಿ ತಿಂಗಳ ಪುಸ್ತಕ” ಕಾರ್ಯಕ್ರಮದಲ್ಲಿ ಡಾ. ಧರಣೀದೇವಿ ಮಾಲಗತ್ತಿ ಅವರ “ಇಳಾಭಾರತಂ” ಕೃತಿಯನ್ನು ಕುರಿತು ಮಾತನಾಡುತ್ತಿದ್ದರು.
ಕರಾವಳಿ ತೀರದ ಸಾಂಪ್ರದಾಯಿಕ ಹಿನ್ನೆಲೆಯಿಂದ ಬಂದ ಡಾ. ಧರಣೀದೇವಿ ಮಾಲಗತ್ತಿ ಅವರು ಭಾಮಿನಿ ಷಡ್ಪದಿಯಲ್ಲಿ “ಇಳಾಭಾರತಂ” ಕೃತಿ ರಚಿಸುವ ಮೂಲಕ ಸಮಕಾಲೀನ ಕನ್ನಡ ಸಾಹಿತ್ಯಕ್ಕೆ ಉತ್ಕೃಷ್ಟ ಕೊಡುಗೆ ಕೊಟ್ಟಿದ್ದಾರೆ. ಛಂದಸ್ಸು, ವ್ಯಾಕರಣಗಳನ್ನು ಮೀರಿ ಕನ್ನಡ ಸಾಹಿತ್ಯ ಹೊಸ ಹಾದಿಗಳನ್ನು ಹುಡುಕುತ್ತಿರುವಾಗ ಹಳೆಯ ಭಾಮಿನಿ ಷಡ್ಪದಿಯಲ್ಲಿ ಕಾವ್ಯ ರಚನೆ ಮಾಡಿರುವುದು ಇವರ ಹೆಗ್ಗಳಿಕೆ ಎಂದು ಅವರು ಹೇಳಿದರು.
ಮಹಾಭಾರತ ಮತ್ತು ಮಹಾಭಾರತ ಪೂರ್ವದ ಹಲವು ಪ್ರಸಂಗಗಳನ್ನು ಕಾವ್ಯ ವಸ್ತು ಮಾಡಿಕೊಂಡಿರುವ “ಇಳಾಭಾರತಂ” ಹೆಣ್ಣಿನ ಕಣ್ಣೋಟದಲ್ಲಿ ಅವಳ ತುಮಲಗಳನ್ನು ಸಾಕ್ಷೀಕರಿಸುವ ಪ್ರಯತ್ನವನ್ನು ಮಾಡುತ್ತದೆ. ಆ ಮೂಲಕ ಮಹಿಳಾ ಅಭಿವ್ಯಕ್ತಿಯ ಚರಿತ್ರೆಯ ಮಹತ್ವವನ್ನು ಸಾರುತ್ತದೆ ಎಂದು ಹೇಳಿದರು. ಪುರುಷ ನಿರ್ಮಿತ ದೃಷ್ಟಿಕೋನವನ್ನು ಒಡೆದು ಹೆಣ್ಣಿನ ಬಿಕ್ಕಟ್ಟನ್ನು ಸಾಕ್ಷೀಕರಿಸಲು ಈ ಕೃತಿ ಪ್ರಯತ್ನಪಡುತ್ತದೆ ಎಂದು ಹೇಳಿದ ಅವರು, ಇದಕ್ಕೆ ಅತ್ಯುತ್ತಮ ಉದಾಹರಣೆಯೆಂದರೆ ಭೀಷ್ಮ ಇಡೀ ಮಹಾಭಾರತದಲ್ಲಿ ಚಿತ್ರಿತವಾದ ರೀತಿ. “ಇಳಾಭಾರತಂ”ನಲ್ಲಿ ಭೀಷ್ಮನನ್ನು ಒಬ್ಬ ಮಹಿಳೆಯ ದೃಷ್ಟಿಕೋನದಿಂದ ನೋಡಿದಾಗ ಆತನ ಇಡಿ ವ್ಯಕ್ತಿತ್ವ ಚೂರಾಗುವುದನ್ನು ಕಾಣಬಹುದಾಗಿದೆ ಎಂದರು. ಆತ್ಮಮೋಹಕ್ಕೆ ಒಳಗಾದ ಭೀಷ್ಮ, ಆತನ ಬದುಕಿನಲ್ಲಿ ಬರುವ ಎಲ್ಲ ಹೆಣ್ಣುಗಳ ದೃಷ್ಟಿಯಲ್ಲಿ ಹೇಗೆ ಕಾಣಬಹುದು ಎಂಬುದನ್ನು “ಇಳಾಭಾರತಂ” ಅತ್ಯಂತ ಶಕ್ತವಾಗಿ ಹೇಳುತ್ತದೆ, ಪುರಾಣದ ಚೌಕಟ್ಟಿನ ಒಳಗೆ ಆಧುನಿಕ ದೃಷ್ಟಿಕೋನದ ಮಹಾಭಾರತವನ್ನು ಈ ಕೃತಿ ಕಟ್ಟಿಕೊಟ್ಟಿದೆ ಎಂದು ತಿಳಿಸಿದರು. ಈ ಕೃತಿಯಲ್ಲಿ ಬರುವ ಸತ್ಯವತಿಯ ಪ್ರಯಾಣ ಮುಕ್ತಾಯವಾಗುವುದಿಲ್ಲ. ಏಕೆಂದರೆ ಆ ಪ್ರಯಾಣಕ್ಕೆ ಅನೇಕರು ಜೊತೆಗೂಡಬೇಕಾದ ಅವಶ್ಯಕತೆ ಇದೆ. ಗಂಡು ಪ್ರಜ್ಞೆಯು ಅದಕ್ಕೆ ಜೊತೆಯಾಗಬೇಕು. ಆಗ ಆ ಕೃತಿಗೆ ಸಾರ್ಥಕತೆ ಬರುತ್ತದೆ ಎಂದು ವಿನಯಾ ಒಕ್ಕುಂದ ಅಭಿಪ್ರಾಯಪಟ್ಟರು.


ಸಮಾರಂಭದಲ್ಲಿ ಉಪಸ್ಥಿತರಿದ್ದ ಕೃತಿಯ ಲೇಖಕಿ ಡಾ. ಧರಣೀದೇವಿ ಮಾಲಗತ್ತಿ ಅವರು ಮಾತನಾಡಿ ನಮ್ಮ ಸಂವಿಧಾನವನ್ನು ಧರ್ಮಗ್ರಂಥವೆಂದು ಭಾವಿಸಿ ಬದುಕಬೇಕು ಎಂಬುದೇ ಈ ಕೃತಿಯ ಮೂಲ ಆಶಯವಾಗಿದೆ. ನಾವು ಸಮಾನತೆ, ಸ್ತ್ರೀ ಸಬಲಿಕರಣ, ಇತ್ಯಾದಿಗಳನ್ನು ನಮ್ಮ ಸಂವಿಧಾನದಲ್ಲಿ ಹೇಗೆ ಬಳಸಿದ್ದೇವೆಯೋ, ನಮ್ಮ ಪುರಾಣಗಳಲ್ಲಿಯೂ ಆ ದೃಷ್ಟಿಕೋನದ ಕಥಾನಕಗಳನ್ನು ನೋಡಬೇಕಿದೆ. ಹಾಗಾಗಿ ಈ ಕೃತಿಗಳ ಫಲಶೃತಿಯನ್ನು ಮೂರು ಭಾಗವಾಗಿ ವಿಂಗಡಿಸಬಹುದಾಗಿದೆ ಎಂದರು.
ಪುರುಷನನ್ನು ಪೂಜಿಸುವ ಮಹಿಳೆ, ಪುರುಷನಿಗೆ ಸರಿಸಮಾನವಾದ ಸ್ಥಾನ ಪಡೆದ ಮಹಿಳೆ ಹಾಗೂ ಪುರುಷನಿಗೆ ಅಡಿಯಾಳಾಗಿ ಬದುಕುವ ಮಹಿಳೆ ಹೀಗೆ ಮೂರು ಬಗೆಯ ಮಹಿಳೆಯ ಬದುಕನ್ನು ಹೇಳಿ ಆಯ್ಕೆ ಮಾಡುವ ಪ್ರಜ್ಞೆಯನ್ನು ಸಮಾಜಕ್ಕೆ ಬಿಟ್ಟುಕೊಡುವ ಕೃತಿ ಇಳಾಭಾರತಂ ಆಗಿದೆ ಎಂದರು.
ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಅವರು ಮಾತನಾಡಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಮಾಸದಲ್ಲಿ ಇಳಾಭಾರತಂ ಕೃತಿಯನ್ನು ಆರಿಸಿಕೊಂಡದ್ದು ಮಹಿಳಾ ಪ್ರಜ್ಞೆ ಮತ್ತು ಮಹಿಳಾ ಸಂವೇದನೆಯನ್ನು ಗೌರವಿಸುವ ಹೆಜ್ಜೆಗಾಗಿದೆ ಎಂದರು. ಈ ಕೃತಿ ಶತಮಾನಗಳಷ್ಟು ಹಳೆಯದಾದರು ಅದರಲ್ಲಿ ಮಹಿಳೆಗೆ ಆಸ್ತಿ ಹಕ್ಕನ್ನು ಪ್ರತಿಪಾದಿಸುವ ಒಂದು ಪ್ರಸಂಗ ಉಲ್ಲೇಖವಾಗಿರುವುದು ಅತ್ಯಂತ ವಿಶೇಷವಾಗಿದೆ. ಮನುಚಕ್ರವರ್ತಿಗೆ ವಸಿಷ್ಠ ಮಹಾಋಷಿ ಆತನ ಮಗಳಾದ ಇಳಾಗೂ ಕೂಡ ಸಮಾನ ರಾಜ್ಯ ಹಂಚಿಕೆ ಮಾಡಬೇಕೆಂದು ಸೂಚಿಸುತ್ತಾರೆ. ಅದರಂತೆ ಮನು ಇಳಾಗೆ ರಾಜ್ಯವೊಂದನ್ನು ನೀಡುತ್ತಾನೆ. ಇದು ಮಹಿಳಾ ಸಬಲೀಕರಣದ, ಮಹಿಳೆಯ ಹಕ್ಕುಗಳನ್ನು ಪ್ರತಿಪಾದಿಸುವ ನಿಟ್ಟಿನಲ್ಲಿ ಅತ್ಯಂತ ಮಹತ್ವದ್ದಾಗುತ್ತದೆ ಎಂದು ಅವರು ನುಡಿದರು.
ಸಮಾರಂಭದಲ್ಲಿ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಸಿ. ಉಷಾದೇವಿ, ಭಾಷಾ ನಿಕಾಯದ ನಿರ್ದೇಶಕರಾದ ಡಾ. ಕೆ.ವೈ. ನಾರಾಯಣ ಸ್ವಾಮಿ, ವಿಶ್ವವಿದ್ಯಾಲಯದ ಕುಲಸಚಿವ ಎಸ್. ಸತೀಶ್ ಹಾಜರಿದ್ದರು. ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಕೆ.ಬಿ. ಕಿರಣ್ ಸಿಂಗ್ ಸ್ವಾಗತಿಸಿದರು. ಮಹಾರಾಣಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಎಸ್. ಶಾಂಭವಿ ವಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು