ಇತ್ತೀಚಿನ ಸುದ್ದಿ
ಅಂಬೇಡ್ಕರ್ ವೃತ್ತ ಹೆಸರಿಡಲು ಕೈಗೊಂಡ ನಿರ್ಣಯದ ಪ್ರತಿ ಪಾಲಿಕೆಯಲ್ಲಿ ಇಲ್ಲವಂತೆ: ದಲಿತ ಮುಖಂಡರ ಆಕ್ರೋಶ; ಕ್ರಮಕ್ಕೆ ಆಗ್ರಹ
25/03/2024, 14:28
ಮಂಗಳೂರು( reporterkarnataka.com): ನಗರದ ಬಲ್ಮಠ ಬಳಿಯ ಜ್ಯೋತಿ ಟಾಕೀಸ್ ಬಸ್ ನಿಲ್ದಾಣದ ವೃತ್ತಕ್ಕೆ ಅಂಬೇಡ್ಕರ್ ವೃತ್ತ ಎಂದು ಹೆಸರಿಡಲು ಕೈಗೊಂಡ ನಿರ್ಣಯದ ಬಗ್ಗೆ ವಿವರ ನೀಡುವಂತೆ ಮಂಗಳೂರು ಮಹಾನಗರಪಾಲಿಕೆಗೆ ಪತ್ರ ಬರೆದರೆ ಅದಕ್ಕೆ ಅಧಿಕಾರಿಗಳು ಅಂತಹ ನಿರ್ಣಯದ ಪ್ರತಿಯೇ ನಮ್ಮಲ್ಲಿಲ್ಲ ಎಂದು ಉತ್ತರಿಸಿದ್ದಾರೆ ಎಂದು ದಲಿತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳೂರು ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಭಾನುವಾರ ಡಿಸಿಪಿ ದಿನೇಶ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಎಸ್‌ಸಿ- ಎಸ್‌ಟಿ ಕುಂದುಕೊರತೆ ಸಭೆಯಲ್ಲಿ ದಲಿತ ಮುಖಂಡ ವಿಶ್ವನಾಥ್ ಪ್ರಸ್ತಾಪಿಸಿದರು.
ಇದು ಸಂವಿಧಾನದ ಶ್ರೇಷ್ಠ ವ್ಯಕ್ತಿಯ ಹೆಸರನ್ನು ಮಂಗಳೂರಿನ ವೃತ್ತಕ್ಕೆ ಇರಿಸುವಲ್ಲಿ ಮಾಡಿದ ಅವಮಾನ ಎಂದು ದಲಿತ ಮುಖಂಡರು ಆರೋಪಿಸಿದರು.ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಡಿಸಿಪಿ ದಿನೇಶ್ ಕುಮಾರ್
ಇದಕ್ಕೆ ಉತ್ತರಿಸಿ,ಈ ಬಗ್ಗೆ ಜಿಲ್ಲಾಧಿಕಾರಿಗೆ ಪತ್ರ ಬರೆಯುವುದಾಗಿ ಹೇಳಿದರು.
ನಗರದ ಕುದ್ಕೊಳಿಗುಡ್ಡದಲ್ಲಿ ದಲಿತರು ಆರಾಧಿಸಿಕೊಂಡು ಬರುತ್ತಿರುವ ಕೊರಗಜ್ಜನ ಸಾನ್ನಿಧ್ಯ ಇದೆ. ಅಲ್ಲಿ ಈಗ ಹಿಂದು ಯುವಸೇನೆ ಸಂಘಟನೆ ಇನ್ನೊಂದು ಕೊರಗಜ್ಜನ ಸಾನ್ನಿಧ್ಯ ನಿರ್ಮಿಸಲು ಹೊರಟಿದೆ. ಈ ಬಗ್ಗೆ ದಲಿತ ಸಂಘಟನೆಗಳು ಆಕ್ಷೇಪಿಸಿದರೂ ವೇದಿಕೆ ನಿರ್ಮಿಸಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿವೆ. ಅಲ್ಲಿ ದಲಿತರು ಪಾಲ್ಗೊಳ್ಳಲು ಅವಕಾಶ ನೀಡುತ್ತಿಲ್ಲ. ಇದು ದಲಿತ ನಿಂದನೆಯಾಗುತ್ತದೆ ಎಂದು ದಲಿತ ಮುಖಂಡ ಅನಿಲ್ ಆರೋಪಿಸಿದರು. ಅಲ್ಲಿಗೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚನೆ ನೀಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಎಸ್‌ಸಿ ಎಸ್‌ಟಿ ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯೊಬ್ಬರ ವಿರುದ್ಧ ಮಾತನಾಡಿದ್ದಕ್ಕೆ ನನ್ನ ವಿರುದ್ಧ ನಕಲಿ ದೂರು ನೀಡಲಾಗಿದೆ. ನನ್ನ ವಿಳಾಸಕ್ಕೆ ನನ್ನ ನಕಲಿ ಸಹಿ ಬಳಸಿ ದೂರು ಪತ್ರ ರವಾನಿಸಿದ್ದು, ಇದರ ವಿರುದ್ಧ ತನಿಖೆ ನಡೆಸುವಂತೆ ದಲಿತ ಮುಖಂಡ ವಿಶ್ವನಾಥ್ ಆಗ್ರಹಿಸಿದರು. ಜಿಲ್ಲಾಧಿಕಾರಿ ಕಚೇರಿಗೆ ಈ ದೂರು ಪತ್ರ ರವಾನೆಯಾಗಿದ್ದು, ಸಿಸಿ ಕ್ಯಾಮರಾ ಪರಿಶೀಲಿಸಿದರೆ, ದೂರು ನೀಡಿದ ವ್ಯಕ್ತಿಯನ್ನು ಪತ್ತೆಹಚ್ಚಲು ಸಾಧ್ಯವಿದೆ ಎಂದು ವಿಶ್ವನಾಥ್ ಹೇಳಿದರು. ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಡಿಸಿಪಿ ದಿನೇಶ್ ಕುಮಾರ್ ಪೊಲೀಸರಿಗೆ ಸೂಚನೆ ನೀಡಿದರು.
ಮೂಡುಬಿದಿರೆಯಲ್ಲಿ ಹಳೆ ಕಟ್ಟಡ ದುರಸ್ತಿಗೆ ಸ್ಥಳೀಯರೊಬ್ಬರು ಅವಕಾಶ ನೀಡುತ್ತಿಲ್ಲ, ಅದಕ್ಕೆ ಪುರಸಭೆಯವರೂ ಸಾಥ್ ನೀಡುತ್ತಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದಲಿತ ಮುಖಂಡರೊಬ್ಬರು ಆಗ್ರಹಿಸಿದರು.
ವಿಕಲಚೇತನರನ್ನು ಕರೆದುಕೊಂಡು ಬರುತ್ತಿದ್ದ ವಾಹನವನ್ನು ತಡೆದು ಓವರ್‌ಲೋಡ್ ಕಾರಣಕ್ಕೆ ಸಂಚಾರಿ ಪೊಲೀಸರು ಕೇಸು ಹಾಕಿದ್ದಾರೆ. ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಇಂತಹ ವಿಚಾರದಲ್ಲಿ ಪೊಲೀಸರು ಮಾನವೀಯತೆಯಿಂದ ವರ್ತಿಸಬೇಕು ಎಂದು ದಲಿತ ಮುಖಂಡರೊಬ್ಬರು ಪ್ರಸ್ತಾಪಿಸಿದರು. ಸಾಮಾಜಿಕ ಜಾಲತಾಣಗಳಲ್ಲಿ ದಲಿತರನ್ನು ಅವಮಾನಿಸಲಾಗುತ್ತಿದೆ. ಈ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ದಲಿತರು ಮುಖಂಡರು ಒತ್ತಾಯಿಸಿದರು.
ಎಸಿಪಿ ಧನ್ಯಾ ನಾಯಕ್ ಕಾರ್ಯಕ್ರಮ ನಿರೂಪಿಸಿದರು.