ಇತ್ತೀಚಿನ ಸುದ್ದಿ
ಅಕ್ರಮ ಮದ್ಯ ನುಸುಳುವಿಕೆ: ಗಡಿಗಳಲ್ಲಿ ತೀವ್ರ ನಿಗಾ ವಹಿಸಲು ಅಬಕಾರಿ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚನೆ
14/09/2023, 22:08
ಬೆಂಗಳೂರು(reporterkarnataka.com): ರಾಜ್ಯದಲ್ಲಿ ತೆರಿಗೆ ಸೋರಿಕೆಯನ್ನು ತಡೆದು ಆದಾಯವನ್ನು ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಅಬಕಾರಿ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು.
ಗಡಿ ಭಾಗಗಳ ಚೆಕ್‌ಪೋಸ್ಟಿನಲ್ಲಿ ಹೋಂ ಗಾರ್ಡ್‌ಗಳ ಸೇವೆ ಪಡೆದುಕೊಂಡು, ತಪಾಸಣೆಯನ್ನು ಇನ್ನಷ್ಟು ಬಲ ಪಡಿಸಲು ಹಾಗೂ ಇತರ ಸೌಲಭ್ಯಕ್ಕಾಗಿ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು.
ಎಲ್ಲ ಕಡೆ ಜಾಗೃತದಳ ಕಟ್ಟೆಚ್ಚರ ವಹಿಸಬೇಕು. ಎಲ್ಲ ಉಪ ಆಯುಕ್ತರು ರಾಜಸ್ವ ಸಂಗ್ರಹ ಹೆಚ್ಚಳಕ್ಕೆ ಆದ್ಯತೆ ನೀಡಬೇಕು. ಹಾಗೆ ಹಳೆ ಬಾಕಿ ತೆರಿಗೆ ಸಂಗ್ರಹಿಸಲು ಕ್ರಮ ಕೈಗೊಳ್ಳಲು ಸಿಎಂ ಸೂಚಿಸಿದರು.
ಕಳ್ಳಭಟ್ಟಿಗೆ ಕಡಿವಾಣ ಹಾಕಿ, ಅಕ್ರಮ ಮದ್ಯ ನುಸುಳುವಿಕೆ ತಪ್ಪಿಸಿ, ಬಾಕಿ ತೆರಿಗೆ ವಸೂಲಿ ಮಾಡಿ ತೆರಿಗೆ ಸಂಗ್ರಹದಲ್ಲಿ ನಿಗದಿತ ಗುರಿ ಸಾಧಿಸಿ ಎಂದು ಮುಖ್ಯಮಂತ್ರಿ ತಿಳಿಸಿದರು.
ಇಲಾಖೆಯ ಪ್ರಸಕ್ತ ವರ್ಷದ ರಾಜಸ್ವ ಸಂಗ್ರಹ ಗುರಿ 36,000 ಕೋಟಿ ಇದ್ದು, ತೆರಿಗೆ ಸಂಗ್ರಹದ ಬೆಳವಣಿಗೆ ದರ 5.31% ರಷ್ಟಿದೆ. ನಿಗದಿತ ಗುರಿ ಸಾಧನೆಗೆ ಎಲ್ಲ ಅಧಿಕಾರಿಗಳು ಶ್ರಮಿಸಬೇಕು ಎಂದು ಮುಖ್ಯಮಂತ್ರಿಗಳು ಸೂಚಿಸಿದರು.
ರಾಜ್ಯದ ಗಡಿ ಭಾಗಗಳಲ್ಲಿ, ವಿಶೇಷವಾಗಿ ಗೋವಾ ರಾಜ್ಯದಿಂದ ಅಕ್ರಮ ಮದ್ಯ ಸಾಗಾಣಿಕೆ ಕುರಿತು ಜಾರಿ ದಳದವರು ಹೆಚ್ಚಿನ ನಿಗಾ ವಹಿಸಬೇಕು. ಕಳ್ಳಭಟ್ಟಿ ಮದ್ಯ ತಯಾರಿಕೆ, ಮಾರಾಟದಿಂದ ಬಡವರ ಆದಾಯ ಮತ್ತು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದರಿಂದ ಕಳ್ಳಭಟ್ಟಿ ಮದ್ಯ ತಯಾರಿಕೆ ಮತ್ತು ಮಾರಾಟವನ್ನು ಮಟ್ಟಹಾಕುವಂತೆ ಎಂದು ಮುಖ್ಯಮಂತ್ರಿಗಳು ಸ್ಪಷ್ಟವಾಗಿ ಸೂಚಿಸಿದರು.
ಅಬಕಾರಿ ಇಲಾಖೆಯಲ್ಲಿ ಸುಧಾರಣಾ ಕ್ರಮಗಳ ಕುರಿತು ಪ್ರತ್ಯೇಕ ಸಭೆ ನಡೆಸಿ ಚರ್ಚಿಸುವುದಾಗಿ ತಿಳಿಸಿದರು.
ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯಲ್, ಹಣಕಾಸು ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್, ಹಣಕಾಸು ಇಲಾಖೆಯ ಕಾರ್ಯದರ್ಶಿಗಳಾದ ಡಾ. ಪಿ.ಸಿ. ಜಾಫರ್ ಹಾಗೂ ಡಾ. ಎಂ.ಟಿ. ರೇಜು, ಅಬಕಾರಿ ಆಯುಕ್ತ ರವಿಶಂಕರ್, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಗಳಾದ ಕೆ. ಗೋವಿಂದರಾಜು ಮತ್ತು ನಸೀರ್ ಅಹ್ಮದ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.